ADVERTISEMENT

ಸಿದ್ದಾಪುರ ಏತ ನೀರಾವರಿ ಯೋಜನೆ; ದ್ವಂದ್ವ ನಿಲುವು ಯಾಕೆ: ಬಿಜೆಪಿ ಮುಖಂಡ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:29 IST
Last Updated 3 ಜನವರಿ 2026, 6:29 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕುಂದಾಪುರ: ವಾರಾಹಿ ನೀರಾವರಿ ಯೋಜನೆಯ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವ ಜಿಲ್ಲಾ ರೈತ ಸಂಘದ ದ್ವಂದ್ವ ನಿಲುವು ಸಮಾಜದಲ್ಲಿ ಗೊಂದಲ ಮೂಡಿಸುತ್ತಿವೆ ಎಂದು ಬಿಜೆಪಿ ಬೈಂದೂರು ಮಂಡಲದ ಉಪಾಧ್ಯಕ್ಷ ರಾಘವೇಂದ್ರ ನೆಂಪು ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರಾಹಿ ಯೋಜನೆಯ ಮೂಲ ಉದ್ದೇಶ ಬಿಟ್ಟು ಬೇರೆ ಯೋಜನೆ ಮಾಡಬಾರದು ಎಂದು ಈ ಹಿಂದೆ ಧರಣಿ ಸತ್ಯಾಗ್ರಹ ಮಾಡಿದ್ದ ರೈತ ಸಂಘ, ಈಗ ಸಿದ್ದಾಪುರ ಏತ ನೀರಾವರಿ ಯೋಜನೆ ವಿಷಯದಲ್ಲಿ ನಿಲುವು ಬದಲಿಸಿದಂತೆ ಕಾಣುತ್ತಿದೆ. ಹೊಸಂಗಡಿ ಗ್ರಾಮದ ಹೋರಿಅಬ್ಬೆ ಡ್ಯಾಂ ಕೆಳಭಾಗದಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿಯಾದರೆ ನದಿ ಪಾತ್ರದ ಗ್ರಾಮಗಳಿಗೆ, ರೈತರಿಗೆ, ಪಟ್ಟಣ ಪಂಚಾಯಿತಿ, ಪುರಸಭೆಗಳಿಗೆ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಕಾಣಿಸಿಕೊಳ್ಳಬಹುದಾದ ಸಮಸ್ಯಗಳು ಪರಿಹಾರವಾಗಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಸ್ತುತ ಪ್ರಾರಂಭಿಸಲಾದ ಹೊಸ ಯೋಜನೆಗಳು ಮೂಲ ನದಿಯಲ್ಲೇ (ಹೋರಿಅಬ್ಬೆ ಡ್ಯಾಂ ಮೇಲ್ಭಾಗದಲ್ಲಿ) ಆರಂಭಗೊಂಡರೆ ವಾರಾಹಿ ಮೂಲ ನದಿ ಭವಿಷ್ಯದಲ್ಲಿ ಕಣ್ಮರೆಯಾಗುವ ಆತಂಕವಿದೆ. ಇದರಿಂದ ವಾರಾಹಿ ಕಾಲುವೆಗಳಲ್ಲಿ ನೀರಿನ ಕೊರತೆಯಾಗಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೇ ನಿಂತು ಹೋಗುವ ಅಪಾಯವಿದೆ ಎಂದು ಹೇಳಿದರು.

ADVERTISEMENT

ಬದಲಾವಣೆ ಆಕ್ಷೇಪಿಸುವವರು ಒಂದು ನಿರ್ದಿಷ್ಟ ಯೋಜನೆ ಬಗ್ಗೆ ಮಾತ್ರ ಮಾತನಾಡದೆ, ವಾರಾಹಿ ಕಾಲುವೆ ನೀರನ್ನು ನಂಬಿಕೊಂಡಿರುವ, ನದಿ ಪಾತ್ರದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಬ್ಬು ಬೆಳೆಸಲು ನೀರು ಬೇಕು ಎನ್ನುವವರು ಸಿದ್ದಾಪುರ ಏತ ನೀರಾವರಿ ಯೋಜನೆಯ ಬಗ್ಗೆ ಯಾಕೆ ದ್ವಂದ್ವ ನಿಲುವು ತಳೆದಿದ್ದಾರೆ ಎಂದು ಪ್ರಶ್ನಿಸಿದ ಅವರು, ಎಲ್ಲ ರೈತರಿಗೂ ಒಂದೇ ನ್ಯಾಯ ದೊರೆಯಬೇಕು. ಕರ್ಕುಂಜೆ, ನೆಂಪು, ಗುಲ್ವಾಡಿ, ಹಟ್ಟಿಯಂಗಡಿಗೆ ಈಗಾಗಲೇ ಸೌಕೂರು ಏತ ನೀರಾವರಿಯಿಂದ ಪ್ರಯೋಜನ ಆಗಿದ್ದು, ಪ್ರಸ್ತಾವಿತ ಕಾಮಗಾರಿಯಿಂದ ಕುಡಿಯುವ, ಕೃಷಿ ನೀರಿಗೆ ತೊಂದರೆ ಆಗಬಾರದು ಎಂದರು.

ಹೆಮ್ಮಾಡಿ ಮೀನುಗಾರರ ಸೊಸೈಟಿ ಅಧ್ಯಕ್ಷ ರಾಜೀವ ಶ್ರೀಯಾನ್, ರಮೇಶ್ ಮೊಗವೀರ, ಚಂದ್ರಶೇಖರ ಶೆಟ್ಟಿ, ಸತೀಶ ಮೊಗವೀರ, ರಾಜು ಮೆಂಡನ್, ಬಚ್ಚು ನಾಯ್ಕ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.