ADVERTISEMENT

ಅಮೆರಿಕಾದಲ್ಲಿ ಕಾರ್ಕಳದ ವೈದ್ಯ ಡಾ.ಅವಿನಾಶ್‌ ಅಡಿಗಗೆ ಡ್ರೈವ್ ಆಫ್‌ ಹಾನರ್‌

ಮಗನ ಸಾಧನೆ ಬಗ್ಗೆ ಹೆಮ್ಮೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 17:39 IST
Last Updated 11 ಮೇ 2020, 17:39 IST
   

ಉಡುಪಿ:ಅಮೇರಿಕಾದ ನ್ಯೂಯಾರ್ಕ್‌ನ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕನ್ನಡಿಗ ಹಾಗೂ ಕಾರ್ಕಳ ಮೂಲದ ಡಾ.ಅವಿನಾಶ್‌ ಅಡಿಗ (36) ಅವರಿಗೆ ಟೆಕ್ಸಾಸ್‌ನಲ್ಲಿ ‘ಡ್ರೈವ್ ಆಫ್‌ ಹಾನರ್’‌ ಗೌರವ ದೊರೆತಿದೆ.

ಡಾ.ಅವಿನಾಶ್ ಸೇವೆಗೆ ಪ್ರತಿಯಾಗಿ ನ್ಯೂಜೆರ್ಸಿಯಲ್ಲಿರುವ ಅನಿವಾಸಿ ಭಾರತೀಯ ಸಂಘಟನೆಗಳು ಹಾಗೂ ಬೃಂದಾವನ ಕನ್ನಡಿಗರ ಸಂಘ ಈಚೆಗೆ ಅವರಿಗೆ ‘ಡ್ರೈವ್ ಆಫ್‌ ಹಾನರ್’ ಗೌರವ ಸಲ್ಲಿಸಿದವು. ಅವರ ನಿವಾಸದ ಮುಂದೆ ಸಾಲಾಗಿ ವಾಹನಗಳ‌ಲ್ಲಿ ಸಾಗುತ್ತಾ ‘ಧನ್ಯವಾದ’ ಸಮರ್ಪಿಸಿದವು.

ಮಗನ ಸಾಧನೆಯ ಬಗ್ಗೆ ಪೋಷಕರಾದ ಗೋವಿಂದ ಅಡಿಗ ಹಾಗೂ ಶಕುಂತಲಾ ಅಡಿಗ ಅವರಿಗೆ ಅಪಾರ ಹೆಮ್ಮೆ ಇದೆ. ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ತಾಯಿ ಶಂಕುತಲಾ ಅಡಿಗ, ‘ವೈದ್ಯ ವೃತ್ತಿಗೆ ಸಮಾಜದಲ್ಲಿ ಹೆಚ್ಚು ಗೌರವವಿದ್ದು, ಸಮಾಜಸೇವೆ ಮಾಡಲು ಅವಕಾಶವೂ ಇರುವ ಕಾರಣ ಅಪ್ಪನ ಆಸೆಯಂತೆ ಅವಿನಾಶ್ ವೈದ್ಯ ವೃತ್ತಿ ಆಯ್ಕೆ ಮಾಡಿಕೊಂಡ. ಅಂದುಕೊಂಡಂತೆ ವೈದ್ಯ ವೃತ್ತಿಯಲ್ಲಿ ಯಶಸ್ವಿಯೂ ಆಗಿದ್ದಾನೆ’ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

ಬಾಲ್ಯದಿಂದಲೂ ಕಷ್ಟಪಟ್ಟು ಓದುತ್ತಿದ್ದ ಅವಿನಾಶ್‌, ಸರ್ಕಾರಿ ಸೀಟಿನಲ್ಲಿ ಎಂಬಿಬಿಎಸ್‌ ಮುಗಿಸಿ ಯಾರ ಶಿಫಾರಸು ಇಲ್ಲದೆ ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದಾರೆ.ಅಮೇರಿಕಾಗೆ ತೆರಳಿ 8 ವರ್ಷಗಳಾಗಿದ್ದು, ಈ ಅವಧಿಯಲ್ಲಿ ಸಾವಿರಾರು ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ ಎಂದರು.

