ADVERTISEMENT

ವಿದ್ಯಾರ್ಥಿ ಸಂಖ್ಯಾವೃದ್ಧಿಗೆ ಸಾಧನವಾದ ಬಸ್‌ಗಳು 

ಫಲ ನೀಡಿದ ಹಳೆ ವಿದ್ಯಾರ್ಥಿಗಳ ಸಂಘದ ಶ್ರಮ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 12:49 IST
Last Updated 6 ಜುಲೈ 2018, 12:49 IST
ಮರವಂತೆ ಶಾಲೆಗೆ ಹಳೆ ವಿದ್ಯಾರ್ಥಿ ಸಂಘದಿಂದ ಬಸ್‌ ಹಸ್ತಾಂತರ ಸಂಭ್ರಮ (ಸಂಗ್ರಹ ಚಿತ್ರ)
ಮರವಂತೆ ಶಾಲೆಗೆ ಹಳೆ ವಿದ್ಯಾರ್ಥಿ ಸಂಘದಿಂದ ಬಸ್‌ ಹಸ್ತಾಂತರ ಸಂಭ್ರಮ (ಸಂಗ್ರಹ ಚಿತ್ರ)   

ಬೈಂದೂರು: ಪೋಷಕರ ಅನಾದರಕ್ಕೆ ಗುರಿಯಾಗಿರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳಲು ವಿವಿಧ ಮಾರ್ಗಗಳ ಅನುಸರಣೆ ನಡೆಯುತ್ತಿದೆ. ಪ್ರಾಥಮಿಕ ಪೂರ್ವ ತರಗತಿಗಳ ಆರಂಭ, ಮೇಲಿನ ತರಗತಿಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ, ಸ್ಮಾರ್ಟ್ ಕ್ಲಾಸ್ ಅಳವಡಿಕೆಯಂತ ಉಪಕ್ರಮಗಳು ಅದರಲ್ಲಿ ಸೇರಿವೆ. ಅವು ಕೆಲಮಟ್ಟಿನ ಫಲ ನೀಡಿರಬಹುದು. ಆದರೆ ಶಾಲಾ ವಾಹನಗಳನ್ನು ಹೊಂದಿಸಿಕೊಂಡ ಕಡೆ ವಿದ್ಯಾರ್ಥಿ ಸಂಖ್ಯೆ ಗಣನೀಯವಾಗಿ ಏರಿರುವುದಕ್ಕೆ ಬೈಂದೂರು ಶಿಕ್ಷಣ ಕ್ಷೇತ್ರದ ಗುಜ್ಜಾಡಿ, ಮರವಂತೆ, ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಉದಾಹರಣೆಯಂತಿವೆ.

