ADVERTISEMENT

ಉಡುಪಿ: ಅರ್ಧತಾಸು ಜಿಲ್ಲಾ ಪಂಚಾಯಿತಿ ಸಿಇಒ ಆಗುವ ಅವಕಾಶ ಪಡೆದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 16:39 IST
Last Updated 30 ಜನವರಿ 2021, 16:39 IST
ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ಶನಿವಾರ ವಿದ್ಯಾರ್ಥಿನಿ ವರ್ಷಾ ಅರ್ಧ ತಾಸು ಸಿಇಒ ಕುರ್ಚಿಯಲ್ಲಿ ಕುಳಿತು ಜಿಲ್ಲೆಯ ಅಭಿವೃದ್ಧಿ ಕುರಿತು ಸಿಇಒ ಡಾ.ವೈ.ನವೀನ್ ಭಟ್‌ ಜತೆ ಚರ್ಚೆ ನಡೆಸಿದಳು.
ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ಶನಿವಾರ ವಿದ್ಯಾರ್ಥಿನಿ ವರ್ಷಾ ಅರ್ಧ ತಾಸು ಸಿಇಒ ಕುರ್ಚಿಯಲ್ಲಿ ಕುಳಿತು ಜಿಲ್ಲೆಯ ಅಭಿವೃದ್ಧಿ ಕುರಿತು ಸಿಇಒ ಡಾ.ವೈ.ನವೀನ್ ಭಟ್‌ ಜತೆ ಚರ್ಚೆ ನಡೆಸಿದಳು.   

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾಗೆ ಶನಿವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗುವ ಅವಕಾಶ ಒಲಿದು ಬಂದಿತ್ತು.

ಅರ್ಧ ತಾಸು ಸಿಇಒ ಖುರ್ಚಿಯಲ್ಲಿ ಕುಳಿತಿದ್ದ ವರ್ಷಾ ಜಿಲ್ಲೆಯ ಸ್ವಚ್ಛತೆಯ ಕುರಿತು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದರೆ, ಎದುರಿಗೆ ಸಾಮಾನ್ಯ ಕುರ್ಚಿಯಲ್ಲಿ ಕುಳಿತಿದ್ದ ಸಿಇಒ ಡಾ.ವೈ.ನವೀನ್ ಭಟ್ ಸಲಹೆಗಳನ್ನು ಸ್ವೀಕರಿಸಿದರು. ಜಿಲ್ಲೆಯ ಅಭಿವೃದ್ಧಿ ಕುರಿತು ಇಬ್ಬರೂ ಮುಕ್ತವಾಗಿ ಚರ್ಚಿಸಿದರು.

ಹೆಣ್ಣು ಮಕ್ಕಳ ದಿನದ ಉಡುಗೊರೆ:ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಉಡುಗೊರೆಯಾಗಿ ವರ್ಷಾಳಿಗೆ ಜಿಲ್ಲಾ ಪಂಚಾಯಿತಿಯ ಸಿಇಒ ಕುರ್ಚಿಯಲ್ಲಿ ಕೂರುವ ಅವಕಾಶ ಒದಗಿ ಬಂದಿತ್ತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ವರ್ಷಾ, ವೈಜ್ಞಾನಿಕ ಕಸ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಅಭಿಪ್ರಾಯ ಮಂಡಿಸಿ ಬೇಷ್ ಎನಿಸಿಕೊಂಡಳು.

ADVERTISEMENT

ವರ್ಷಾ ಆಯ್ಕೆಯಾಗಿದ್ದು ಹೇಗೆ:ಜ.24ರಂದು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ನಡೆದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರೀಡೆ, ಶಿಕ್ಷಣ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿದ 30 ಹೆಣ್ಣು ಮಕ್ಕಳಿಗೆ ಶನಿವಾರ ಜಿಲ್ಲಾ ಪಂಚಾಯಿತಿ ಕಚೇರಿಗೆ ಕರೆಸಿ ಜಿಲ್ಲಾ ಪಂಚಾಯಿತಿಯ ಕಾರ್ಯ ವಿಧಾನಗಳ ಕುರಿತು ಸಮಗ್ರ ಪರಿಚಯ ನೀಡಲಾಯಿತು.

ಪ್ರಮುಖ ಕಾರ್ಯಕ್ರಮಗಳಾದ ಸ್ವಚ್ಛ ಭಾರತ್‌ ಮಿಷನ್‌, ನರೇಗಾ ಯೋಜನೆ, ಪ್ರವಾಸೋದ್ಯಮ ಕಾರ್ಯಕ್ರಮ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಜತೆಗೆ, ಹೆಣ್ಣುಮಕ್ಕಳ ರಕ್ಷಣೆಗೆ ಇರುವ ಕಾನೂನುಗಳು, ಸರ್ಕಾರದ ಸೌಲಭ್ಯಗಳು, ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್‌ ಹಾಗೂ ಕೆಎಎಸ್ ಎದುರಿಸುವುದು ಹೇಗೆ ಎಂಬ ತರಬೇತಿ ನೀಡಲಾಯಿತು.ಇಡೀ ದಿನ ನಡೆದ ಕಾರ್ಯಕ್ರಮಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಭಾಗವಹಿಸಿದ್ದ ವರ್ಷಾಗೆ ಅರ್ಧ ತಾಸು ಸಿಇಒ ಆಗುವ ಅವಕಾಶ ನೀಡಲಾಯಿತು ಎಂದರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್‌.

ವೈಜ್ಞಾನಿಕ ಕಸ ವಿಂಗಡಣೆ ಹಾಗೂ ವಿಲೇವಾರಿ ಮಾಡುವಲ್ಲಿ ಜನರ ಮನಸ್ಥಿತಿ ಬದಲಾವಣೆಯ ಅಗತ್ಯತೆಗಳ ಕುರಿತು ವರ್ಷಾ ಮುಕ್ತವಾಗಿ ಚರ್ಚಿಸಿದಳು. ಉಡುಪಿ ಜಿಲ್ಲೆಯನ್ನು ಮತ್ತಷ್ಟು ಸುಂದರ ಹಾಗೂ ಸ್ವಚ್ಛ ನಗರವನ್ನಾಗಿಸಲು ಹಲವು ಸಲಹೆಗಳನ್ನು ನೀಡಿದಳು ಎಂದು ಸಿಇಒ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.