ಅಮೇರಿಕಾದಲ್ಲಿ ಕೋವಿಡ್ ಸೋಂಕು ವಿಪರೀತವಾಗಿ ವ್ಯಾಪಿಸಿದ್ದು, ಅವಿನಾಶ್‌ ಅಲ್ಲಿನ ಮೂರು ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳಲ್ಲಿ 1,500 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಡ್ರೈವ್‌ ಆಫ್‌ ಹಾನರ್ ಗೌರವ ಸಿಕ್ಕಿದೆ. ಈಗೌರವ ಸಿಕ್ಕ ಬಳಿಕ ವಿಡಿಯೋ ಕರೆ ಮಾಡಿದ ಅವಿನಾಶ್‌ ‘ವೈದ್ಯ ವೃತ್ತಿ ಆಯ್ಕೆಮಾಡಿಕೊಂಡಿದ್ದು ಸಾರ್ಥಕವಾಯಿತು ಎಂದರು ಎಂಬುದಾಗಿ ಶಕುಂತಲಾ ಅಡಿಗ ತಿಳಿಸಿದರು.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಹಗಲಿರುಳು ಶ್ರಮಿಸುತ್ತಿರುವ ಮಗನ ಬಗ್ಗೆ ಒಂದು ಕಡೆ ಹೆಮ್ಮೆ ಮತ್ತೊಂದು ಕಡೆ ಆತಂಕವಿದೆ. ಆತನ ಶ್ರೇಯಸ್ಸಿಗಾಗಿ ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಸೋಂಕು ಇಳಿಮುಖವಾದ ಬಳಿಕ ಕಾರ್ಕಳಕ್ಕೆ ಬರುವುದಾಗಿ ತಿಳಿಸಿದ್ದು, ಹಾದಿ ಕಾಯುತ್ತಿದ್ದೇವೆ. ಅವಿನಾಶ್‌ ಸದ್ಯ ಪತ್ನಿ ಡಾ.ಇಶಾ ಹಾಗೂ ಪುತ್ರನ ಜತೆ ನೆಲೆಸಿದ್ದಾರೆ ಎಂದು ಮಾಹಿತಿ ನೀಡಿದರು.

ಅವಿನಾಶ್ ಹಿನ್ನೆಲೆ...

ಅವಿನಾಶ್ ಅಡಿಗ ಬಳ್ಳಾರಿಯ ವಿಮ್ಸ್‌ನಲ್ಲಿ ಎಂಬಿಬಿಎಸ್ ಪೂರೈಸಿದ್ದು, ರಾಜಸ್ತಾನದ ಉದಯ್‌ಪುರ್‌ನ‌ ರವೀಂದ್ರನಾಥ್ ಟ್ಯಾಗೋರ್ ಮೆಮೆರಿಯಲ್‌ ಮೆಡಿಕಲ್‌ ಕಾಲೇಜಿನಲ್ಲಿ ಎಂಡಿ (ಮೆಡಿಸಿನ್‌), ಬಳಿಕ ಅಮೆರಿಕಾದ ಟೆಕ್ಸಾಸ್‌ನಲ್ಲಿರುವ ಟೆಕ್ಸಾಸ್‌ ಟೆಕ್‌ ಯುನಿವರ್ಸಿಟಿ ಹೆಲ್ತ್‌ ಸೈನ್ಸ್‌ ಸೆಂಟರ್‌ನಲ್ಲಿ ಎಂಡಿ ಇಂಟರ್‌ನಲ್‌ ಮೆಡಿಸಿನ್,‌ ನ್ಯೂಯಾರ್ಕ್‌ ಲೊಂಗೊನ್‌ ಮೆಡಿಕಲ್‌ ಸೆಂಟರ್‌ನಲ್ಲಿ ನೆಫ್ರಾಲಜಿಸ್ಟ್ ಹಾಗೂ ರುಟ್‌ಗೆರ್ಸ್‌ ನ್ಯೂಜೆರ್ಸಿ ಮೆಡಿಕಲ್‌ ಸೆಂಟರ್‌ನಲ್ಲಿ ಕ್ರಿಟಿಕಲ್‌ ಕೇರ್ ಫೆಲೊಶಿಪ್‌ ಮಾಡಿದ್ದಾರೆ. ಸದ್ಯ ಮೂರು ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳಲ್ಲಿ ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.