ಕಾಪು (ಪಡುಬಿದ್ರಿ): ‘ಸೌಜನ್ಯಾಳನ್ನು ಅತ್ಯಾಚಾರ ಮಾಡಿದ ಆರೋಪಿ ಸಂತೋಷ್ ರಾವ್‌ನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ. ಅವನನ್ನು ಮರುತನಿಖೆಗೆ ಒಳಪಡಿಸಿ ಆತ ನಿರಪರಾಧಿ ಎಂದು ಸಾಬೀತಾದರೆ, ನಾನು ಆತನ ಕಾಲು ತೊಳೆದು ನೀರು ಕುಡಿಯಲು ತಯಾರಿದ್ದೇನೆ. ಮತ್ತು ಮುಂದೆ ಸೌಜನ್ಯಾ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುತ್ತೇನೆ’ ಎಂದು ವಸಂತ ಗಿಳಿಯಾರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ, ಅವಹೇಳನ ಖಂಡಿಸಿ ಬುಧವಾರ ಇಲ್ಲಿನ ಹಳೆ ಮಾರಿಗುಡಿಯ ಸಭಾಭವನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆಸುತ್ತಿರುವ ಅಪಪ್ರಚಾರದ ಸೂತ್ರಧಾರಿಗಳು ಮಂಪರು ಪರೀಕ್ಷೆಗೆ ಒಳಪಡಿಸಲು ಅಡ್ಡಿಪಡಿಸುತ್ತಿದ್ದಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಸತ್ಯ ಬಯಲಾದರೆ ಅಪಪ್ರಚಾರದ ಸೂತ್ರಧಾರಿಗಳಿಗೆ ಅಸ್ತಿತ್ವ ಇಲ್ಲದಂತಾಗಿ ಸುಳ್ಳು ಜಗಜಾಹೀರಾಗುತ್ತದೆ. ಇದರಿಂದ ಅವರು ಪರೀಕ್ಷೆಗೆ ಒಳಪಡಿಸಲು ಬಿಡುತ್ತಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಯವರ ಅವಹೇಳನ ಸಮಸ್ತ ಹಿಂದೂ ಸಮಾಜದ ಅವಹೇಳನವಾಗಿದ್ದು, ನಾವೆಲ್ಲರೂ ಖಂಡಿಸೋಣ ಎಂದರು.
ಕಾರ್ಯಕ್ರಮದ ಮೊದಲಿಗೆ ಬೈದ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ಪ್ರಮುಖರಾದ ದಯಾನಂದ ಹೆಜಮಾಡಿ, ಪಡುಬಿದ್ರಿ ಬೀಡಿನ ಕಿನ್ಯಕ್ಕ ಬಳ್ಳಾಲ್, ದಾಮೋದರ ಶರ್ಮಾ, ಸಹನಾ ಕುಂದರ್, ನವೀನ್ ಅಮೀನ್ ಶಂಕರಪುರ, ದೇವದಾಸ್ ಹೆಬ್ಬಾರ್, ಸತ್ಯೆಂದ್ರ ಪೈ, ಉದಯ ಶೆಟ್ಟಿ ಇನ್ನಾ, ರಾಘವೇಂದ್ರ ಶೆಟ್ಟಿ, ಮಮತಾ ಶೆಟ್ಟಿ, ನವೀನ್ ಶೆಟ್ಟಿ ಕುತ್ಯಾರು, ಹರಿಣಾಕ್ಷಿ ದೇವಾಡಿಗ, ಅನಿಲ್ ಕುಮಾರ್, ಪ್ರಸಾದ್ ಶೆಣೈ, ನೀರೆ ಕೃಷ್ಣ ಶೆಟ್ಟಿ, ವಿಕ್ರಂ ಕಾಪು, ಗಣೇಶ್ ಆಚಾರ್ಯ, ಗಿರಿಧರ ಸುವರ್ಣ, ಮಹೇಶ್ ಅಂಚನ್, ಗೀತಾಂಜಲಿ ಸುವರ್ಣ, ಶಂಕರ ಕುಂದರ್ ಸೂಡಾ ಭಾಗವಹಿಸಿದ್ದರು.
ನವೀನ್ ಅಮೀನ್ ಸ್ವಾಗತಿಸಿದರು. ರೇಷ್ಮಾ ಶೆಟ್ಟಿ ನಿರೂಪಿಸಿದರು. ಮಮತಾ ಪೂಜಾರಿ ಎರ್ಮಾಳು ಪ್ರಾರ್ಥಿಸಿದರು. ನವೀನ್ ಅಮೀನ್ ಶಂಕರಪುರ ಸ್ವಾಗತಿಸಿದರು. ರೇಶ್ಮಾ ಉದಯ ಶೆಟ್ಟಿ ನಿರೂಪಿಸಿದರು. ಸಭೆಯ ಬಳಿಕ ಸರ್ವಿಸ್ ರಸ್ತೆಯ ಮೂಲಕ ಜಾಥಾ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಅಪಪ್ರಚಾರ, ಅವಹೇಳನ ಮಾಡುವವರ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.