ಮೇಲಿನ ಮೂರು ಶಾಲೆಗಳಲ್ಲಿ ಶಾಲಾ ವಾಹನ ಹೊಂದುವ ಅದೃಷ್ಟ ಮೊದಲಾಗಿ ಒಲಿದುದು ಮರವಂತೆ ಶಾಲೆಗೆ. ಎರಡು ವರ್ಷಗಳ ಹಿಂದೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ವಾಹನದ ಕೊಡುಗೆ ನೀಡಿ ರಾಜ್ಯವ್ಯಾಪಿ ಸುದ್ದಿ ಮಾಡಿತ್ತು. ಬಸ್ ಹೊಂದಿದ ಮೊದಲ ವರ್ಷ ಅದರ ಸೇವೆ ಗ್ರಾಮಕ್ಕೆ ಸೀಮಿತವಾಗಿತ್ತು. ಈ ವರ್ಷ ಪಕ್ಕದ ಹಡವು ಗ್ರಾಮಕ್ಕೂ ಅದರ ವಿಸ್ತರಣೆಯಾಗಿದೆ. ಅದರ ಫಲವಾಗಿ ಅಲ್ಲಿ ಕಿಂಡರ್‌ ಗಾರ್ಟನ್‌ ತರಗತಿಗಳಲ್ಲಿ 75 ವಿದ್ಯಾರ್ಥಿಗಳಿದ್ದರೆ, ಮೇಲಿನ ತರಗತಿಗಳಲ್ಲಿ 190 ವಿದ್ಯಾರ್ಥಿಗಳಿದ್ದಾರೆ. ಈ ವರ್ಷದ ವಿದ್ಯಾರ್ಥಿ ಸಂಖ್ಯಾ ವೃದ್ಧಿ 95. ಕಳೆದ ವರ್ಷ ಯುಕೆಜಿಯಲ್ಲಿದ್ದ ಮಕ್ಕಳಲ್ಲಿ ಶೇ. 90 ಮಕ್ಕಳು ಇಲ್ಲಿಯೇ ಮುಂದುವರಿದಿದ್ದಾರೆ. ಹಾಗಾಗಿ ವಿದ್ಯಾರ್ಥಿ ಸಂಖ್ಯೆ ಹೆಚ್ಚಳದ ನಿಟ್ಟಿನಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ ಎನ್ನುವುದು ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಅವರ ಖಚಿತಾಭಿಪ್ರಾಯ. ಈ ನಿಟ್ಟಿನಲ್ಲಿ ದಯಾನಂದ ಬಳೆಗಾರ ನೇತೃತ್ವದ ಹಳೆ ವಿದ್ಯಾರ್ಥಿ ಸಂಘದ ಕೊಡುಗೆ ಸದಾ ಸ್ಮರಣೀಯ.

ಕಳೆದ ವರ್ಷ ವಾಹನದ ಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದ್ದ ಸಂಘ ಈ ವರ್ಷ ಅದನ್ನು ಶಾಲೆಗೆ ವರ್ಗಾಯಿಸಿದೆ. ಶಾಲೆ ಮತ್ತು ಗಣೇಶ ಪೂಜಾರಿ ನೇತೃತ್ವದ ಅಭಿವೃದ್ಧಿ ಸಮಿತಿ ಈಗ ಅದಕ್ಕೆ ತಗಲುವ ₹31 ಸಾವಿರ ಮಾಸಿಕ ವೆಚ್ಚವನ್ನು ಬಸ್ ಸೇವೆ ಬಳಸುವ ಮಕ್ಕಳ ಪೋಷಕರಿಂದ ಪಡೆಯುತ್ತಿವೆ.

ADVERTISEMENT

ಗುಜ್ಜಾಡಿ ಶಾಲೆಗೆ ಕಳೆದ ವರ್ಷ ಐಶ್ವರ್ಯಾ ಮೇಸ್ತ ಎಂಬವರ ಕೊಡುಗೆಯಿಂದ ಬಸ್ ದೊರಕಿದೆ. ಅದು 4 ಕಿಲೋ ಮೀಟರ್‌ ಪರಿಧಿಯಲ್ಲಿರುವ ತ್ರಾಸಿ, ಕಂಚುಗೋಡು, ಬೆಣ್ಗೆರೆ, ಗುಜ್ಜಾಡಿಯ ಕಳಿಹಿತ್ಲು, ಜನತಾ ಕಾಲೋನಿ, ಬಂಟ್ರಗರಡಿ, ಹೆಬ್ಬಾರಬೈಲು ಪ್ರದೇಶಗಳಿಂದ ಒಟ್ಟು 70 ಮಕ್ಕಳನ್ನು ಕರೆತರುತ್ತದೆ. ಅವರಲ್ಲಿ ಒಂದನೆ ತರಗತಿಯವರನ್ನು ಬಿಟ್ಟು ಉಳಿದವರಿಂದ ₹ 100ರಿಂದ ₹150 ಶುಲ್ಕ ಸಂಗ್ರಹಿಸಲಾಗುತ್ತಿದೆ. ಬಸ್ ವ್ಯವಸ್ಥೆಯ ನಿರ್ವಹಣೆಗೆ ತಿಂಗಳಿಗೆ ₹20 ಸಾವಿರ ಬೇಕಾಗುತ್ತದೆ. ಇಲ್ಲಿಯೂ ಶುಲ್ಕ ಸಂಗ್ರಹದ ಬಳಿಕ ಕೊರತೆಯಾಗುವ ಮೊತ್ತವನ್ನು ಹಳೆ ವಿದ್ಯಾರ್ಥಿ ಸಂಘ ಭರಿಸುತ್ತದೆ. ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತೇಶ್ ಪೂಜಾರಿ ಮತ್ತು ಸದಸ್ಯರು ಈ ವ್ಯವಸ್ಥೆಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವ ಪ್ರಭಾರ ಮುಖ್ಯೋಪಾಧ್ಯಾಯ ಜಯರಾಮ ಶೆಟ್ಟಿ, ಎಲ್ಲದರ ಪರಿಣಾಮವಾಗಿ ವಿದ್ಯಾರ್ಥಿ ಸಂಖ್ಯೆ 237 ತಲಪಿದೆ ಎನ್ನುತ್ತಾರೆ.

