ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಪ್ರವರ್ತಿತ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸಾರ ಪ್ರಯುಕ್ತ ಅ. 2ರ ವಿಜಯ ದಶಮಿಯಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯುವ ಭವ್ಯ ಶೋಭಾಯಾತ್ರೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಶೋಭಾಯಾತ್ರೆ ಸುವ್ಯವಸ್ಥಿತವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಉಚ್ಚಿಲ ದಸರಾ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್, ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಉಪಸ್ಥಿತಿಯಲ್ಲಿ ಸಭೆ ನಡೆಸಿದೆ.
ಅಂದು ಮಧ್ಯಾಹ್ನ 12ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕ್ಷೇತ್ರದಿಂದ ಸಂಜೆ 4.30ಕ್ಕೆ ಶೋಭಾಯಾತ್ರೆ ಹೊರಟು ಎರ್ಮಾಳ್ ತನಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ, ಅಲ್ಲಿಂದ ತಿರುಗಿ ಹೆದ್ದಾರಿ ಮೂಲಕ ಉಚ್ಚಿಲ– ಮೂಳೂರು, ಕೊಪ್ಪಲಂಗಡಿವರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ದೇವರ ವಿಗ್ರಹದ ಜಲಸ್ತಂಭನ ನಡೆಯಲಿದೆ.
ಈ ಸಂದರ್ಭ ಕಾಪು ಬೀಚ್‌ನಲ್ಲಿ ಗಂಗಾರತಿ, ರಸಮಂಜರಿ, ಆಕರ್ಷಕ ಸುಡುಮದ್ದು ಪ್ರದರ್ಶನ, ನವದುರ್ಗೆಯರು, ಶಾರದಾ ಮಾತೆ, ಅಂಬಾರಿ ಹೊತ್ತ ಆನೆಗೆ ಡ್ರೋನ್ ಮೂಲಕ ಪುಷ್ಪಾರ್ಚನೆ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ನೂರಾರು ಮಹಿಳೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಅರ್ಚಕರಿಂದ ಕಾಶಿ ಗಂಗಾ ನದಿ ತೀರದಲ್ಲಿ ನಡೆಯುವ ರೀತಿಯಲ್ಲಿ ನವದುರ್ಗೆಯರು, ಶಾರದಾ ಮಾತೆ, ಸಮುದ್ರರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಜಿ. ಶಂಕರ್ ತಿಳಿಸಿದ್ದಾರೆ.
ನವರಾತ್ರಿಯ ಒಂಬತ್ತನೇ ದಿನವಾದ ಮಂಗಳವಾರ ಮಾತೆ ಸಿದ್ಧಿಧಾತ್ರಿ ಆರಾಧನೆ, ವಿವಿಧ ಧಾರ್ಮಿಕ ವಿಧಿವಿಧಾನ, ಭಜನಾ ಸಂಕೀರ್ತನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆದವು. ಶೃತಿ ಮ್ಯೂಸಿಕಲ್ ಚಂದ್ರಕಾಂತ್ ಸುವರ್ಣ ಮತ್ತು ಬಳಗದಿಂದ ಭಕ್ತಿ ಗೀತಾಂಜಲಿ ಸಂಗೀತ ಕಾರ್ಯಕ್ರಮ, ವಿದುಷಿ ರೇಖಾ ಸುಬ್ರಹ್ಮಣ್ಯ ಶಿವಮೊಗ್ಗ ಅವರಿಂದ ವೀಣಾ ವಾದನ ಕಾರ್ಯಕ್ರಮ, ವಿದುಷಿ ಪಾವನಾ ನಿರ್ದೇಶನದ ಶಾರದಾ ನೃತ್ಯಾಲಯ ಮಾರ್ಪಳ್ಳಿ ತಂಡದಿಂದ ನೃತ್ಯ ವೈವಿಧ್ಯ, ಮಂಗಳೂರು ಚಿಲಿಂಬಿಯ ಸಾಯಿಶಕ್ತಿ ಕಲಾಬಳಗದಿಂದ ‘ಜೋಡು ಜೀಟಿಗೆ’ ತುಳು ಜನಪದ ನಾಟಕ ಪ್ರದರ್ಶನ ನಡೆಯಿತು.
