ADVERTISEMENT

ಯುವತಿ ಜತೆ ಅಸಭ್ಯ ವರ್ತನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 17:00 IST
Last Updated 12 ಮಾರ್ಚ್ 2021, 17:00 IST

ಉಡುಪಿ: ಮಣಿಪಾಲದ ಈಶ್ವರ ನಗರದಲ್ಲಿ ಗುರುವಾರ ತಡರಾತ್ರಿ ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ವಿದ್ಯಾರ್ಥಿನಿಯ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೆಳ ಪರ್ಕಳದ ವಿವೇಕಾನಂದ ಕಾಮತ್‌, ಹಾಗೂ ಮಾರುತಿ ನಗರದ ಧನಂಜಯ ಬಂಧಿತರು. ಆರೋಪಿಗಳ ಅಸಭ್ಯ ವರ್ತನೆಯ ವಿರುದ್ಧ ವಿದ್ಯಾರ್ಥಿನಿ ನೀಡಿದ ದೂರಿನ ಮೇಲೆ ರಾತ್ರಿ ಗಸ್ತು ಕಾರ್ಯಾಚರಣೆಯಲ್ಲಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಣಿಪಾಲದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ತಿರುಗಾಡುವಾಗ ಎಚ್ಚರಿಕೆಯಿಂದ ಇರಬೇಕು. ಕಾನೂನು ಮೀರಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ವಿಷ್ಣುವರ್ಧನ್ ಎಚ್ಚರಿಕೆ ನೀಡಿದ್ದಾರೆ.‌

ADVERTISEMENT

ಮಲ್ಪೆ ಬೀಚ್‌ನಲ್ಲಿ ಚಿನ್ನ ದೋಚಿದ ಕಳ್ಳರು

ಉಡುಪಿ: ಮಲ್ಪೆ ಬೀಚ್‌ನಲ್ಲಿ ಮಹಿಳೆಯೊಬ್ಬರ ಪರ್ಸ್‌ನಲ್ಲಿದ್ದ 48.5 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಈಚೆಗೆ ಮೈಸೂರಿನಿಂದ ಮಲ್ಪೆ ಬೀಚ್‌ ನೋಡಲು ಬಂದಿದ್ದ ಪ್ರವಾಸಿಗರು, ಚಿನ್ನಾಭರಣವನ್ನೆಲ್ಲ ಬಿಚ್ಚಿ ಹ್ಯಾಂಡ್‌ ಪರ್ಸ್‌ನಲ್ಲಿಟ್ಟು ಸಂಬಂಧಿಯ ಕೈಗೆ ಕೊಟ್ಟು ಬೀಚ್‌ಗೆ ತೆರಳಿದ್ದರು.

ಈ ಸಂದರ್ಭ ಮಹಿಳೆ ನಿದ್ದೆಯ ಮಂಪರಿನಲ್ಲಿದ್ದಾಗ ಕಳ್ಳರು ಬಂಗಾರವನ್ನು ದೋಚಿ ಪರಾರಿಯಾಗಿದ್ದಾರೆ. ಕಳುವಾದ ಆಭರಣದ ಮೌಲ್ಯದ ₹ 2.50 ಲಕ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನ ಗ್ಲಾಸ್ ಒಡೆದು ಲ್ಯಾಪ್‌ಟಾಪ್ ಕಳವು

ಉಡುಪಿ: ಸಿಟಿ ಬಸ್‌ ನಿಲ್ದಾಣದ ರಾಜ್ ಟವರ್ಸ್ ಸಮೀಪ ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಒಡೆದು ಕಳ್ಳರು ಲ್ಯಾಪ್‌ ಕಳವು ಮಾಡಿದ್ದಾರೆ. ಬುಧವಾರ ರಕ್ಷಾ ಎಂಬುವರು ಕಾರು ನಿಲ್ಲಿಸಿ ಹೋಗಿದ್ದಾಗ, ಗಾಜು ಒಡೆದು ಹಿಂದಿನ ಸೀಟಿನಲ್ಲಿದ್ದ ₹ 25,000 ಮೌಲ್ಯದ ಲ್ಯಾಪ್‌ಟಾಪ್ ಕದ್ದಿದ್ದಾರೆ.

ಇದೇ ಮಾದರಿಯಲ್ಲಿ ಬೃಂದಾವನ ಸರ್ಕಲ್ ಬಳಿಯ ಉಡುಪಿ ಗ್ಲಾಸ್ ಹೌಸ್ ಎದುರಿಗೆ ನಿಲ್ಲಿಸಿದ್ದಕಾರಿನ ಗ್ಲಾಸ್‌ ಒಡೆದು ₹ 70,000 ಮೌಲ್ಯದ ಲ್ಯಾಪ್‌ಟಾಪ್ ಕಳವು ಮಾಡಲಾಗಿದೆ. ಕೆಎಂಸಿ ವೈದ್ಯರಾದ ಡಾ.ನಮನ್ ಅಗಾರ್ವಾಲ್ ಕಾರಿನಿಂದ ಲ್ಯಾಪ್‌ಟಾಪ್ ಕಳುವು ನಡೆದಿದೆ.

ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.