
ಕಾರ್ಕಳ: ‘ದೇವಾತಾರಾಧನೆಯು ನಮ್ಮ ದೇಶದ ಸಂಸ್ಕೃತಿಯ ತಿರುಳು. ಋಷಿ ಮುನಿಗಳು, ಸಾಧು ಸಂತರು, ದಾರ್ಶನಿಕರು, ವಚನಕಾರರು, ದಾಸರು, ಸಾಮಾಜಿಕ ಸುಧಾರಕರು ನಮ್ಮ ಜೀವನ ಹೇಗಿರಬೇಕೆಂದು ಎಂದು ಆದರ್ಶ ಗುಣಗಳ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ’ ಎಂದು ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆ ಮುಖ್ಯಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.
ತಾಲ್ಲೂಕಿನ ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ತಾಲ್ಲೂಕು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಲಾದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಅವರು ಪ್ರವಚನ ನೀಡಿದರು.
ದೇವರ ಅನುಗ್ರಹ ಪಡೆದು ಕರ್ತವ್ಯ ನಿರ್ವಹಿಸಿದಾಗ ಯಶಸ್ಸು ಪಡೆಯಲು ಸಾಧ್ಯ. ಆಧುನಿಕ ಜೀವನ ಶೈಲಿಯಿಂದ ಒತ್ತಡ, ಉದ್ವೇಗದ ನಡುವೆ ಮಾನಸಿಕ ಶಾಂತಿ, ನೆಮ್ಮದಿ, ತೃಪ್ತಿ ಕಳೆದುಕೊಳ್ಳುತ್ತಿದ್ದೇವೆ. ಚೈತನ್ಯ ನೀಡಿ ಮಾನಸಿಕ ನೆಮ್ಮದಿ ಪಡೆಯಲು ಧಾರ್ಮಿಕ, ಆಧ್ಯಾತ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಕ್ಷಣಿಕ ಸುಖಕ್ಕಾಗಿ ಮೌಲ್ಯಗಳಿಂದ ವಿಮುಖರಾಗದೆ ಸತ್ಯ, ನ್ಯಾಯ, ಧರ್ಮ ಮಾರ್ಗದಲ್ಲಿ ನಡೆದು ಸದ್ವಿಚಾರ, ಸದ್ವರ್ತನೆ, ಸತ್ಕಾರ್ಯಗಳ ಮೂಲಕ ಸಮಯ ಸದುಪಯೋಗಪಡಿಸಿಕೊಂಡು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಬದುಕನ್ನು ಆನಂದಿಸಲು ಸಾಧ್ಯ ಎಂದರು.
ಉಡುಪಿ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಸಂಸ್ಥೆಯ ಉಪನ್ಯಾಸಕ ನವೀನ ಶೆಟ್ಟಿ ಮಾತನಾಡಿ, ಜೀವಿತಾವಧಿಯಲ್ಲಿ ಮಾಡುವ ಉತ್ತಮ ಕಾರ್ಯಗಳನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಧಾರ್ಮಿಕ ಆಚರಣೆಗಳ ಮಹತ್ವವನ್ನು ಅರಿತು ಪಾಲಿಸಿಕೊಂಡು ಬಂದಾಗ ಶ್ರೇಯಸ್ಸು ಪಡೆಯಬಹುದು ಎಂದರು.
ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಮಾತನಾಡಿ, ಗ್ರಾಮಭಿವೃದ್ಧಿ ಯೋಜನೆ ಸಂಘಟನೆಯು ನಿರಂತರ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಮೂಲಕ ಜನರ ಏಳಿಗೆ ಮಾಡುತ್ತಿದೆ. ಸ್ವಾವಲಂಬಿ ಬದುಕನ್ನು ಸಾಗಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದರು.
ಹಿರ್ಗಾನ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರ್ಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಪೂಜಾರಿ, ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯಕ್ಷ ಸಿರಿಯಣ್ಣ ಶೆಟ್ಟಿ, ಅಶೋಕ ನಾಯಕ್, ಹಿರ್ಗಾನ ‘ಎ’, ‘ಬಿ’ ಒಕ್ಕೂಟದ ಅಧ್ಯಕ್ಷ ಸತೀಶ್ ಪೂಜಾರಿ, ಸುಭಾಷ್ ಪೂಜಾರಿ, ಸೇವಾ ಪ್ರತಿನಿಧಿಗಳಾದ ಪ್ರತಿಭಾ, ಸುಜಯಾ ಭಾಗವಹಿಸಿದ್ದರು. ಜನಜಾಗೃತಿ ವೇದಿಕೆ ಸದಸ್ಯ ವಾಸು ಶೆಟ್ಟಿ ಸ್ವಾಗತಿಸಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಸಂಜೀವ ಪೂಜಾರಿ ವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ನಗರ ವಲಯದ ಮೇಲ್ವಿಚಾರಕಿ ಗೀತಾ ಹೆಗ್ಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.