ಪಲಿಮಾರಿನ ಶಾಂಭವಿಯಲ್ಲಿ ನಿರ್ಮಾಣಗೊಂಡಿರುವ ಅಣೆಕಟ್ಟು ಕಬ್ಬಿಣದ ಗೇಟ್‌ವಾಲ್‌ಗಳು
ಪಡುಬಿದ್ರಿ: ಸಣ್ಣ ನೀರಾವರಿ ಇಲಾಖೆಯಿಂದ ₹6.5 ಕೋಟಿ ವೆಚ್ಚದಲ್ಲಿ ಪಲಿಮಾರಿನಲ್ಲಿ ಶಾಂಭವಿ ನದಿಗೆ ನಿರ್ಮಿಸಿರುವ ಉಪ್ಪು ನೀರು ತಡೆ ಅಣೆಕಟ್ಟು ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಲಾಗಿದೆ.
600 ಎಕರೆ ಕೃಷಿ ಪ್ರದೇಶಕ್ಕೆ ನೀರು ಒದಗಿಸಲು ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಅಣೆಕಟ್ಟು, ಬಳಿಕ ಹಲವು ಬಾರಿ ದುರಸ್ತಿ ಕಂಡಿದೆ. ಸ್ಥಳೀಯರ ಬಹುಕಾಲದ ಸಮಸ್ಯೆ ಈಡೇರಿಸುವ ನಿಟ್ಟಿನಲ್ಲಿ ಹೊಸದಾಗಿ ಅಣೆಕಟ್ಟು ನಿರ್ಮಿಸಲಾಗಿತ್ತು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಬೆಳಗಾವಿಯ ಜಯಶೀಲಾ ನಾರಾಯಣ ಶೆಟ್ಟಿ ಗುತ್ತಿಗೆ ವಹಿಸಿಕೊಂಡಿದ್ದು, 2019ರಲ್ಲಿ ಆರಂಭಗೊಂಡಿರುವ ಕಾಮಗಾರಿ 2020ರ ಜೂನ್‌ನಲ್ಲಿ ಪೂರ್ಣಗೊಳಿಸಲಾಯಿತು. ಅಣೆಕಟ್ಟನ್ನೂ ಹಿಂದಿನ ಅಣೆಕಟ್ಟೆಯಷ್ಟೇ ಅಂದರೆ 7.5 ಮೀಟರ್‌ವರೆಗೆ ಎತ್ತರಿಸಲಾಗಿತ್ತು. ಅಣೆಕಟ್ಟೆಯ ನಾಲ್ಕು ಕಡೆ 4x100 ಮೀಟರ್ ವ್ಯಾಪ್ತಿಯಲ್ಲಿ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಮೂವತ್ತಕ್ಕೂ ಹೆಚ್ಚಿನ ಕಿಂಡಿಗಳನ್ನು ನಿರ್ಮಿಸಲಾಗಿತ್ತು.
ಆದರೆ, ಇದೀಗ ಈ ಕಾಮಗಾರಿ ಎರಡೂ ಕಡೆಯ ಕಬ್ಬಿಣದ ಗೇಟ್‌ವಾಲ್ವ್ ಮತ್ತು ಗೇಟ್‌ವಾಲ್ವ್ ತಳಪಾಯಕ್ಕೆ ತುಕ್ಕು ಹಿಡಿದಿದ್ದು, ಕಿತ್ತು ಹೋಗುವ ಸ್ಥಿತಿಯಲ್ಲಿದೆ. ಇದರಿಂದ ಅಣೆಕಟ್ಟಿನ ನೀರು ಹೊರ ಬಿಡಲು ಸಮಸ್ಯೆಯಾಗುತ್ತಿದೆ.
