ADVERTISEMENT

ಸೇಂಟ್ ಮೇರಿಸ್‌ ಟು ಮಲ್ಪೆ ಕಿನಾರೆ: 3.5 ಕಿ.ಮೀ ದೂರ ಈಜಿದ ಕರಂಬಳ್ಳಿ ಸ್ವಿಮ್ಮರ್ಸ್

ಪರಿಸರ ಕಾಳಜಿ ಉದ್ದೇಶ‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 12:46 IST
Last Updated 14 ಏಪ್ರಿಲ್ 2021, 12:46 IST
ಕರಂಬಳ್ಳಿ ಸ್ವಿಮ್ಮರ್ಸ್‌ ತಂಡ ಬುಧವಾರ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆಯ ಕಿನಾರೆವರೆಗೂ ಈಜಿತು.
ಕರಂಬಳ್ಳಿ ಸ್ವಿಮ್ಮರ್ಸ್‌ ತಂಡ ಬುಧವಾರ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆಯ ಕಿನಾರೆವರೆಗೂ ಈಜಿತು.   

ಉಡುಪಿ: ಪರಿಸರ ಸಂರಕ್ಷಣೆ ಹಾಗೂ ಈಜು ಮಹತ್ವ ಸಾರುವ ಉದ್ದೇಶದಿಂದ ಕರಂಬಳ್ಳಿ ಸ್ವಿಮ್ಮರ್ಸ್‌ ತಂಡದ 15 ಈಜುಗಾರರು ಬುಧವಾರ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆಯ ಕಿನಾರೆವರೆಗೂ ಈಜಿತು.

ಬೆಳಿಗ್ಗೆ 7.30ಕ್ಕೆ ಮಲ್ಪೆಯಿಂದ ಬೋಟ್‌ನಲ್ಲಿ ಸೇಂಟ್ ಮೇರಿಸ್ ಐಲ್ಯಾಂಡ್ ತಲುಪಿದ ಕರಂಬಳ್ಳಿ ಸ್ವಿಮ್ಮರ್ಸ್‌ ತಂಡದ ಸದಸ್ಯರು 7.45ಕ್ಕೆ ಸಮುದ್ರಕ್ಕೆ ಧುಮುಕಿದರು. ಉಡುಪಿಯ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಈಜಿ ಅನುಭವ ಹೊಂದಿದ್ದ ತಂಡದ ಸದಸ್ಯರು ಸಮುದ್ರದ ದೈತ್ಯ ಅಲೆಗಳಿಗೆ ಎದುರಾಗಿ ಈಜಿದರು. ಎರಡೂ ಮುಕ್ಕಾಲು ಗಂಟೆಯಲ್ಲಿ 3.5 ಕಿ.ಮೀ ದೂರವನ್ನು ಕ್ರಮಿಸುವ ಮೂಲಕ ಮಲ್ಪೆಯ ಕಿನಾರೆಯನ್ನು ಯಶಸ್ವಿಯಾಗಿ ಮುಟ್ಟಿದರು.

ತಂಡದಲ್ಲಿ ಬಾಲಕನಿಂದ ಹಿಡಿದು 63 ವರ್ಷದವರೆಗಿನ ಸದಸ್ಯರು ಇದ್ದಿದ್ದು ವಿಶೇಷವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಕೋರ್ಡ್‌ಗಾರ್ಡ್‌ನ ಒಂದು ಬೋಟ್‌ ಅನ್ನು ರಕ್ಷಣೆಗೆ ನಿಯೋಜಿಸಲಾಗಿತ್ತು. ಬೋಟ್‌ನಲ್ಲಿದ್ದ ತಜ್ಞರು ತಂಡದ ಸದಸ್ಯರಿಗೆ ಯಶಸ್ವಿಯಾಗಿ ಗುರಿಮುಟ್ಟಲು ಮಾರ್ಗದರ್ಶನಗಳನ್ನು ನೀಡಿದರು.

ADVERTISEMENT

ಜೆಲ್ಲಿ ಫಿಶ್‌ ಕಿರಿಕಿರಿ:

ಈಜುತ್ತಿದ್ದ ವೇಳೆ ಜೆಲ್ಲಿಫಿಶ್‌ ಮೈಗೆ ತಾಗಿ ಉರಿಯಿಂದ ಹಲವರು ಕಿರಿಕಿರಿ ಅನುಭವಿಸಬೇಕಾಯಿತು. ಆದರೂ, ಛಲಬಿಡದೆ ಸತತ ಎರಡೂವರೆ ತಾಸಿಗೂ ಹೆಚ್ಚುಕಾಲ ಅಲೆಗಳಿಗೆ ಎದುರಾಗಿ ಈಜಿ ಗುರಿ ಮುಟ್ಟಿದರು.

ಕುಟಂಬದ ಸದಸ್ಯರ ಉಪಸ್ಥಿತಿ:

ಪ್ರತ್ಯೇಕ ಬೋಟ್‌ನಲ್ಲಿದ್ದ ಕುಟುಂಬದ ಸದಸ್ಯರು ಆರಂಭದಿಂದ ಅಂತ್ಯದವರೆಗೂ ಹಾಜರಿದ್ದು ಉತ್ಸಾಹ ತುಂಬಿದರು. ಈಜಿ ತಡ ಮುಟ್ಟಿದ ಸದಸ್ಯರ ಬೆನ್ನುತಟ್ಟಿ ಪ್ರೋತ್ಸಾಹಿಸಿದರು.

ಉಚಿತ ಈಜು ತರಬೇತಿ:

ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಆಸಕ್ತರಿಗೆ ಉಚಿತ ಈಜು ತರಬೇತಿ ನೀಡಲಾಗುತ್ತಿದೆ. ಆರ್.ಕೆ.ರಮೇಶ್ ಪೂಜಾರಿ ನೇತೃತ್ವದ ತಂಡ ಈಜು ಕಲಿಸುತ್ತಿದೆ. ನಿತ್ಯ 50ಕ್ಕೂ ಹೆಚ್ಚು ಮಂದಿ ಕೆರೆಯಲ್ಲಿ ಈಜುತ್ತಾರೆ.

ತಂಡದಲ್ಲಿದ್ದವರು:

ಆರ್.ಕೆ ರಮೇಶ್, ವಿಜಯ್‌ ರಾಜ್, ನಿತ್ಯಾನಂದ ಜೋಗಿ, ಪ್ರಶಾಂತ್, ಪ್ರಕಾಶ್ ಜೋಗಿ, ಕೇಶವ ಗೌಡ, ಆನಂದ ಹೊಳ್ಳ, ಲೋಕೇಶ ಪಾಲನ್, ದಿನೇಶ್ ಜತ್ತನ್, ಸಾತ್ವಿಕ್ ಜತ್ತನ್, ಮಿಥುನ್, ಸತೀಶ್ ಪೂಜಾರಿ, ಗೋಪಾಲ ಪಾಲನ್, ದೀಪಕ್ ಶೇಠ್, ವಿಘ್ನೇಷ್‌ ಆಚಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.