ADVERTISEMENT

ದಾಖಲೆಗಾಗಿ ಸರಪಳಿ ಸುತ್ತಿ ಸಮುದ್ರದಲ್ಲಿ ಈಜು

24ರಂದು ಗಂಗಾಧರ್ ಜಿ.ಕಡೆಕಾರ್‌ ಅವರಿಂದ ಮಲ್ಪೆ ಪಡುಕೆರೆ ತೀರದಲ್ಲಿ 1.ಕಿ.ಮೀ ಈಜು

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 12:47 IST
Last Updated 20 ಜನವರಿ 2021, 12:47 IST

ಉಡುಪಿ: ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿಕೊಂಡು ಬ್ರೆಸ್ಟ್ ಸ್ಟ್ರೋಕ್ ಶೈಲಿನಲ್ಲಿ 1 ಕಿ.ಮೀ ಸಮುದ್ರದಲ್ಲಿ ಈಜಿ ದಾಖಲೆ ನಿರ್ಮಿಸುವ ಉದ್ದೇಶವಿದ್ದು, ಜ.24ರಂದು ಬೆಳಿಗ್ಗೆ 8ಕ್ಕೆ ಮಲ್ಪೆ ಪಡುಕೆರೆಯ ದೇವಿ ಭಜನಾ ಮಂದಿರ ಸಮೀಪದ ಕಡಲ ಕಿನಾರೆಯಿಂದ ಈಜಲು ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಗಂಗಾಧರ್ ಜಿ.ಕಡೆಕಾರ್‌ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕರಾವಳಿ ಕಾವಲುಪಡೆ ಎಸ್‌ಪಿ ಆರ್‌.ಚೇತನ್, ಎಡಿಸಿ ಸದಾಶಿವ ಪ್ರಭು, ದಕ್ಷಿಣ ಕನ್ನಡ–ಉಡುಪಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಸುಧಾಕರ್ ಕುಂದರ್, ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ಹಾಗೂ ಇಂಡಿಯನ್ ಬುಕ್‌ ಆಫ್‌ ರೆಕಾರ್ಡ್‌ ಸಂಸ್ಥೆಯ ತೀರ್ಪುಗಾರರಾದ ಆರ್‌.ಹರೀಶ್ ಉಪಸ್ಥಿತರಿರಲಿದ್ದಾರೆ ಎಂದರು.

ಆತ್ಮರಕ್ಷಣೆ, ಆರೋಗ್ಯ ಹಾಗೂ ಹವ್ಯಾಸಕ್ಕಾಗಿ ಪ್ರತಿಯೊಬ್ಬರೂ ಈಜು ಕಲಿಯಬೇಕು. ಈ ನಿಟ್ಟಿನಲ್ಲಿ ಈಚೆಗೆ ಅಂತರ ಜಿಲ್ಲಾ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸಿದ್ದೇನೆ. ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಈಜು ತರಬೇತಿ ನೀಡುತ್ತಿದ್ದೇನೆ ಎಂದರು.

ADVERTISEMENT

ಪಾಂಡುರಂಗ ಮಲ್ಪೆ ಮಾತನಾಡಿ, 65 ವರ್ಷದ ಜಿ.ಗಂಗಾಧರ್ ಇಳಿ ವಯಸ್ಸಿನಲ್ಲಿ ಈಜಿನಲ್ಲಿ ದಾಖಲೆ ಮಾಡುವ ಸಾಹಸಕ್ಕೆ ಕೈಹಾಕಿರುವುದು ಮಾದರಿ. 2006ರಲ್ಲಿ ಹವ್ಯಾಸಕ್ಕಾಗಿ ಈಜು ಕಲಿತು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. 31 ಚಿನ್ನ, 16 ಬೆಳ್ಳಿ, 9 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಗುಜರಾತ್, ಕೇರಳ, ಉತ್ತರಪ್ರದೇಶ ರಾಜ್ಯಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ತೋರಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚಂದ್ರ ಕುಂದರ್‌, ಹರ್ಷ ಮೈಂದನ್‌, ವಿಜಯ್ ಕುಂದರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.