ಶಿರ್ವ: ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ ಮೂಡುಬೆಳ್ಳೆಯ ತಾಯಿ–ಮಗಳು ವಿಶೇಷ ಸಾಧನೆ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಮೂಡುಬೆಳ್ಳೆ ನಿವಾಸಿ ಸುನೀತಾ ಪೂಜಾರಿ ಮತ್ತು ಅವರ ಪುತ್ರಿ ಸನ್ನಿಧಿ ಎಚ್ ಸಾಧನೆ ಮಾಡಿದವರು. ತಾಯಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ ಮಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮೂಡುಬೆಳ್ಳೆಯ ದೇವರಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ 27 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಸುನೀತಾ ಪೂಜಾರಿ ಅವರು ಉಡುಪಿ ಸರ್ಕಾರಿ ಮಹಿಳಾ ಪ.ಪೂ. ಕಾಲೇಜಿನಲ್ಲಿ ಪರೀಕ್ಷೆ ಬರೆದು ಕಲಾ ವಿಭಾಗದಲ್ಲಿ 401 ಅಂಕ ಗಳಿಸಿದ್ದಾರೆ. ಮಗಳು ಸನ್ನಿಧಿ ಮೂಡುಬೆಳ್ಳೆ ನೆಲ್ಲಿಕಟ್ಟೆ ಜ್ಞಾನಗಂಗಾ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 542 ಅಂಕಗಳನ್ನು ಪಡೆದಿದ್ದಾರೆ.
ಸುನೀತಾ ಅವರು 1994ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆಯಾಗಿದ್ದರು. ಇದೀಗ 31 ವರ್ಷಗಳ ಬಳಿಕ ಪಿಯು ಪರೀಕ್ಷೆ ಬರೆದಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಪದೋನ್ನತಿ ಹೊಂದಲು ಎಸ್‌ಎಸ್‌ಎಲ್‌ಸಿ ತೇರ್ಗಡೆ ಮತ್ತು ಸೇವಾವಧಿ ಸಾಕಾಗಿತ್ತು. ಆದರೆ, ಇದೀಗ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ಪ್ರಾರಂಭವಾಗುತ್ತದೆ ಮತ್ತು ಕಾರ್ಯಕರ್ತೆಯರಿಗೆ ಪದೋನ್ನತಿ ಹೊಂದಲು ಪಿಯುಸಿ ಉತ್ತೀರ್ಣರಾಗಿರಬೇಕು ಎಂಬ ನಿಯಮ ಇರುವುದರಿಂದ ಅವರು ಪಿಯು ಪರೀಕ್ಷೆ ಬರೆದಿದ್ದಾರೆ. ಮೊದಲ ಪ್ರಯತ್ನದಲ್ಲೇ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
‘ವಿಜ್ಞಾನ ವಿಭಾಗದಲ್ಲಿ ಮಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದು, ಅವಳೊಂದಿಗೆ ನಾನೂ ಪ್ರಥಮ ಶ್ರೇಣಿಯಲ್ಲಿ ಪರೀಕ್ಷೆ ಪಾಸು ಮಾಡಿದ್ದು ತುಂಬಾ ಖುಷಿ ತಂದಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸುನೀತಾ ಪೂಜಾರಿ. ಸಾಧನೆ ಮಾಡಲು ಸಹಕರಿಸಿದ ಪತಿ, ಮಕ್ಕಳು, ಮೇಲ್ವಿಚಾರಕರು, ಸಹೋದ್ಯೋಗಿಗಳು ಮತ್ತು ಅಂಗನವಾಡಿ ಕೇಂದ್ರದ ಸಹಾಯಕರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.