ADVERTISEMENT

ಸವಾರರೇ ಎಚ್ಚರ, ತಲೆ ಮೇಲೆಯೇ ಆಪತ್ತು!

ಉಡುಪಿ ನಗರದಲ್ಲಿ ಶಿಥಿಲಾವಸ್ಥೆ ತಲುಪಿರುವ ಟ್ರಾಫಿಕ್ಸ್ ಸಿಗ್ನಲ್‌ಗಳು

ಬಾಲಚಂದ್ರ ಎಚ್.
Published 13 ಜೂನ್ 2022, 4:13 IST
Last Updated 13 ಜೂನ್ 2022, 4:13 IST
ಉಡುಪಿಯ ಕಲ್ಪನಾ ಚಿತ್ರಮಂದಿರ ಸಮೀಪದಲ್ಲಿ ಕೆಟ್ಟುನಿಂತಿರುವ ಟ್ರಾಫಿಕ್ ಸಿಗ್ನಲ್‌
ಉಡುಪಿಯ ಕಲ್ಪನಾ ಚಿತ್ರಮಂದಿರ ಸಮೀಪದಲ್ಲಿ ಕೆಟ್ಟುನಿಂತಿರುವ ಟ್ರಾಫಿಕ್ ಸಿಗ್ನಲ್‌   

ಉಡುಪಿ: ವಾಹನ ಸವಾರರೇ ಎಚ್ಚರ ! ನಗರದ ಟ್ರಾಫಿಕ್ ಸಿಗ್ನಲ್‌ಗಳ ಬಳಿ ವಾಹನಗಳನ್ನು ಚಲಾಯಿಸುವಾಗ ಜಾಗ್ರತೆ ಇರಲಿ. ಸ್ವಲ್ಪ ಎಚ್ಚರ ತಪ್ಪಿದರೂ ‘ಅಪಾಯ’ವನ್ನು ಮೈಮೇಲೆ ಆಹ್ವಾನಿಸಿಕೊಳ್ಳಬೇಕಾಗುತ್ತದೆ. ಪ್ರಾಣಕ್ಕೆ ಕುತ್ತು ಬರಲೂ ಬಹುದು.

ಸಂಚಾರ ದಟ್ಟಣೆ ನಿವಾರಿಸುವ ಉದ್ದೇಶದಿಂದ ದಶಕಗಳ ಹಿಂದೆ ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಅತಿ ಹೆಚ್ಚು ದಟ್ಟಣೆ ಇರುವ ಸ್ಥಳಗಳಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್‌ಗಳು ತುಕ್ಕು ಹಿಡಿದಿದ್ದು ಯಾವ ಕ್ಷಣದಲ್ಲಾದರೂ ಮುರಿದುಕೊಂಡು ವಾಹನ ಸವಾರರ ಮೈಮೇಲೆ ಬೀಳುವ ಸ್ಥಿತಿ ತಲುಪಿವೆ.

ಉಡುಪಿ ನಗರದಲ್ಲಿರುವ ಎಲ್ಲ ಟ್ರಾಫಿಕ್ ಸಿಗ್ನಲ್‌ಗಳು ಕೆಟ್ಟು ನಿಂತಿವೆ. ವಾಹನ ಸವಾರರು ಸಿಗ್ನಲ್‌ಗಳಲ್ಲಿ ಕೆಂಪು, ಹಳದಿ, ಹಸಿರು ದೀಪಗಳು ಉರಿಯುವುದನ್ನು ನೋಡದೇ ಹಲವು ವರ್ಷಗಳೇ ಕಳೆದಿವೆ. ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಯಾವ ಕೊಡುಗೆ ನೀಡದ, ತುಕ್ಕು ಹಿಡಿದು ನಿರುಪಯುಕ್ತವಾಗಿ ನಿಂತಿರುವ, ನಗರದ ಅಂದ ಗೆಡಿಸುತ್ತಿರುವ ಟ್ರಾಫಿಕ್ಸ್ ಸಿಗ್ನಲ್‌ಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ADVERTISEMENT

