ಉಡುಪಿ: ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಗುರುವಾರ ದಿನವಿಡೀ ಧಾರಾಕಾರ ಮಳೆ ಸುರಿದಿದ್ದು, ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಗುರುವಾರ ಬೆಳಿಗ್ಗೆ ಗಾಳಿ ಸಹಿತ ಧಾರಾಕಾರ ಮಳೆ ಸುರಿದ ಕಾರಣ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಕೆಲಸಕ್ಕೆ ತೆರಳುವವರಿಗೆ ತೊಂದರೆಯುಂಟಾಯಿತು.
ಉಡುಪಿ ನಗರದ ಕೆಲವೆಡೆ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು. ಬ್ರಹ್ಮಗಿರಿಯಲ್ಲಿರುವ ಆರೋಗ್ಯ ಇಲಾಖೆಯ ಕಚೇರಿ ಆವರಣದಲ್ಲಿ ಮರ ಬಿದ್ದು, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯುಂಟಾಗಿದೆ.
ಬಿರುಸಿನ ಮಳೆಯ ಕಾರಣ ಬೈಂದೂರು ಹಾಗೂ ಹೆಬ್ರಿ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು.
ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕಾರ್ಕಳದಲ್ಲಿ 9 ಸೆಂ.ಮೀ., ಕುಂದಾಪುರದಲ್ಲಿ 8 ಸೆಂ.ಮೀ., ಉಡುಪಿಯಲ್ಲಿ 5 ಸೆಂ.ಮೀ., ಬೈಂದೂರಿನಲ್ಲಿ 12 ಸೆಂ.ಮೀ., ಬ್ರಹ್ಮಾವರದಲ್ಲಿ 6 ಸೆಂ.ಮೀ., ಕಾಪುವಿನಲ್ಲಿ 7 ಸೆಂ.ಮೀ, ಹೆಬ್ರಿಯಲ್ಲಿ 7 ಸೆಂ.ಮೀ. ಮಳೆಯಾಗಿದೆ.
ಉಡುಪಿಯ ಕುತ್ಪಾಡಿಯ ಶಾರದಾ ಪೂಜಾರ್ತಿ ಎಂಬುವವರ ಮನೆ, ಮಳೆಗೆ ಸಂಪೂರ್ಣವಾಗಿ ಹಾನಿಯಾಗಿ ₹1.5 ಲಕ್ಷ ನಷ್ಟ ಉಂಟಾಗಿದೆ.
ಕುಂದಾಪುರದ ಕುಂದಬಾರಂದಾಡಿ, ಅಂಪಾರು, ಬೇಳೂರು, ದೇವಲ್ಕುಂದ, ಹೊಸಂಗಡಿ, ಕುಂದಾಪುರ ಕಸಬಾ, ಅಸೋಡು, ಸಿದ್ಧಾಪುರ, ಕೊರ್ಗಿಯಲ್ಲಿ ಮರಬಿದ್ದು ಮನೆಗಳು ಭಾಗಶಃ ಹಾನಿಗೊಂಡಿವೆ.
ಕಾಪುವಿನ ಹೆಜಮಾಡಿ, ಕಳತೂರು, ಉಳಿಯಾರಗೋಳಿ, ಕುತ್ಯಾರು, ಎಲ್ಲೂರು, ಕೋಟೆ, ಪಡು, ಬ್ರಹ್ಮಾವರದ ನಡೂರು, ಹಂದಾಡಿ, ಬಿಲ್ಲಾಡಿ, ಪಾರಂಪಳ್ಳಿ, ಬೈಂದೂರಿನ ನಾಡ ಮೊದಲಾದೆಡೆ ಮನೆಗಳು ಭಾಗಶಃ ಹಾನಿಗೀಡಾಗಿವೆ.
ಬೈಂದೂರು ತಾಲೂಕಿನಾದ್ಯಂತ ಮಳೆ ನಿರಂತರವಾಗಿ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಕೃಷಿ ತೋಟ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಬುಧವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ತಾಲ್ಲೂಕಿನ ಬಿಜೂರು ಗ್ರಾಮದ ಕಂಚಿಕಾನಿನ ಮನೆಯೊಂದರ ಮಾಡು ಗೋಡೆ ನೆಲಸಮವಾಗಿದೆ.
ಬಿಜೂರು ಗ್ರಾಮದ ಕಂಚಿಕಾನ್ ಉಪಾಧ್ಯಾಯರಹಿತ್ಲುವಿನ ದುರ್ಗಿ ಪೂಜಾರ್ತಿ ಅವರ ಮನೆಗೆ ಹಾನಿಯಾಗಿದೆ. ಮನೆಯಲ್ಲಿ ರಾತ್ರಿ ವಯೋವೃದ್ಧರು ಸೇರಿದಂತೆ ಮೂವರು ಮಲಗಿದ್ದರು. ಈ ವೇಳೆ ಮಾಡು ಕುಸಿದು ಬಿದ್ದಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಒಂದು ಪಾರ್ಶ್ವದ ಮಾಡು ಗೋಡೆ ಹಾಗೂ ಅಟ್ಟಣಿಗೆಯ ಮಾಡು ಗಾಳಿಯ ರಭಸಕ್ಕೆ ಕುಸಿದು ಬಿದ್ದಿದೆ.
ಬೈಂದೂರು ತಹಶೀಲ್ದಾರ್ ಪ್ರದೀಪ್ ಬಿಜೂರು ಗ್ರಾಮ ಪಂಚಾಯಿತಿ ಸದಸ್ಯ ವೀರೇಂದ್ರ ಶೆಟ್ಟಿ ಗಂಟಿಹೊಳೆ ಪಿಡಿಒ ಗೀತಾ ಕಾರ್ಯದರ್ಶಿ ನಾಗರಾಜ ದೇವಾಡಿಗ ಗ್ರಾಮ ಆಡಳಿತಾಧಿಕಾರಿ ಕಿರಣ ಸಹಾಯಕ ಸುರೇಂದ್ರ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಡುಬಿದ್ರಿ: ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಕೆಲವೆಡೆ ನೆರೆ ಭೀತಿ ಉಂಟಾಗಿದೆ. ಕಾಪು ತಾಲ್ಲೂಕಿನಲ್ಲಿ ಗುರುವಾರ ಭಾರಿ ಮಳೆಯಾಗಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಾಪುವಿನ ಮಲ್ಲಾರು ಕೊಂಬಗುಡ್ಡೆ ಮೂಳೂರು ಮಲ್ಲಾರು ಕುಡ್ತಿಮಾರು ಪರಿಸರದಲ್ಲಿ ನೆರೆ ಉಂಟಾಗಿದೆ. ಮಲ್ಲಾರು ಕುಡ್ತಿಮಾರುವಿನಲ್ಲಿ ಗದ್ದೆಯಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ. ಸಂಚಾರಕ್ಕೆ ಅಡಚಣೆ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.