ಇಂದಿನ ಕಾರ್ಯಕ್ರಮ: ನವರಾತ್ರಿಯ 10ನೇ ದಿನವಾದ ಬುಧವಾರ ಬೆಳಿಗ್ಗೆ ಉದಯಪೂಜೆ, ನಿತ್ಯಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಕಲ್ಪೋಕ್ತ ಪೂಜೆ ನಡೆಯಲಿದೆ. ಶಾಲಿನಿ ಜಿ.ಶಂಕರ್ ಸಭಾಂಗಣದಲ್ಲಿ ಬೆಳಗ್ಗೆ ಭಜನಾ ಸಂಕೀರ್ತನೆ, ಮಧ್ಯಾಹ್ನ ಪ್ರಭಾಕರ ತಣ್ಣೀರುಬಾವಿ ತಂಡದಿಂದ ಭಕ್ತಿ ಗೀತಾಂಜಲಿ, ಅಕ್ಷತಾ ದೇವಾಡಿಗ ಅವರಿಂದ ಸಾಕ್ಸೊಫೋನ್ ವಾದನ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಿಯಾಲಿಟಿ ಶೋ ಖ್ಯಾತಿಯ ಯುವ ಗಾಯಕ– ಗಾಯಕಿಯರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಆರತಿ: ಸಂಜೆ 7ಕ್ಕೆ ಶಾಲಿನಿ ಜಿ.ಶಂಕರ್ ತೆರೆದ ಸಭಾಂಗಣದ ಮಂಟಪದಲ್ಲಿ ಶಾರದೆ ಮಾತೆ, ನವದುರ್ಗೆಯರಿಗೆ ಕಾಶಿಯ ಅರ್ಚಕರಿಂದ ವಿಶೇಷ ಆರತಿ ನಡೆಯಲಿದೆ.
ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಭವ್ಯ ಶೋಭಾಯತ್ರೆ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಲಿರುವುದರಿಂದ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ರಾ.ಹೆ. 66ರಲ್ಲಿ ವಾಹನ ದಟ್ಟಣೆಯಾಗವುದರಿಂದ ಉಡುಪಿ– ಮಂಗಳೂರು ಮಾರ್ಗವಾಗಿ ಬರುವ ಘನ ವಾಹನಗಳು ಸಂಜೆ 5ರಿಂದ ರಾತ್ರಿ 9ರವರೆಗೆ ಕಟಪಾಡಿ– ಶಿರ್ವ– ಬೆಳ್ಮಣ್– ಪಡುಬಿದ್ರಿ ಮಾರ್ಗವಾಗಿ ಸಂಚರಿಸಬೇಕು. ಉಡುಪಿ ಕಡೆಯಿಂದ ಬಜಪೆ ವಿಮಾನ ನಿಲ್ದಾಣ ಮೂಲಕ ಹೋಗುವ ವಾಹನಗಳು ಕಟಪಾಡಿ– ಶಿರ್ವ– ಬೆಳ್ಮಣ್– ಮುಂಡ್ಕೂರು ಮಾರ್ಗವಾಗಿ ಸಂಚರಿಸಬೇಕು. ಟ್ರಕ್ ಲಾರಿ ಟ್ಯಾಂಕರ್ ಮುಂತಾದ ಘನ ವಾಹನಗಳನ್ನು ರಾತ್ರಿ 9ರವರೆಗೆ ಕುಂದಾಪುರ ಉಡುಪಿ ಕಡೆ ಟ್ರಕ್‌ಬೇ ಯಲ್ಲಿ ನಿಲ್ಲಿಸಿ ನಂತರ ಸಂಚಾರ ಮುಂದುವರಿಸಬೇಕು.
ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಸಂಚರಿಸುವ ರಾತ್ರಿ ಪ್ರಯಾಣಿಕ ಬಸ್ಸುಗಳು ರಾತ್ರಿ 9ರ ನಂತರ ಉಡುಪಿಯಿಂದ ಸಂಚರಿಸಬಹುದು. ಮಂಗಳೂರು– ಉಡುಪಿ ಮಾರ್ಗವಾಗಿ ಸಾಗುವ ಘನ ವಾಹನಗಳು ಸಂಜೆ 5ರಿಂದ ರಾತ್ರಿ 10ರವರೆಗೆ ಸಂಚರಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.