ADVERTISEMENT

ಕಾಂಗ್ರೆಸ್ ಮುಗಿಸಲು ಡಿಕೆಶಿ, ಸಿದ್ದರಾಮಯ್ಯ ಸಾಕು: ಶೋಭಾ ಕರಂದ್ಲಾಜೆ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 15:42 IST
Last Updated 18 ಮಾರ್ಚ್ 2022, 15:42 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಉಡುಪಿ: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಶ್ನಿಸಿರುವುದು ಅವರ ಮಾನಸಿಕತೆಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುಳುಗಿಸಲು ಬೇರೆ ಯಾರ ಅಗತ್ಯವೂ ಇಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೇ ಪಕ್ಷವನ್ನು ಉಸಿರುಗಟ್ಟಿಸಿ ಮುಗಿಸಲಿದ್ದಾರೆ ಎಂದುಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ದೇಶದ ಸಂವಿಧಾನ ಹಾಗೂ ನೆಲದ ಕಾನೂನುಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಆದರೆ, ಕೆಲವರು ಕಾನೂನುಗಳಿಂತ ಮೇಲು ಎಂಬ ದುರಂಕಾರ ತೋರುತ್ತಿದ್ದು, ಅವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು.

ಮುಸ್ಲಿಂ ಧರ್ಮದಲ್ಲಿ ದೊಡ್ಡವರು, ಶ್ರೀಮಂತರು ಹಿಜಾಬ್ ಇಲ್ಲದೆಯೇ ಹೋಗುತ್ತಾರೆ. ಆದರೆ, ಬಡ ಹೆಣ್ಣುಮಕ್ಕಳನ್ನು ಹಿಜಾಬ್ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ. ಕೆಲವು ಕಾಣದ ಕೈಗಳು ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎಂಬ ಭಾವನೆಯನ್ನು ವಿದ್ಯಾರ್ಥಿನಿಯರ ತಲೆಯಲ್ಲಿ ಬಿತ್ತುತ್ತಿವೆ ಎಂದು ಶೋಭಾ ಕರಂದ್ಲಾಜೆ ದೂರಿದರು.

ADVERTISEMENT

ಶಿಕ್ಷಣ ಹಾಗೂ ಉದ್ಯೋಗಕ್ಕೆ ಧರ್ಮವಿಲ್ಲ. ಧೈರ್ಯದಿಂದ ಶಾಲೆಗಳಿಗೆ ಬಂದು ಉತ್ತಮ ಶಿಕ್ಷಣ ಪಡೆದು ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಬೇಕು. ಹಿಂದೂ ಹಾಗೂ ಮುಸ್ಲಿಂ ಧರ್ಮದ ವಿದ್ಯಾರ್ಥಿಗಳು ಸ್ವಂತ ಕಾಲಿನ ಮೇಲೆ ನಿಲ್ಲಬೇಕು. ಸಂಘಟನೆಗಳ ಪಿತೂರಿಗೆ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ನವೀನ್ ಮೃತದೇಹ ಶೀಘ್ರ ತಾಯ್ನಾಡಿಗೆ
ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್‌ ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಯತ್ನಗಳು ನಡೆದಿದ್ದು, ರಷ್ಯಾ, ಉಕ್ರೇನ್‌ ಹಾಗೂ ಪೋಲೆಂಡ್ ಸೇರಿದಂತೆ ನೆರೆಯ ದೇಶಗಳ ಜತೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಶುಕ್ರವಾರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಮುಂದುವರಿಸಿರುವ ಕಾರಣ ನವೀನ್ ಮೃತದೇಹವನ್ನು ತರಲು ಅಡ್ಡಿಯಾಗಿದೆ. ಉಕ್ರೇನ್‌ನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮತ್ತೊಬ್ಬ ಭಾರತೀಯನ ಮೃತದೇಹವನ್ನು ಈಗಾಗಲೇ ತರಲಾಗಿದೆ. ನವೀನ್ ಮೃತದೇಹವನ್ನು ಶೀಘ್ರ ತರಲಾಗುವುದು ಎಂದು ತಿಳಿಸಿದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.