ಈ ಬಗ್ಗೆ ಸ್ಥಳೀಯ ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ಮಾಣಗೊಂಡ ನಾಲ್ಕು ವರ್ಷದಲ್ಲಿಯೇ ಗೇಟ್‌ವಾಲ್ವ್‌ಗಳು ತುಕ್ಕು ಹಿಡಿದು ಕಿತ್ತು ಹೋಗುವ ಸ್ಥಿತಿಯಲ್ಲಿದೆ. ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸ್ಥಳೀಯ ಕೃಷಿಕ ಹರಿಯಪ್ಪ ಮಾತನಾಡಿ, ‘ಅಣೆಕಟ್ಟು ಹೊಸದಾಗಿ ನಿರ್ಮಾಣಗೊಂಡರೂ ಗೇಟ್ ತೆರೆಯಲಾಗದೆ ಸಮಸ್ಯೆಯಾಗಿದೆ. ಈ ಹಿಂದೆ ಇದ್ದ ಅಣೆಕಟ್ಟು ಉತ್ತಮ ಸ್ಥಿತಿಯಲ್ಲಿತ್ತು. ಅದನ್ನು ದುರಸ್ತಿ ಮಾಡುವ ಬದಲು ಹೊಸ ಅಣೆಕಟ್ಟು ನಿರ್ಮಾಣವಾಗಿದೆ. ಹೊಸ ಅಣೆಕಟ್ಟಿನ ಗೇಟ್‌ವಾಲ್ವ್ ಕಿತ್ತು ಹೋಗುವ ಸ್ಥಿತಿಯಲ್ಲಿವೆ. ಕೆಲವು ಕಿಡಿಗೇಡಿಗಳು ಇಲ್ಲಿ ಬಂದು ಸಮಸ್ಯೆ ಮಾಡುತ್ತಿದ್ದಾರೆ. ಇದಕ್ಕಾಗಿ ಇಲ್ಲಿ ಕಾವಲುಗಾರ ನೇಮಕವಾಗಬೇಕು. ಗೇಟ್‌ವಾಲ್ವ್ ಸರಿಪಡಿಸುವ ಮೂಲಕ ಕೃಷಿ ಭೂಮಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ‘ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಅಣೆಕಟ್ಟೆಯ ಕಾಮಗಾರಿ ಕಳಪೆಯಾಗಿದೆ. ಇದರಿಂದ ಸ್ಥಳೀಯ ಕೃಷಿಕರಿಗೆ ಸಮಸ್ಯೆಯಾಗುತ್ತದೆ. ಶೀಘ್ರವೇ ಇದನ್ನು ಸರಿಪಡಿಸುವ ಮೂಲಕ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಿನೇಶ್ ಪಲಿಮಾರು ಆಗ್ರಹಿಸಿದ್ದಾರೆ.
ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ
ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಅಣೆಕಟ್ಟು ವೈಜ್ಞಾನಿಕವಾಗಿತ್ತು. ಸುಸ್ಥಿತಿಯಲ್ಲಿದ್ದ ಈ ಅಣೆಕಟ್ಟನ್ನು ಕೆಡವಿ ಅವೈಜ್ಞಾನಿಕವಾಗಿ ಹೊಸ ಅಣೆಕಟ್ಟು ನಿರ್ಮಿಸಲಾಗಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಅಣೆಕಟ್ಟಿನ ಗೇಟ್‌ಗಳು ಕಿತ್ತು ಹೋಗುವ ಸ್ಥಿತಿಯಲ್ಲಿವೆ. ಅಣೆಕಟ್ಟನ್ನು ಅವರಾಲು ಮಟ್ಟುವಿನಲ್ಲಿ ನಿರ್ಮಿಸಿ ಸುತ್ತಮುತ್ತಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೂಕ್ತವಾಗಿತ್ತು. ಆದರೆ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಳೆ ಅಣೆಕಟ್ಟನ್ನು ಕೆಡವಿ ಹೊಸದಾಗಿ ನಿರ್ಮಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಯೇಶ್ವರ ಪೈ ಬೇಸರ ವ್ಯಕ್ತಪಡಿಸಿದರು.
ಪತ್ರ ಬರೆಯಲಾಗಿದೆ: ಸೌಮ್ಯಲತಾ
ರೈತರ ದೂರಿನನ್ವಯ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಈಗಾಗಲೇ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆಯಲಾಗಿದ್ದು, ಗೇಟ್‌ವಾಲ್ವ್ ಸರಿಪಡಿಸಲು ಸಮಸ್ಯೆಯಾಗಿದೆ. ಮುಂದೆ ಗುತ್ತಿಗೆದಾರರೊಂದಿಗೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಈ ಎಲ್ಲ ಸಮಸ್ಯೆ ಶೀಘ್ರ ಪರಿಹಾರ ಕಂಡುಕೊಳ್ಳಬಹುದು ಎಂದು ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಹೇಳಿದರು.
ಗುತ್ತಿಗೆದಾರರಿಗೆ ನೋಟಿಸ್
ಪಲಿಮಾರು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗುತ್ತಿಗೆದಾರರಿಗೆ ಕೂಡಲೇ ನೋಟಿಸ್ ನೀಡಲಿದ್ದೇವೆ. ಶೀಘ್ರವೇ ಗೇಟ್‌ವಾಲ್ವ್‌ಗಳನ್ನು ಸರಿಪಡಿಸಲಾಗುವುದು. ಮುಂದಿನ ಮೇ ತಿಂಗಳೊಳಗೆ ಎಲ್ಲವೂ ಪೂರ್ಣಗೊಳ್ಳಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಕಾಪು ತಾಲ್ಲೂಕಿನ ಸಹಾಯಕ ಎಂಜಿನಿಯರ್ ಸುಧಾಕರ ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.