ADVERTISEMENT

ಉಡುಪಿ ಟೂರಿಸಂ ಕನೆಕ್ಟ್‌ 7ರಿಂದ 9ರವರೆಗೆ

ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಕರಾವಳಿ ಪ್ರವಾಸೋದ್ಯಮ ಸಂಘಟನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 16:08 IST
Last Updated 5 ನವೆಂಬರ್ 2022, 16:08 IST
ಮಲ್ಪೆ ಬೀಚ್
ಮಲ್ಪೆ ಬೀಚ್   

ಉಡುಪಿ: ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಅಸೋಸಿಯೇಷನ್ ಆಪ್‌ ಕೋಸ್ಟಲ್ ಟೂರಿಸಂ ನ.7ರಿಂದ 9ರವರೆಗೆ ಉಡುಪಿ ಟೂರಿಸಂ ಕನೆಕ್ಟ್–2022 ಕಾರ್ಯಕ್ರಮ ಆಯೋಜಿಸಿದೆ ಎಂದು ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ ಎಸ್‌.ಶೆಟ್ಟಿ ತಿಳಿಸಿದರು.

ವೈಟ್ ಲೋಟಸ್‌ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಮಾತನಾಡಿ, ಮೂರು ದಿನಗಳ ಕಾರ್ಯಕ್ರಮದಲ್ಲಿ ದೇಶದ ಮೂಲೆ ಮೂಲೆಗಳಿಂದ ಆಯ್ದ 45 ಟ್ರಾವೆಲ್ ಏಜೆಂಟರು, ಬ್ಲಾಗ್ ಬರಹಗಾರರು, ಇವೆಂಟ್ ಸಂಯೋಜಕರು, ಮೈಸ್ ಸಂಯೋಜಕರು, ಪ್ರವಾಸೋದ್ಯಮ ಮಾಧ್ಯಮ ಸಲಹೆಗಾರರು, ಪತ್ರಕರ್ತರು ಭಾಗವಹಿಸಲಿದ್ದಾರೆ. ಇವರೆಲ್ಲರಿಗೂ ಜಿಲ್ಲೆಯ ಸಮಗ್ರ ಮಾಹಿತಿ ಒದಗಿಸುವುದರ ಜತೆಗೆ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಪರಿಚಯಿಸಲಾಗುವುದು ಎಂದರು.

ನ.8ರಂದು ಮಧ್ಯಾಹ್ನ 2.30ಕ್ಕೆ ಕಿದಿಯೂರು ಹೋಟೆಲ್‌ನ ಶೇಷಶಯನ ಸಭಾಂಗಣದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯ ದಕ್ಷಿಣ ಪ್ರಾಂತ ನಿರ್ದೇಶಕ ಮಹಮ್ಮದ್ ಫಾರೂಕ್ ಭಾಗವಹಿಸಿ ಹೋಂಸ್ಟೇ ಪ್ರಾರಂಭಿಸುವ ವಿಧಾನ ಹಾಗೂ ನಿಯಮಾವಳಿಗಳ ಕುರಿತು ಮಾಹಿತಿ ನೀಡಲಿದ್ದಾರೆ.

ADVERTISEMENT

ಕೆನರಾ ಬ್ಯಾಂಕ್‌ನ ಸಹಾಯಕ ಜನರಲ್ ಮ್ಯಾನೆಜರ್ ಜೋಷಿ ಉಡುಪಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬ್ಯಾಂಕ್‌ನಿಂದ ಸಿಗುವ ಆರ್ಥಿಕ ಸಹಕಾರದ ಬಗ್ಗೆ ತಿಳಿಸಲಿದ್ದಾರೆ. ಸಿಆರ್‌ಝೆಡ್ ಅಧಿಕಾರಿಗಳು ಹೊಸ ಸರಳೀಕೃತ ಸಿಆರ್‌ಝೆಡ್ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಉಡುಪಿ ಪ್ರವಾಸೋದ್ಯಮ ಭವಿಷ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಉಡುಪಿ ಪ್ರವಾಸೋದ್ಯಮ ವಿಶೇಷ ಪ್ರವಾಸ ಎಕ್ಸಿಬಿಷನ್ ಹಮ್ಮಿಕೊಳ್ಳಲಾಗಿದೆ ಎಂದರು.

ಮಧ್ಯಾಹ್ನ ನಡೆಯವ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು ಸದುಪಯೋಗಪಡಿಸಿಕೊಳ್ಳಬಹುದು. ಉಡುಪಿ ಜಿಲ್ಲೆಗೆ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದೆ ಬರುವ ಉದ್ಯಮಿಗಳಿಗೆಹೋಟೆಲ್‌, ರೆಸಾರ್ಟ್‌, ಹೋಂ ಸ್ಟೇ, ವಾಟರ್ ಸ್ಪೋರ್ಟ್ಸ್‌ ಸೇರಿದಂತೆ ಪ್ರವಾಸೋದ್ಯಮ ಸಂಬಂಧಿ ಉದ್ಯಮ ಆರಂಭಿಸಲು ಅಗತ್ಯ ನೆರವು, ಮಾಹಿತಿಯನ್ನು ಒಂದೇ ಸೂರಿನಡಿ ಒದಗಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.

ಸುದ್ದಿಗೋಷ್ಠಿಯಲ್ಲಿ ಮರವಂತೆ ನಾಗರಾಜ್ ಹೆಬ್ಬಾರ್, ಕಾರ್ಯದರ್ಶಿ ಗೌರವ ಶೇಣವ, ಕೋಶಾಧಿಕಾರಿ ಚಂದ್ರಕಾಂತ್, ಉದಯಶಂಕರ ಶೆಣೈ, ವಸಂತ್ ರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.