ADVERTISEMENT

ಸ್ವಾರ್ಥಕ್ಕಾಗಿ ಗೊಂದಲ ಸೃಷ್ಟಿ: ಮುತಾಲಿಕ್ ವಿರುದ್ಧ ಶ್ರೀರಾಮಸೇನೆ ಮುಖಂಡ ಆರೋಪ

ಮಂಗಳೂರು ವಿಭಾಗ ಅಧ್ಯಕ್ಷ ಮೋಹನ್ ಭಟ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 15:43 IST
Last Updated 10 ಫೆಬ್ರುವರಿ 2023, 15:43 IST
ಉಡುಪಿಯ ಸಮ್ಮರ್ ಪಾರ್ಕ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ ಮೋಹನ್ ಭಟ್‌ ಮಾತನಾಡಿದರು.
ಉಡುಪಿಯ ಸಮ್ಮರ್ ಪಾರ್ಕ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ ಮೋಹನ್ ಭಟ್‌ ಮಾತನಾಡಿದರು.   

ಉಡುಪಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ರಾಜಕೀಯ ಸ್ವಾರ್ಥಕ್ಕಾಗಿ ಸಂಘಟನೆಯನ್ನು ಕಟ್ಟಲು ಹಗಲಿರುಳು ದುಡಿದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಮಂಗಳೂರು ವಿಭಾಗ ಅಧ್ಯಕ್ಷ ಮೋಹನ್ ಭಟ್‌ ಆರೋಪಿಸಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಪ್ರಮೋದ್ ಮುತಾಲಿಕ್ ಅವರನ್ನು ಹೊರ ದಬ್ಬಿದಾಗ ಹಿಂದೂ ಸಮಾಜದ ಮುಖಂಡರೆಲ್ಲ ಬೆಂಬಲಕ್ಕೆ ನಿಂತು ಶ್ರೀರಾಮ ಸೇನೆ ಸಂಘಟನೆಯನ್ನು ಕಟ್ಟಿ ಪ್ರಮೋದ್ ಮುತಾಲಿಕ್‌ ಅವರನ್ನು ನಾಯಕರನ್ನಾಗಿ ಮಾಡಲಾಯಿತು.

ಹಿಂದೂ ನಾಯಕರು, ಕಾರ್ಯಕರ್ತರ ಪರಿಶ್ರಮದಿಂದ ಬೆಳೆದ ಮುತಾಲಿಕ್ ರಾಜಕೀಯ ಉದ್ದೇಶಕ್ಕಾಗಿ ಸಂಘಟನೆಯನ್ನು ಕಟ್ಟಿ ಬೆಳೆಸಿದವರನ್ನು ಹೊರಗಿಡುವ ಕೆಲಸ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಪ್ರಮುಖರೊಂದಿಗೆ ಚರ್ಚಿಸದೆ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ.

ADVERTISEMENT

ಪರಿಣಾಮ ಜಿಲ್ಲೆಯ ಕಾರ್ಯಕರ್ತರು ಸಚಿವ ಸುನಿಲ್ ಕುಮಾರ್ ಹಾಗೂ ಮುತಾಲಿಕ್ ಬಣಗಳಾಗಿ ವಿಭಜನೆಯಾಗಿದ್ದು ಜಗಳಗಳು ನಡೆಯತ್ತಿವೆ. ಮುತಾಲಿಕ್ ಅವರ ರಾಜಕೀಯ ನಡೆಯ ಹಿಂದೆ ಹಲವರ ಷಡ್ಯಂತ್ರ ಇದೆ. ಶ್ರೀರಾಮ ಸೇನೆಯ ಬದಲಾಗಿ ‘ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ’ ರಚಿಸಿಕೊಂಡು ಪ್ರಚಾರ ಮಾಡಲಾಗುತ್ತಿದೆ.

ಮುತಾಲಿಕ್‌ ಅವರಿಗೆ ಗೌರವ ಪೂರ್ವಕವಾದ ರಾಜಕೀಯ ಸ್ಥಾನ ಮಾನ ಕೊಡಿಸಲು ಶ್ರೀರಾಮ ಸೇನೆ ಕಾರ್ಯಕರ್ತರು ಬೆಂಬಲಕ್ಕೆ ನಿಲ್ಲಲಿದ್ದಾರೆ. ಸಂಘಟನೆಯ ಭವಿಷ್ಯದ ಹಿತದೃಷ್ಟಿಯಿಂದ ಕೂಡಲೇ ಮುತಾಲಿಕ್‌ ರಾಜಕೀಯ ನಿರ್ಧಾರದಿಂದ ಹಿಂದೆ ಸರಿಯಬೇಕು. ಕಾರ್ಕಳದಲ್ಲಿ ನಿರ್ಮಾಣವಾಗಿರುವ ಗೊಂದಲವನ್ನು ಮುತಾಲಿಕ್ ಅವರೇ ನಿವಾರಿಸಬೇಕು ಎಂದು ಮನವಿ ಮಾಡಿದರು.

ಪ್ರಮೋದ್ ಮುತಾಲಿಕ್ ಅವರು ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಫೆ.20ರಂದು ನಡೆಯಲಿರುವ ಬೈಠಕ್‌ನಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೋಹನ್ ಭಟ್ ತಿಳಿಸಿದರು.

‘ಕಾರ್ಕಳ ಹೊರತಾದ ಕ್ಷೇತ್ರಕ್ಕೆ ಒತ್ತಾಯ’
ಕಾರ್ಕಳ ಹೊರತುಪಡಿಸಿ ರಾಜ್ಯದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರವನ್ನು ಮುತಾಲಿಕ್ ಅವರಿಗೆ ಬಿಟ್ಟುಕೊಡುವಂತೆ ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರ ಮುಖಂಡರಿಗೆ ಮನವಿ ಮಾಡಿದರೆ ಖಂಡಿತ ಒಪ್ಪುವ ವಿಶ್ವಾಸವಿದೆ. ಮುತಾಲಿಕ್ ಅವರು ರಾಜಕೀಯ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಕಾರ್ಕಳದಲ್ಲಿ ನಿಂತರೂ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಗೆಲ್ಲಲು ಸಾಧ್ಯವೇ ಇಲ್ಲ.
–ಮೋಹನ್ ಭಟ್‌, ಶ್ರೀರಾಮಸೇನೆ ಮಂಗಳೂರು ವಿಭಾಗ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.