ADVERTISEMENT

ಮಕ್ಕಳಿಗೆ ಧರ್ಮದ ಮಹತ್ವ ತಿಳಿಸಿ: ಸುಧಾ ಮೂರ್ತಿ ಸಲಹೆ

ಕೃಷ್ಣ ಮಠದ ಸುತ್ತುಪೌಳಿಗೆ ಅಳವಡಿಸಿರುವ ಕಾಷ್ಠ ಯಾಳಿಯ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:44 IST
Last Updated 10 ಆಗಸ್ಟ್ 2025, 5:44 IST
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸುಧಾ ಮೂರ್ತಿ ಅವರು ಹೂವು ಕಟ್ಟಿದರು
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸುಧಾ ಮೂರ್ತಿ ಅವರು ಹೂವು ಕಟ್ಟಿದರು   

ಉಡುಪಿ: ತಾಯಂದಿರು ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯನ್ನು ಕಲಿಸಿಕೊಡಬೇಕು. ಆ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಶಕ್ತಿ ಅವರಿಗಿದೆ. ಜೊತೆಗೆ ಧರ್ಮದ ಮಹತ್ವವನ್ನೂ ಮಕ್ಕಳಿಗೆ ಹೇಳಿಕೊಡಬೇಕು ಎಂದು ರಾಜ್ಯ ಸಭಾ ಸದಸ್ಯೆ ಸುಧಾ ಮೂರ್ತಿ ಹೇಳಿದರು.

ಕೃಷ್ಣ ಮಠದ ಸುತ್ತುಪೌಳಿಗೆ ಅಳವಡಿಸಿರುವ ಕಾಷ್ಠ ಯಾಳಿಯ ಉದ್ಘಾಟನೆಯ ಅಂಗವಾಗಿ ಮಠದ ರಾಜಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ತಾಯಂದಿರಿಗೆ ಬೇಕಾದಷ್ಟು ಶಕ್ತಿ ಇರುತ್ತದೆ. ಆದರೆ ಅವರಿಗೆ ಅದರ ಅರಿವಿರುವುದಿಲ್ಲ. ಮಹಿಳೆಯರು ತಮ್ಮಲ್ಲಿ ಶಕ್ತಿ ಇದೆ ಎಂಬುದನ್ನು ಅರಿತು ಮನಸ್ಸಿನ ಸಂಕೋಲೆಯನ್ನು ತೆಗೆದು ಹಾಕಿ ಸಾಧನೆ ಮಾಡಬೇಕು. ಯಶಸ್ವಿ ಪುರುಷನ ಹಿಂದೆ ಅಲ್ಲ ಜೊತೆಯಲ್ಲಿ ಹೆಂಡತಿ ಇರುತ್ತಾಳೆ ಎಂದರು.

ಹಣ ಒಂದು ಸಾಧನ ಮಾತ್ರ. ಹಣವೇ ಜೀವನವಲ್ಲ. ಎಷ್ಟೇ ಹಣವಿದ್ದರೂ ಚಿನ್ನದ ಅಕ್ಕಿಯನ್ನು ತಿನ್ನಲು ಸಾಧ್ಯವೇ? ಬದುಕಿನಲ್ಲಿ ಭಕ್ತಿ, ಅಧ್ಯಾತ್ಮ ಇರಬೇಕು. ಅಂತಹ ಮೌಲ್ಯಗಳನ್ನು ಮಕ್ಕಳಿಗೂ ಕಲಿಸಿಕೊಡಬೇಕು ಎಂದು ಹೇಳಿದರು.

ತಂತ್ರಜ್ಞಾನ ಮತ್ತು ಸಂಸ್ಕೃತಿಗೆ ಸಂಬಂಧವಿಲ್ಲದಿದ್ದರೂ ಇವೆರಡೂ ಬೇಕು. ಬೇರೂ ಬೇಕು, ಆಕಾಶವೂ ಬೇಕು. ಭೂಮಿ, ಆಕಾಶದ ನಡುವೆ ನಾವಿರಬೇಕು ಎಂದರು.

ADVERTISEMENT

ನಮಗೆಲ್ಲರಿಗೂ ಭಗವದ್ಗೀತೆ ಆದರ್ಶವಾಗಿದೆ. ಬದುಕಲ್ಲಿ ಹೇಗೆ ಇರಬೇಕು ಎಂಬುದನ್ನು ಅದು ಹೇಳಿದೆ. ಸಣ್ಣ ವಯಸ್ಸಿನಿಂದಲೇ ಭಗವದ್ಗೀತೆ ಓದುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದೂ ತಿಳಿಸಿದರು.

ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ರಾಮ, ಕೃಷ್ಣ, ಕಾಶಿ ವಿಶ್ವನಾಥ ತಲೆಎತ್ತಿ ನಿಲ್ಲುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನೇತೃತ್ವದಲ್ಲಿ ನಮ್ಮ ದೇಶವು ಆರ್ಥಿಕತೆಯಲ್ಲಿ ಇಡೀ ಜಗತ್ತಿನಲ್ಲೇ ಮೊದಲ ಸ್ಥಾನಕ್ಕೇರಲಿ ಎಂದರು.

ತಮಿಳುನಾಡಿನ ರವಿ ಸ್ಯಾಮ್‌ ಭಾಗವಹಿಸಿದ್ದರು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ವಿದೇಶದಲ್ಲಿ ಮನೆ ಕಟ್ಟಬಹುದು ಆದರೆ ಮಠ ಕಟ್ಟುವುದು ಸುಲಭದ ಕೆಲಸವಲ್ಲ. ಆದರೆ ಆ ಕೆಲಸವನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ಸ್ವಾಮೀಜಿ ಮಾಡಿದ್ದಾರೆ.
–ಸುಧಾ ಮೂರ್ತಿ, ರಾಜ್ಯಸಭಾ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.