ನಾವುಂದದಲ್ಲಿ ಪ್ರಮೋದ ಪೂಜಾರಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗುವುದರೊಂದಿಗೆ ಕಳೆದ ವರ್ಷ ಶಾಲೆಗೆ ಸ್ವಂತ ಬಸ್ ಬಂದಿದೆ. ಅದರ ನಿರ್ವಹಣೆಗೆ ಅವರ ಜತೆ ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ಸುದರ್ಶನ ಗಾಣಿಗ, ಸದಸ್ಯರು ಮುಂದಾಗಿದ್ದಾರೆ. ನಾವುಂದ ಗ್ರಾಮವಲ್ಲದೆ ಮರವಂತೆ, ಅರೆಹೊಳೆ ಕ್ರಾಸ್, ಗಾರ್ಡ್‌ಶೆಡ್‌ವರೆಗೂ ಬಸ್ ಹೋಗಿ 120 ಮಕ್ಕಳನ್ನು ಶಾಲೆಗೆ ಕರೆತರುತ್ತಿದೆ. ಒಂದು ಹಂತದಲ್ಲಿ 150ಕ್ಕೆ ಇಳಿದಿದ್ದ ವಿದ್ಯಾರ್ಥಿ ಸಂಖ್ಯೆ ಇದರಿಂದಾಗಿ ಈಗ 190ಕ್ಕೆ ಏರಿದೆ. ಕೆಜಿ ತರಗತಿಗಳ 80 ಮಕ್ಕಳನ್ನು ಸೇರಿಸಿದರೆ ಒಟ್ಟು ಸಂಖ್ಯೆ 270 ಆಗುತ್ತದೆ. ದೂರದ ಆಧಾರದಲ್ಲಿ ತಲಾ ₹200ರಿಂದ ₹250 ಶುಲ್ಕ ಪಡೆಯಲಾಗುತ್ತಿದೆ. ಕೊರತೆಯನ್ನು ಹಳೆ ವಿದ್ಯಾರ್ಥಿ ಸಂಘ ತುಂಬಿಸಿಕೊಡುತ್ತದೆ ಎನ್ನುವುದನ್ನು ಮುಖ್ಯೋಪಾಧ್ಯಾಯ ಆನಂದ ಜಿ ಸ್ಮರಿಸುತ್ತಾರೆ.

ಮೂರೂ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಆದರೆ ಮಕ್ಕಳ ಸಂಖ್ಯಾವೃದ್ಧಿಯಲ್ಲಿ ಪ್ರಧಾನ ಪಾತ್ರವಹಿಸುತ್ತಿರುವುದು ಶಾಲಾ ವಾಹನ ಎನ್ನುವುದು ಗಮನಾರ್ಹ ಅಂಶ.

ಎಸ್. ಜನಾರ್ದನ ಮರವಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.