ಉಡುಪಿ: ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಿಗ್ಗೆ ಉಡುಪಿಯ ಶೋಕಮಾತಾ ಚರ್ಚ್‌ಗೆ ತರಲಾಯಿತು.
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಶಾಸಕ ಯು.ಟಿ.ಖಾದರ್, ಮುಖಂಡರಾದ ಮೊಯಿದ್ದೀನ್ ಭಾವ, ಜೆ.ಆರ್.ಲೊಬೊ, ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಚರ್ಚ್‌ಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಉಡುಪಿ ಧರ್ಮಪ್ರಾಂತ್ಯದ ಗುರುಗಳಾದ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಆಸ್ಕರ್ ಫರ್ನಾಂಡಿಸ್ ಕುಟುಂಬದ ಮೂಲ ಚರ್ಚ್ ಇದಾಗಿದೆ.
ಬಳಿಕ ಪಾರ್ಥಿವ ಶರೀರವನ್ನು ಬ್ರಹ್ಮಗಿರಿಯ ಆಸ್ಕರ್ ಅವರ ನಿವಾಸಕ್ಕೆ ತಂದು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಇಲ್ಲಿಯೂ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕಾಂಗ್ರೆಸ್ ಕಚೇರಿಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಯಿತು. ದಾರಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಹೂವಿನ ಮಳೆಗರೆಯುವ ಮೂಲಕ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.