ADVERTISEMENT

ಪ್ರತಿಬೂತ್‌ಗೆ 200 ಸದಸ್ಯರ ನೋಂದಣಿ ಗುರಿ: ಶೋಭಾ ಕರಂದ್ಲಾಜೆ

‘ವಾಟ್ಸ್ ಆ್ಯಪ್‌ ಗ್ರೂಪ್ ರಚಿಸಿ, ಸಂಚಾಲಕ, ಸಹ ಸಂಚಾಲಕರನ್ನು ನೇಮಿಸಿ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 13:31 IST
Last Updated 29 ಜೂನ್ 2019, 13:31 IST
ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸಂಘಟನಾ ಪರ್ವ, ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದರು.
ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸಂಘಟನಾ ಪರ್ವ, ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದರು.   

ಉಡುಪಿ: ಕ್ಷೇತ್ರದ ಪ್ರತಿಯೊಂದು ಬೂತ್‌ನಲ್ಲಿ ವಾಟ್ಸ್‌ ಆ್ಯಪ್‌ಗ್ರೂಪ್‌ಗಳನ್ನು ರಚಿಸಿ, ಕನಿಷ್ಠ 200 ಸದಸ್ಯರನ್ನು ಪಕ್ಷಕ್ಕೆ ನೋಂದಣಿ ಮಾಡಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸಂಘಟನಾ ಪರ್ವ, ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಬೂತ್‌ಗೆಸಂಚಾಲಕ ಹಾಗೂ ಸಹ ಸಂಚಾಲಕರನ್ನು ನೇಮಿಸಿ, ಸದಸ್ಯತ್ವ ನೋಂದಣಿ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸೂಚಿಸಿದರು.‌

ಕಳೆದ ಬಾರಿ ದೇಶದಾದ್ಯಂತ 11 ಕೋಟಿ ಸದಸ್ಯರನ್ನು ಪಕ್ಷಕ್ಕೆ ನೋಂದಣಿ ಮಾಡಲಾಗಿತ್ತು. ರಾಜ್ಯದಲ್ಲಿ 83 ಲಕ್ಷ ನೋಂದಣಿಯಾದರೆ, ಉಡುಪಿ ಜಿಲ್ಲೆಯಲ್ಲಿ 1.20 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದರು. ಈ ಬಾರಿ ಪರಿಸ್ಥಿತಿ ಬಿಜೆಪಿಯ ಪರವಾಗಿದೆ. ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿಯಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಬೇಕು ಎಂದು ಸೂಚಿಸಿದರು.

ADVERTISEMENT

ಈ ಬಾರಿ ಕರ್ನಾಟಕದಿಂದ ಹೆಚ್ಚುವರಿಯಾಗಿ 50 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಗುರಿ ತಲುಪುವುದು ಕಷ್ಟವಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಿದ್ದ ಮತಗಳ ಸಂಖ್ಯೆಯೇ 1.91 ಕೋಟಿ. ನಾಯಕರು ಹಾಗೂ ಕಾರ್ಯಕರ್ತರು ಶ್ರಮ ಹಾಕಿದರೆ ಸುಲಭವಾಗಿ ಗುರಿ ಸಾಧಿಸಬಹುದು ಎಂದರು.

ಕರ್ನಾಟಕದಲ್ಲಿ ಶೇ 51ರಷ್ಟು ಮತಗಳು ಬಿಜೆಪಿಗೆ ಬಿದ್ದಿದೆ. 25 ಸಂಸದರು ಗೆದ್ದು ಬಂದಿದ್ದಾರೆ. ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಮತಗಳು ಬಿದ್ದಿವೆ. ಹಾಗಾಗಿ ಸದಸ್ಯತ್ವ ನೋಂದಣಿ ಕಾರ್ಯ ಬಿರುಸಿನಿಂದ ಸಾಗಬೇಕಿದೆ ಎಂದರು.

ಮುಂದಿನ 10 ತಿಂಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಬರಲಿದೆ. ನಂತರದ 10 ತಿಂಗಳಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆ ಬರಲಿದೆ. ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ಸಾಗುತ್ತಿರುವುದನ್ನು ನೋಡಿದರೆ ಯಾವ ಸಮಯದಲ್ಲಾದರೂ ವಿಧಾನಸಭೆ ಚುನಾವಣೆ ಎದುರಾಗಬಹುದು. ಕಾರ್ಯಕರ್ತರು ಸನ್ನದ್ಧರಾಗಿರಬೇಕು ಎಂದರು.

25 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದರೂ ರಾಜ್ಯದ ಒಟ್ಟು58 ಸಾವಿರ ಬೂತ್‌ಗಳ ಪೈಕಿ 14 ಸಾವಿರ ಬೂತ್‌ಗಳಲ್ಲಿ ಬಿಜೆಪಿ ‘ಸಿ’ ಗ್ರೂಪ್‌ನಲ್ಲಿ ಸ್ಥಾನಪಡೆದಿದೆ. ಹಾಗಾಗಿ, ಈ ಬಾರಿ ‘ಸಿ’ ಗ್ರೂಪ್‌ಗಳತ್ತ ಆದ್ಯತೆ ನೀಡಬೇಕು. ಇಲ್ಲಿ ಕನಿಷ್ಠ 200 ಮಂದಿ ಸದಸ್ಯರನ್ನು ನೋಂದಣಿ ಮಾಡಿಸಲೇಬೇಕು ಎಂದು ಶೋಭಾ ಹೇಳಿದರು.

ಮೋದಿ ಸರ್ಕಾರದ ಜನಪರ ಆಡಳಿತವನ್ನು ಮತದಾರರಿಗೆ ತಿಳಿಸಿ ಪಕ್ಷದತ್ತ ಸೆಳೆಯಬೇಕು. ಜಿಲ್ಲೆಯಲ್ಲಿ 1111 ಬೂತ್‌ಗಳಿದ್ದು, ಎಲ್ಲ ಬೂತ್‌ಗಳಲ್ಲೂ ವಾಟ್ಸ್‌ ಆ್ಯಪ್‌ ಗ್ರೂಪ್ ರಚಿಸಿ, ಪಕ್ಷದತ್ತ ಸೆಳೆಯಬೇಕು ಎಂದು ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಮುಖಂಡರಾದ ಉದಯ್‌ ಕುಮಾರ್ ಶೆಟ್ಟಿ, ಕುತ್ಯಾರು ನವೀನ್‌ ಶೆಟ್ಟಿ, ಯಶ್‌ಪಾಲ್ ಸುವರ್ಣ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.