ಉಡುಪಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ವೈಜ್ಞಾನಿಕ ವರದಿ ಸಹಿತ ಸಮರ್ಥ ವಾದ ಮಂಡನೆ ಮಾಡುವಲ್ಲಿ ವಿಫಲವಾಗುತ್ತಿರುವ ಪರಿಣಾಮ ಕರ್ನಾಟಕಕ್ಕೆ ಪ್ರತಿ ಬಾರಿ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಸೋಮವಾರ ಮಾತನಾಡಿದ ಅವರು, ರಾಜ್ಯಕ್ಕೆ ಪ್ರಸ್ತುತ ಕಾವೇರಿ ನದಿಯ ನೀರಿನ ಅಗತ್ಯ ಎಷ್ಟಿದೆ, ಕುಡಿಯುವ ಉದ್ದೇಶಕ್ಕೆ ಹಾಗೂ ಕೃಷಿಗೆ ಎಷ್ಟು ಪ್ರಮಾಣದ ನೀರು ಬೇಕು ಎಂಬ ಬಗ್ಗೆ ಸರ್ಕಾರದ ಬಳಿ ವೈಜ್ಞಾನಿಕ ವರದಿ ಇಲ್ಲ. ಕೆಆರ್‌ಎಸ್, ಕಬಿನಿ ಜಲಾಶಯದಲ್ಲಿ ಎಷ್ಟು ಪ್ರಮಾಣದ ಹೂಳು ತುಂಬಿದೆ, ನೀರು ಸಂಗ್ರಹ ಇದೆ ಎಂಬ ಮಾಹಿತಿಯೂ ಇಲ್ಲ ಎಂದು ಟೀಕಿಸಿದರು.
ಉಭಯ ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದ ನಡೆದಾಗ ತಮಿಳುನಾಡಿನಲ್ಲಿ ಕಾವೇರಿ ನೀರು ಬಳಸಿ ಬೇಸಾಯ ಮಾಡುವ ಭೂಮಿ ಪ್ರಮಾಣ ತೀರಾ ಕಡಿಮೆ ಇತ್ತು. ಪ್ರಸ್ತುತ ಕೃಷಿ 10 ಪಟ್ಟು ಹೆಚ್ಚಾಗಿದ್ದು, ನಿಗದಿಗಿಂತ ಹೆಚ್ಚು ನೀರು ಬಳಕೆ ಮಾಡಲಾಗುತ್ತಿದೆ. ಇಂತಹ ವೈಜ್ಞಾನಿಕ ವಿಚಾರಗಳನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮುಂದೆ ಇಡುವಲ್ಲಿ ವಿಫಲವಾಗಿದೆ ಎಂದರು.
ತಮಿಳುನಾಡು ಸರ್ಕಾರ ವೈಜ್ಞಾನಿಕ ವರದಿ ಸಹಿತ ಸಮರ್ಥವಾಗಿ ವಾದ ಮಂಡನೆ ಮಾಡುತ್ತಿರುವುದರಿಂದ ಪ್ರತಿ ಬಾರಿ ಗೆಲುವು ಪಡೆಯುತ್ತಿದೆ. ರಾಜ್ಯ ಸರ್ಕಾರ ಹಿನ್ನಡೆ ಅನುಭವಿಸುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿರುವ ಅಣೆಕಟ್ಟೆಗಳಲ್ಲಿ ಎಷ್ಟು ಪ್ರಮಾಣದ ನೀರಿದೆ, ತಮಿಳುನಾಡಿನ ಅಣೆಕಟ್ಟೆಗಳಲ್ಲಿ ಎಷ್ಟು ನೀರು ಸಂಗ್ರಹವಿದೆ ಎಂಬ ಬಗ್ಗೆ ತಜ್ಞರ ಸಮಿತಿಯಿಂದ ಅಧ್ಯಯನ ನಡೆಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕರ್ನಾಟಕದ ಪರವಾಗಿ ನಿಲ್ಲಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಯಾರನ್ನೂ ಕೇಳದೆ ತಮಿಳುನಾಡಿಗೆ ನೀರು
ತಮಿಳುನಾಡಿಗೆ ನೀರುಬಿಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಸಿಡಬ್ಲ್ಯುಸಿ ಮುಂದೆ ಹೋಗುವ ಮುನ್ನವೇ ರಾಜ್ಯ ಸರ್ಕಾರ ಪ್ರತಿದಿನ ತಮಿಳುನಾಡಿಗೆ 15,000 ಕ್ಯೂಸೆಕ್ ನೀರು ಹರಿಸಿದೆ. ವಿರೋಧ ಪಕ್ಷಗಳು, ಕನ್ನಡ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆಯದೆ, ಗಮನಕ್ಕೂ ತಾರದೆ ನೀರು ಬಿಟ್ಟಿದೆ. ಎಲ್ಲ ಮುಗಿದ ಬಳಿಕ ಸರ್ವಪಕ್ಷಗಳ ಸಭೆ ಕರೆದು ದೆಹಲಿಗೆ ಭೇಟಿ ನೀಡುವ ಪ್ರಹಸನ ನಡೆಸಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಆವರಿಸಿದೆ. ಅಣೆಕಟ್ಟೆಗಳಲ್ಲಿ ನೀರು ಇಲ್ಲವಾಗಿದೆ. ಕೆಆರ್‌ಎಸ್ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 117 ಟಿಎಂಸಿ ಅಡಿ ನೀರಿತ್ತು. ಆದರೆ, ಈ ವರ್ಷ 57 ಟಿಎಂಡಿ ಅಡಿ ಮಾತ್ರ ಉಳಿದಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯಲು 35 ಟಿಎಂಸಿ ಅಡಿ ಕಾವೇರಿ ನೀರಿನ ಅಗತ್ಯ ಇದ್ದು, ರಾಜ್ಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಐಎನ್‌ಡಿಐಎ ಒಕ್ಕೂಟವನ್ನು ಖುಷಿ ಪಡಿಸಲು ರಾಜ್ಯಕ್ಕೆ ಮಾರಕ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.