ADVERTISEMENT

ಅಭಿಮತ ಸಂಭ್ರಮ | ಎಲ್ಲರಿಗೂ ಕಾನೂನಿನ ಜ್ಞಾನ ಅಗತ್ಯ: ನಿವೃತ್ತ ಎಸಿಪಿ ದಯಾ ನಾಯಕ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 2:48 IST
Last Updated 16 ಫೆಬ್ರುವರಿ 2026, 2:48 IST
ಮುಂಬೈನ ನಿವೃತ್ತ ಎಸಿಪಿ ದಯಾನಂದ ನಾಯಕ್ ಅವರಿಗೆ ಅಭಿಮತ ಕೀರ್ತಿಕಲಶ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮುಂಬೈನ ನಿವೃತ್ತ ಎಸಿಪಿ ದಯಾನಂದ ನಾಯಕ್ ಅವರಿಗೆ ಅಭಿಮತ ಕೀರ್ತಿಕಲಶ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಬ್ರಹ್ಮಾವರ: ‘ಕಾನೂನು ಪುಸ್ತಕವನ್ನು ಪೊಲೀಸರು, ವಕೀಲರು ಮಾತ್ರ ಓದುವುದಲ್ಲ, ವಿದ್ಯಾರ್ಥಿಗಳು, ಸಾರ್ವಜನಿಕರು ಎಲ್ಲರೂ ಓದಬೇಕು. ಕಾನೂನಿನ ಜ್ಞಾನ ಇದ್ದರೆ ಮಾತ್ರ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದು ಮುಂಬೈನ ನಿವೃತ್ತ ಎಸಿಪಿ ದಯಾ ನಾಯಕ್ ಹೇಳಿದರು.

ಕೋಟ ಗಿಳಿಯಾರಿನ ಜನಸೇವಾ ಟ್ರಸ್ಟ್‌ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ದಿ.ಅಪ್ಪಣ್ಣ ಹೆಗ್ಡೆ ವೇದಿಕೆಯಲ್ಲಿ ನಡೆದ 9ನೇ ವರ್ಷದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಅಭಿಮತ ಸಂಭ್ರಮದ ಕೀರ್ತಿ ಕಲಶ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬ್ರಿಟಿಷರು ತಮಗೆ ಬೇಕಾದ ಹಾಗೆ ಕಾನೂನು ರಚಿಸಿದ್ದರು. ಎಷ್ಟೋ ವರ್ಷಗಳಿಂದ ನಾವು ಅದನ್ನು ನಾವು ಬಳಸುತ್ತಿದ್ದೆವು. ಒಂದು ವರ್ಷದ ಹಿಂದೆ ಅದನ್ನು ನಮ್ಮ ವ್ಯವಸ್ಥೆಗೆ ತಕ್ಕಂತೆ ಬದಲಿಸಿದ್ದೇವೆ. ವಿದೇಶಗಳಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರುವುದರಿಂದ ಅಲ್ಲಿ ಅಪರಾಧ ಸಂಖ್ಯೆ ಕಡಿಮೆ ಇದೆ. ಸಂಘ ಸಂಸ್ಥೆಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು, ನಾಗರಿಕರಿಗೆ ಕಾನೂನಿನ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಕೋಟ ಗೀತಾನಂದ ಫೌಂಡೇಷನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಹಣ ಇರುವವರಿಂದ ಸಂಗ್ರಹಿಸಿ ಅಶಕ್ತರನ್ನು ಗುರುತಿಸಿ ಅವರಿಗೆ ನೀಡುವ ಕೆಲಸ ಶ್ಲಾಘನೀಯ ಎಂದು ಹೇಳಿದರು.

ಅಂಜಲಿ ವಿಜಯಲಕ್ಷ್ಮೀ ಸಾರೀಸ್‌ನ ಅಂಜಲಿ ವಿಜಯ್‌ ಮಾತನಾಡಿ, ನಾವು ದುಡಿದು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಾಗ ಸಿಗುವ ಖುಷಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಸಾಧಿಸಬೇಕೆನ್ನುವ ಛಲ ಇದ್ದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.