ಎಲ್ಲೆಲ್ಲಿ ಅಧ್ವಾನ: ಉಡುಪಿ ನಗರದಿಂದ ಉಡುಪಿ–ಮಣಿಪಾಲ (ರಾಷ್ಟ್ರೀಯ ಹೆದ್ದಾರಿ 169 ಎ) ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ (ಕಿದಿಯೂರು ಹೋಟೆಲ್ ಮಾರ್ಗವಾಗಿ) ಭಾಗದಲ್ಲಿ ಟ್ರಾಫಿಕ್ ಸಿಗ್ನಲ್‌ ಅಗತ್ಯವಾಗಿ ಬೇಕಿತ್ತು. ಮಲ್ಪೆ ಹಾಗೂ ಮಣಿಪಾಲದ ಕಡೆಗೆ ಹೋಗುವ ಎಲ್ಲ ಪ್ರವಾಸಿಗರ ವಾಹನಗಳು, ಕುಂದಾಪುರ ಕಡೆಯಿಂದ ಉಡುಪಿಗೆ ಬರುವ ವಾಹನಗಳು ಇದೇ ರಸ್ತೆಯನ್ನು ಹಾದು ಹೋಗುವುದರಿಂದ ಇಲ್ಲಿ ಸದಾ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಈ ಭಾಗದಲ್ಲಿ ಟ್ರಾಫಿಕ್ ಸಿಗ್ನಲ್ ಇದ್ದರೂ ಕಾರ್ಯ ನಿರ್ವಹಿಸುತ್ತಿಲ್ಲ. ಪರಿಣಾಮ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿ ಸಂಜೆಯ ಹೊತ್ತು ಸಂಚಾರ ಸಮಸ್ಯೆ ಉಂಟಾಗುತ್ತದೆ.

ಆತಂಕದ ವಿಚಾರ ಎಂದರೆ ಟ್ರಾಫಿಕ್ ಸಿಗ್ನಲ್‌ ಈಗಾಗಲೇ ಸ್ವಲ್ಪ ವಾಲಿದ್ದು, ಯಾವ ಸಮಯದಲ್ಲಾದರೂ ಧರೆಗುರುಳುವ ಆತಂಕ ಇದೆ. ಸಿಗ್ನಲ್‌ಗೆ ಅಳವಡಿಸಿರುವ ಖಾಸಗಿ ಕಂಪೆನಿಗಳ ಜಾಹೀರಾತು ಫಲಕಗಳಿಗೆ ಹಾಕಿರುವ ಉಕ್ಕುಗಳು ತುಕ್ಕು ಹಿಡಿದಿದ್ದು ತುಂಡಾಗಿ ಬೀಳಲು ಕ್ಷಣಗಣನೆ ಆರಂಭವಾಗಿದೆ.

ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ವೃತ್ತವಾಗಿರುವ ಕಲ್ಸಂಕದಲ್ಲಿಯೂ ಟ್ರಾಫಿಕ್ ಸಿಗ್ನಲ್‌ ಕಾರ್ಯ ನಿರ್ವಹಿಸುತ್ತಿಲ್ಲ. ಮಲ್ಪೆ, ಮಣಿಪಾಲ ಹಾಗೂ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಉಡುಪಿ ಪ್ರವೇಶಿಸುವ ಎಲ್ಲ ವಾಹನಗಳು ಕಲ್ಸಂಕ ವೃತ್ತದ ಮೂಲಕವೇ ಸಾಗಬೇಕಿರುವುದರಿಂದ ಇಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಇರುತ್ತದೆ.

ಟ್ರಾಫಿಕ್ ಸಿಗ್ನಲ್‌ ಕಾರ್ಯ ನಿರ್ವಹಿಸದೆ ಸವಾರರು ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿದೆ. ಸಂಚಾರ ಠಾಣೆಯ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ದಟ್ಟಣೆ ನಿವಾರಿಸಲು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ.

