ADVERTISEMENT

ಉಡುಪಿ: 2ಸಾವಿರ ಎಕರೆ ಕಬ್ಬು ಕೃಷಿ, ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಯೋಜನೆ

ಬ್ರಹ್ಮಾವರ: ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಯೋಜನೆ

ಶೇಷಗಿರಿ ಭಟ್ಟ
Published 26 ನವೆಂಬರ್ 2021, 1:44 IST
Last Updated 26 ನವೆಂಬರ್ 2021, 1:44 IST
ಸಕ್ಕರೆ ಕಾರ್ಖಾನೆಯ ಹೊರನೋಟ
ಸಕ್ಕರೆ ಕಾರ್ಖಾನೆಯ ಹೊರನೋಟ   

ಬ್ರಹ್ಮಾವರ: ಇಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರ್ ನಿರ್ಮಾಣಕ್ಕೆ ಪೂರಕವಾಗಿ ಉಡುಪಿ ಜಿಲ್ಲೆಯಲ್ಲಿ ಕಬ್ಬು ಕೃಷಿ ಕ್ರಾಂತಿಗೆ ಪ್ರಥಮ ಹಂತದ ಅಭಿಯಾನವಾಗಿ ಸಾವಿರ ಎಕರೆ ಕಬ್ಬು ಬೆಳೆಯುವ ಯೋಜನೆಗೆ ಚಾಲನೆ ದೊರೆಯಲಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ‘ ಆಡಳಿತ ಮಂಡಳಿಯು ಇಥೆನಾಲ್, ಸಕ್ಕರೆ, ವಿದ್ಯುತ್ ಮತ್ತು ಇನ್ನಿತರ ಉತ್ಪಾದನಾ ಉದ್ಯಮವನ್ನು ಪ್ರಾರಂಭಿಸಲು ಯೋಜನೆ ಮಾಡಿದ್ದು, ಇದಕ್ಕೆ ಪುಷ್ಟಿ ನೀಡುವ ಪ್ರಯತ್ನವಾಗಿ ಉಡುಪಿ ಜಿಲ್ಲೆಯ ರೈತರನ್ನು, ಸಹಕಾರಿ ಸಂಸ್ಥೆಗಳನ್ನು, ಜನ ಪ್ರತಿನಿಧಿಗಳನ್ನು, ಉದ್ಯಮಿಗಳನ್ನು ಸಂಪರ್ಕಿಸಿ ವ್ಯಾಪಕ
ವಾಗಿ ಕಬ್ಬು ಬೆಳೆಯುವ ಯೋಜನೆಯನ್ನು ರೂಪಿಸಲಾಗಿದೆ. ಉಡುಪಿ ಜಿಲ್ಲೆಯ 150 ಗ್ರಾಮಗಳನ್ನು ಗುರುತಿಸಿ ರೈತರಿಗೆ ಉಚಿತ ಕಬ್ಬಿನ ಸಸಿಯನ್ನು ವಿತರಣೆ ಮಾಡಲಾಗುವುದು’ ಎಂದು ತಿಳಿಸಿದರು.

ವಾರಾಹಿ ನೀರಾವರಿ ಪೂರಕ: ಪ್ರಸ್ತುತ ವಾರಾಹಿ ನೀರಾವರಿ ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದ್ದು, ವಾರಾಹಿ ಜಲ ವಿದ್ಯುತ್ ಯೋಜನೆಯ ಟೇಲ್ ರೇಸ್ ನಿಂದ ಪ್ರತಿನಿತ್ಯ ಹೊರಬರುವ 1,100 ಕ್ಯೂಸೆಕ್‌ ನೀರನ್ನು ಉಪಯೋಗಿಸಿಕೊಂಡು ಕುಂದಾಪುರ-
ಬೈಂದೂರು-ಬ್ರಹ್ಮಾವರ ತಾಲ್ಲೂಕುಗಳ ಸುಮಾರು 38ಸಾವಿರ ಎಕರೆ ಕೃಷಿಗೆ ನೀರಾವರಿ ಒದಗಿಸಲು ಯೋಜಿಸಲಾಗಿ
ರುತ್ತದೆ. ಈ ಯೋಜನೆಯು 42.73 ಕಿ.ಮೀ. ಉದ್ದದ ಬಲದಂಡೆ ಕಾಲುವೆ 44.35 ಕಿ.ಮೀ. ಉದ್ದದ ಎಡದಂಡೆ ಕಾಲುವೆ ಹಾಗೂ 33 ಕಿ.ಮೀ. ಉದ್ದದ ಲಿಫ್ಟ್ ಕಾಲುವೆಗಳನ್ನು ಒಳಗೊಂಡಿ
ರುತ್ತದೆ. ಈಗಾಗಲೇ ಸುಮಾರು 10 ಸಾವಿರ ಎಕರೆ ರೈತರ ಜಮೀನಿಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ ಕಾಮಗಾರಿಯು ನಡೆಯುತ್ತಿದ್ದು ಸುಮಾರು 8ಸಾವಿರ ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.

ADVERTISEMENT

ಇದಲ್ಲದೆ ಕೃಷಿಗೆ ಪೂರಕವಾಗಿ, ಶುದ್ಧ ಬೆಲ್ಲ ಉತ್ಪಾದನಾ ಘಟಕದೊಂದಿಗೆ ಆಹಾರ ಸಂಸ್ಕರಣಾ ಘಟಕ, ಪರಿಶುದ್ಧ ತೆಂಗಿನ ಎಣ್ಣೆ, ಖಾದ್ಯ ತೈಲ, ಆಹಾರ ಉತ್ಪನ್ನ, ರೈಸ್ ಮಿಲ್, ಹಿಟ್ಟಿನ ಗಿರಣಿ, ಔಷಧ ತಯಾರಿ, ಗೋದಾಮು, ವಾಣಿಜ್ಯ ಮಳಿಗೆಗಳು, ಬಯಲು ರಂಗ ಮಂದಿರ ದಂತಹ ಉಪ ಘಟಕಗಳನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ಅಭಿಪ್ರಾಯ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.