ADVERTISEMENT

ಕೃಷ್ಣಮಠದ ನಾಮಫಲಕದಲ್ಲಿ ‘ಕನ್ನಡ’ ಮಾಯ: ಕಸಾಪ ಖಂಡನೆ

ಕನ್ನಡ ನಾಮಫಲಕ ಹಾಕುವ ಕಾರ್ಯ ಪ್ರಗತಿಯಲ್ಲಿದೆ: ಮಠದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 12:34 IST
Last Updated 1 ಡಿಸೆಂಬರ್ 2020, 12:34 IST
ಶ್ರೀ ಕೃಷ್ಣ ಮಠ, ಉಡುಪಿ
ಶ್ರೀ ಕೃಷ್ಣ ಮಠ, ಉಡುಪಿ   
""

ಉಡುಪಿ: ಕೃಷ್ಣಮಠದ ನಾಮಫಲಕದಲ್ಲಿ ಕನ್ನಡ ಭಾಷೆ ತೆಗೆದು ಹಾಕಿರುವುದು ಸರಿಯಲ್ಲ. ಧಾರ್ಮಿಕ ಸಂಸ್ಥೆಯೊಂದು ಭಾಷೆಗಳ ಮಧ್ಯೆ ಕಂದಕ ಸೃಷ್ಟಿಸುವುದು ಖಂಡನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡ ನಾಡಿನ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ನಂತರ ಇತರೆ ಭಾಷೆಗಳನ್ನು ಬಳಸಬೇಕು. ಕೃಷ್ಣಮಠದಲ್ಲಿ ಕನ್ನಡ ತೆಗೆದು ಸೋದರ ಭಾಷೆಯಾದ ತುಳು ಬಳಸಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಈ ಸಂಬಂಧ ಜಾಗೃತ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಕನ್ನಡ ಭಾಷೆಯ ಫಲಕ ಅಳವಡಿಕೆಗೆ ಕಾರ್ಯಪ್ರವೃತ್ತರಾಗುತ್ತೇವೆ ಎಂದು ತಿಳಿಸಿದ್ದಾರೆ.

ಸಮಾಜಕ್ಕೆ ಮಾರ್ಗದರ್ಶನ ಮಾಡುವವರು ಇಂತಹ ಕೆಲಸಕ್ಕೆ ಕೈಹಾಕಿರುವುದು ಸರಿಯಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಸುರೇಂದ್ರ ಅಡಿಗ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮಠದ ಸ್ಪಷ್ಟನೆ:‘ಅದಮಾರು ಶ್ರೀಗಳ ಅಪೇಕ್ಷೆಯಂತೆ ಮಠವನ್ನು ಪುನಶ್ಚೇತನಗೊಳಿಸುವ ಸಂದರ್ಭದಲ್ಲಿ ಪ್ಲಾಸ್ಟಿಕ್ ನಾಮಫಲಕದ ಬದಲಾಗಿ ಮರದ ನಾಮಫಲಕ ಅಳವಡಿಸುವ ಪ್ರಕ್ರಿಯೆ ನಡೆದಿತ್ತು. ಮೊದಲು ಕನ್ನಡ, ನಂತರ ಸಂಸ್ಕೃತ ಹಾಗೂ ತುಳುಲಿಪಿಯಲ್ಲಿ ಫಲಕ ಹಾಕಲು ತೀರ್ಮಾನಿಸಲಾಗಿತ್ತು. ಆದರೆ, ಲಕ್ಷದೀಪೋತ್ಸವ ಬಂದ ಕಾರಣ ಕನ್ನಡದ ಫಲಕ ಸಿದ್ಧಗೊಳಿಸಲು ವಿಳಂಬವಾಯಿತು. ಸಿದ್ಧವಿದ್ದ ಸಂಸ್ಕೃತ ಹಾಗೂ ತುಳು ಭಾಷೆಯ ಫಲಕವನ್ನು ಸಧ್ಯ ಅಳವಡಿಸಲಾಗಿದೆ. ಮಠದ ಗ್ರಂಥಲಿಪಿ ತುಳು ಭಾಷೆಯಲ್ಲಿರುವ ಕಾರಣ ತುಳುವಿಗೂ ಮಾನ್ಯತೆ ಸಿಗಬೇಕು ಎಂದು ಫಲಕ ಹಾಕಲಾಗಿದೆ. ಶೀಘ್ರವೇ ಕನ್ನಡದ ಫಲಕವನ್ನು ಹಾಕಲಾಗುವುದು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.