ಕೆಎಂ ಮಾರ್ಗದಲ್ಲಿರುವ ಮುಖ್ಯ ಅಂಚೆ ಕಚೇರಿ ಎದುರಿಗಿರುವ ಟ್ರಾಫಿಕ್ ಸಿಗ್ನಲ್‌ ಕೆಲಸ ಮಾಡುತ್ತಿಲ್ಲ. ಉಡುಪಿಯಿಂದ ಮಂಗಳೂರು ಕಡೆಗೆ ತೆರಳುವ ಎಲ್ಲ ಖಾಸಗಿ ಬಸ್‌ಗಳು ಇಲ್ಲಿ ನಿಲುಗಡೆಯಾಗುತ್ತವೆ. ಟ್ರಾಫಿಕ್ ಸಿಗ್ನಲ್ ಶಿಥಿಲವಾಗಿರುವುದರಿಂದ ಪ್ರಯಾಣಿಕರು ನಿಲ್ಲಲು ಆತಂಕ ಪಡುವಂತಾಗಿದೆ.

ಕಲ್ಪನಾ ಚಿತ್ರಮಂದಿರದ ಎದುರಿಗಿನ ಕೂಡು ರಸ್ತೆಯಲ್ಲಿರುವ ಮೂರು ಟ್ರಾಫಿಕ್ ಸಿಗ್ನಲ್‌ಗಳು ಕೆಟ್ಟಿದ್ದು ಬಾಗಿಕೊಂಡಿವೆ. ಕಂಬಕ್ಕೆ ಅಳವಡಿಸಿರುವ ಲೈಟ್‌ಗಳು ನೇತಾಡುತ್ತಿವೆ. ವಯರ್‌ಗಳು ಹೊರಬಂದು ಪಾದಚಾರಿಗಳಿಗೆ ತಾಗುತ್ತಿವೆ. ಕಂಬಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಪಾಯದ ಮುನ್ಸೂಚನೆ ಅರಿವಿಗೆ ಬರುತ್ತದೆ.

ಕೋರ್ಟ್‌ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಬಳಿ, ಜೋಡುಕಟ್ಟೆಯ ಬಳಿ, ಕಿನ್ನಿಮೂಲ್ಕಿ ಬಳಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ ನಗರಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಾಣದಿರುವುದು ದುರಂತ. ಕಂಡರೂ ಜಾಣ ಕುರುಡು ಇರಬಹುದು ಎಂಬುದು ಸಾರ್ವಜನಿಕರ ಪ್ರಶ್ನೆ.

ಈಚೆಗೆ ಅವಘಡ: ಜೋಡುಕಟ್ಟೆ ಬಳಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್‌ ಈಚೆಗೆ ಸುರಿದ ಗಾಳಿ ಮಳೆಗೆ ಧರೆಗುರುಳಿತ್ತು. ಅದೃಷ್ಟವಶಾತ್ ಸವಾರರ ಮೇಲೆ ಬೀಳಲಿಲ್ಲ. ಆದರೆ, ಮುಂದಾಗುವ ಅವಘಡಗಳ ಮುನ್ಸೂಚನೆಯನ್ನಂತೂ ನೀಡಿದೆ. ಕೂಡಲೇ ಎಚ್ಚೆತ್ತುಕೊಂಡು ಅಪಾಯಕ್ಕೆ ಆಹ್ವಾನ ನೀಡುವಂತಿರುವ ಟ್ರಾಫಿಕ್‌ ಸಿಗ್ನಲ್‌ಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರಾದ ರಾಮಚಂದ್ರ ಭಟ್‌.

ಪ್ರಸ್ತಾವ ನನೆಗುದಿಗೆ: ಉಡುಪಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಿಸಲು ಹಾಗೂ ಅಪಘಾತಗಳ ಪ್ರಮಾಣ ತಡೆಯಲು ನಗರದ ಆಯಕಟ್ಟಿನ ಜಾಗಗಳಲ್ಲಿ ಸ್ಮಾರ್ಟ್‌ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆಗೆ ಕೆಲವು ವರ್ಷಗಳ ಹಿಂದೆ ಪೊಲೀಸ್ ಇಲಾಖೆ ನಗರಸಭೆಗೆ ಪ್ರಸ್ತಾವ ಸಲ್ಲಿಸಿತ್ತು. ವರ್ಷಗಳು ಕಳೆದರೂ ಪ್ರಸ್ತಾವ ಕಾರ್ಯರೂಪಕ್ಕೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.