ಉದ್ಯಮಿ ಬರೋಡ ಶಶಿಧರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌, ಸೂಲಗಿತ್ತಿ ಲಕ್ಷ್ಮೀ ಪೂಜಾರಿ ಗುಂಡಿಗೋಳಿ, ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದಕ್ಕೆ ಯಶೋಗಾಥೆ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋಟದ ದೇವಕಿ ಪೂಜಾರಿ ಅವರಿಗೆ ನಿರ್ಮಿಸಿಕೊಟ್ಟ ಮನೆಯ ಕೀ ಹಸ್ತಾಂತರಿಸಲಾಯಿತು.

ಹೈದರಾಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಮುಂಬೈನ ಭಾರತ್ ಕೊಆಪರೇಟಿವ್ ಬ್ಯಾಂಕ್ ಚೇರ್‌ಮನ್ ಸೂರ್ಯಕಾಂತ ಜಯ ಸುವರ್ಣ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ ಕಾರಂತ, ಯುನಿವರ್ಸಲ್ ಸಮೂಹ ಸಂಸ್ಥೆಯ ಚೇರ್‌ಮನ್ ಉಪೇಂದ್ರ ಶೆಟ್ಟಿ, ಬೆಂಗಳೂರಿನ ಉದ್ಯಮಿ ಪ್ರಶಾಂತ ಶೆಟ್ಟಿ, ಗಿಳಿಯಾರು ಕುಶಲ ಹೆಗ್ಡೆ ಮೆಮೊರಿಯಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕೆ. ಹೆಗ್ಡೆ, ಉದ್ಯಮಿಗಳಾದ ಬೇಳೂರು ರಾಘವೇಂದ್ರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಆದರ್ಶ ಶೆಟ್ಟಿ ಮುಂಬೈ, ಬೆಂಗಳೂರು ಅಭಯ ಫೌಂಡೇಷನ್‌ ಪ್ರವರ್ತಕ ಉಮೇಶ ಶೆಟ್ಟಿ ಮಂದಾರ್ತಿ, ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು, ಬೆಂಗಳೂರಿನ ಪಟ್ಲ ಫೌಂಡೇಷನ್‌ನ ಅಮರ್‌ ಶೆಟ್ಟಿ ಮಂದಾರ್ತಿ ಭಾಗವಹಿಸಿದರು.

ಜನಸೇವಾ ಟ್ರಸ್ಟ್‌ನ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ರಾಘವೇಂದ್ರ ಕಾಂಚನ್‌ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಕಲಾವಿದರಿಂದ ‘ನೃತ್ಯೋಪಾಸನೆ’ ಶಾಸ್ತ್ರೀಯ, ಅರೆಶಾಸ್ತ್ರೀಯ ನೃತ್ಯಗಳು ಪ್ರದರ್ಶನಗೊಂಡವು. ನಾಗರಾಜ ಪಾಣಾರ ಪಾಡ್ದನ ಹಾಡಿ ರಂಜಿಸಿದರು. ನಿರೂಪಕಿ ಅನುಶ್ರೀ ನಿರೂಪಣೆಯಲ್ಲಿ ಗಾಯಕ ವಿಜಯ ಪ್ರಕಾಶ್‌ ಅವರಿಂದ ‍‘ಸಿಂಗಾರ ಸಿರಿ’ ಸಂಗೀತ ರಸಮಂಜರಿ ನಡೆಯಿತು.

ಸಿನಿಮಾ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಎಷ್ಟೋ ಕಲಾವಿದರು ಜನರಿಗೆ ಉದ್ಯೋಗ ಕಲ್ಪಿಸಿದೆ
ರಿಷಭ್‌ ಶೆಟ್ಟಿ ನಟ
ಯುವಜನರಲ್ಲಿ ನಮ್ಮ ಕಲೆ ಸಂಸ್ಕೃತಿ ಸಂಪ್ರದಾಯ ಮಾನವೀಯತೆ ಸಮಾಜಸೇವೆ ಕಾರ್ಯಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿರುವ ಜನಸೇವಾ ಟ್ರಸ್ಟ್‌ ಮಾದರಿ
ಡಾ.ಮೋಹನ್‌ ಆಳ್ವ ಮೂಡುಬಿದಿರೆ ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.