ಹೆಬ್ರಿ: ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಚೀರೊಳ್ಳಿ ಎಂಬಲ್ಲಿ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ ತುಮಕೂರು ಜಿಲ್ಲೆಯ ತಿಪಟೂರು ಲಕ್ಷ್ಮಣನಗರದ ಕೃಷಿ ಕೂಲಿ ಕಾರ್ಮಿಕ ಆನಂದ್ ಅವರಿಗಾಗಿ ಹುಡುಕಾಟ ನಡೆದಿದ್ದು, ಶುಕ್ರವಾರ ರಾತ್ರಿವರೆಗೂ ಪತ್ತೆಯಾಗಿಲ್ಲ.
ಘಟನಾ ಸ್ಥಳಕ್ಕೆ ಹೋಗಲು ದಾರಿಯೇ ಇಲ್ಲದೆ ಮರಗಿಡ ಪೊದೆಗಳನ್ನು ಕಡಿದು ಹೋಗಬೇಕಿದ್ದು, ಅಗ್ನಿಶಾಮಕ ದಳದವರು ಹೆಬ್ರಿ ಪೊಲೀಸರ ಸಹಕಾರದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಹುಡುಕಾಟಕ್ಕೆ ಮಳೆ ಅಡ್ಡಿಯಾಗಿದೆ.
ನಾಡ್ಪಾಲಿನ ಉಗ್ರಾಣಿಬೆಟ್ಟು ಎಂಬಲ್ಲಿ ಮನೋರಮಾ ಹೆಗ್ಡೆ ಎಂಬವರಿಗೆ ಸೇರಿದ ತೋಟದಲ್ಲಿ ಹಲವು ಸಮಯದಿಂದ ದುಡಿಯುತ್ತಿದ್ದ 55 ವರ್ಷದ ಆನಂದ ಎಂಬುವವರು, ಹಗ್ಗದ ಸಹಾಯದಿಂದ ಹೊಳೆ ದಾಟುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಘಟನಾ ಸ್ಥಳಕ್ಕೆ ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮಿ ಎಸ್. ಆರ್. ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಬ್ರಿ ತಹಶೀಲ್ದಾರ್ ಎಸ್.ಎ.ಪ್ರಸಾದ್, ಕಂದಾಯ ನಿರೀಕ್ಷಕ ಹಿತೇಶ್, ಗ್ರಾಮ ಲೆಕ್ಕಾಧಿಕಾರಿ ಗಣೇಶ್ ಕುಲಾಲ್ ಜೊತೆಗಿದ್ದರು.
ಈಶ್ವರ್ ಮಲ್ಪೆ ಅವರಿಂದ ಕಾರ್ಯಾಚರಣೆ: ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಶುಕ್ರವಾರ ಮಧ್ಯಾಹ್ನದಿಂದ ಸುಮಾರು ನಾಲ್ಕು ಕಿಲೋಮೀಟರ್ ನಷ್ಟು ನದಿಯಲ್ಲಿ ಇಳಿದು ಇಲಾಖೆಯೊಂದಿಗೆ ಕಾರ್ಯಾಚರಣೆ ಮಾಡಿದ್ದಾರೆ. ರಭಸದಿಂದ ಮುನ್ನುಗ್ಗುವ ಕೆಸರು ನೀರಿನಿಂದ ಕಾರ್ಯಾಚರಣೆಗೆ ಅಡಚಣೆಯಾಗಿದೆ.
ಸ್ಥಳದಲ್ಲಿ ಬೀಡು ಬಿಟ್ಟ ಅಧಿಕಾರಿಗಳು: ಬೆಳಗ್ಗಿನಿಂದ ಸಂಜೆಯ ತನಕ ವಿಪರೀತವಾಗಿ ಮಳೆ ಸುರಿಯುತ್ತಿದ್ದರು ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳದಿಂದ ಕದಲಿಲ್ಲ. ಹೆಬ್ರಿ ಪಿಎಸ್ಐ ಮಹೇಶ್ ಟಿ.ಎಂ. ಹಾಗೂ ಅವರ ತಂಡ ಆಲ್ಬರ್ಟ್ ಮೊನಿಸ್ ಮತ್ತು ತಂಡದ ಕಾರ್ಯಾಚರಣೆಗೆ ಸಾರ್ವಜನಿಕರು ಶಹಬ್ಬಾಸ್ ಹೇಳಿದ್ದಾರೆ.
ತೋಟದ ಮಾಲೀಕರ ಬೇಜವಾಬ್ದಾರಿ: ಜೂನ್‌ನಿಂದ ಆಗಸ್ಟ್ ತನಕ ಸೀತಾನದಿಯ ಉಪನದಿಯಲ್ಲಿ ಬಾರಿ ನೀರಿನ ಪ್ರಮಾಣ ಇರುತ್ತದೆ. ಮಾಲೀಕರು ತೋರಿದ ಬೇಜವಾಬ್ದಾರಿಯಿಂದ ಒಬ್ಬ ಕೂಲಿ ಕಾರ್ಮಿಕ ನಾಪತ್ತೆಯಾಗುವಂತೆ ಆಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಸ್ಥಳೀಯರು ಹೇಳಿದ್ದಾರೆ.
ವಿದ್ಯುತ್ ಕಂಬಗಳು ಧರೆಗೆ
ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಬ್ಬಣ್ಣ ಕಟ್ಟೆ ಮತ್ತು ಕಬ್ಬಿನಾಲೆಯ ನಿರಾಣಿಯಲ್ಲಿ ಎಂಬಲ್ಲಿ ಶುಕ್ರವಾರದ ಗಾಳಿ–ಮಳೆಗೆ ಕೆಲವು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ತಹಶೀಲ್ದಾರ್ ಭೇಟಿ
ಹೆಬ್ರಿ: ತಾಲ್ಲೂಕಿನ ಮುದ್ರಾಡಿ ಪಾದೆಗುಡ್ಡೆಯಲ್ಲಿ ಮರ ಬಿದ್ದು ಹಾನಿಗೊಳಗಾದ ಜಲಜ ಶೆಟ್ಟಿ ಅವರ ಮನೆಗೆ ಹೆಬ್ರಿ ತಹಶೀಲ್ದಾರ್ ಎಸ್.ಎ. ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮ ಆಡಳಿತ ಅಧಿಕಾರಿ ನವೀನ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.