ADVERTISEMENT

ಜ್ಞಾನದ ಜೊತೆಗೆ ಕೌಶಲವೂ ಅವಶ್ಯ: ಬಾಲರಾಜ ಕಜಂಪಾಡಿ ಭಟ್

ನಿಟ್ಟೆ ಎನ್.ಎಂ.ಎಂ.ಎಂ. ತಾಂತ್ರಿಕ ಕಾಲೇಜು: ‘ಎಲಿಕ್ಸಿರ್’ ಮಾದರಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:48 IST
Last Updated 12 ನವೆಂಬರ್ 2025, 4:48 IST
ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ‘ಎಲಿಕ್ಸಿರ್’ ನಡೆಯಿತು
ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ‘ಎಲಿಕ್ಸಿರ್’ ನಡೆಯಿತು   

ಕಾರ್ಕಳ: ‘ಜ್ಞಾನ ಮತ್ತು ಕೌಶಲ ದ್ವಿಚಕ್ರ ವಾಹನದ ಎರಡು ಚಕ್ರಗಳಿದ್ದಂತೆ. ಜ್ಞಾನದಿಂದ ಮಾತ್ರ ಸಾಧಿಸಲು ಸಾಧ್ಯವಾಗದು. ಇಂದು ಪ್ರತಿ ಉದ್ಯೋಗದಲ್ಲೂ ಕೌಶಲ ಪ್ರಮುಖ ಅಂಶವಾಗಿ ಪರಿಗಣಿಸಲ್ಪಡುತ್ತದೆ’ ಎಂದು ಮುಂಬೈನ ಟ್ರಾಂಬೆ, ಟಾಟಾ ಪವರ್ ಸ್ಕಿಲ್ ಡೆವಲಪ್‌ಮೆಂಟ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಬಾಲರಾಜ ಕಜಂಪಾಡಿ ಭಟ್ ಹೇಳಿದರು.

ತಾಲ್ಲೂಕಿನ ನಿಟ್ಟೆ ಎನ್.ಎಂ.ಎಂ.ಎಂ. ತಾಂತ್ರಿಕ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಸೋಮವಾರ ಆಯೋಜಿಸಿದ್ದ ಮಾದರಿ ಪ್ರದರ್ಶನ ‘ಎಲಿಕ್ಸಿರ್’ನ 14ನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ನಾವೀನ್ಯತೆ, ಅನುಭವ ಆಧಾರಿತ ಅಧ್ಯಯನದತ್ತ ಗಮನ ಹರಿಸಬೇಕು ಎಂದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಗೋಪಾಲ್ ಮುಗೇರಾಯ ಮಾತನಾಡಿ, ಸೃಜನಶೀಲತೆ, ತಾಂತ್ರಿಕ ಶ್ರೇಷ್ಠತೆಯನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮ ಆಯೋಜಿಸಿದ ವಿಭಾಗದ ಪರಿಶ್ರಮ ಪ್ರಶಂಸನೀಯ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ನಾಗೇಶ್ ಪ್ರಭು ಮಾತನಾಡಿ, ಪ್ರದರ್ಶನ ಯಶಸ್ವಿಯಾಗಿ ನಡೆದಿದ್ದು ಇತರರಿಗೂ ಮಾದರಿಯಾಗಿದೆ ಎಂದರು.

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಸೂರ್ಯನಾರಾಯಣ ಕೆ. ಸ್ವಾಗತಿಸಿದರು. 10 ಕೈಗಾರಿಕಾ ಪ್ರತಿನಿಧಿಗಳು, 35 ಹಿರಿಯ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಎಲಿಕ್ಸಿರ್ ಸಂಯೋಜಕ ರವಿಕಿರಣ ರಾವ್ ವಂದಿಸಿದರು. ವಿದ್ಯಾರ್ಥಿ ಸಂಯೋಜಕಿ ಭೂಮಿಕಾ ಆಚಾರ್ಯ ಅತಿಥಿಯನ್ನು ಪರಿಚಯಿಸಿದರು. ಅನ್ವಿತಾ ಭಟ್ ನಿರೂಪಿಸಿದರು.

ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿದ್ಯುತ್ ವ್ಯವಸ್ಥೆಗಳು, ನವೀಕರಿಸಬಹುದಾದ ಇಂಧನ, ಸ್ವಯಂಚಾಲಿತ ತಂತ್ರಜ್ಞಾನ, ಎಂಬೆಡೆಡ್ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸೃಜನಶೀಲ ಪರಿಹಾರಗಳನ್ನು ಒಳಗೊಂಡ 100ಕ್ಕೂ ಹೆಚ್ಚು ಯೋಜನೆಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ವಿನ್ಯಾಸಗೊಳಿಸಿದ ಸಂಸ್ಥೆಯ ಆಂತರಿಕ ಉತ್ಪನ್ನಗಳಾದ ‘ಟ್ರೈಸಿಕಲ್’, ‘ಇ ಸ್ಪಿನ್ ಬೈಕ್’ ಸಂಸ್ಥೆಯ ಬಳಕೆಗೆ ಬಿಡುಗಡೆಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.