
ಉಡುಪಿ: ಅತಿವೃಷ್ಟಿಯ ಅನಾಹುತಗಳು, ವೈಭವದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಟನೆ-ಮೆರವಣಿಗೆಗಳ ಬಿಸಿ, ರಾಷ್ಟ್ರೀಯ ಹೆದ್ದಾರಿಯ ಅಪಘಾತಗಳು... ಹೀಗೆ ಹಲವು ಸಿಹಿ –ಕಹಿ ಘಟನೆಗಳಿಗೆ 2025ರಲ್ಲಿ ಜಿಲ್ಲೆ ಸಾಕ್ಷಿಯಾಯಿತು.
ಜನವರಿ ತಿಂಗಳಲ್ಲಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರು ತ್ರಾಸಿ ಕಡಲ ತೀರದಲ್ಲಿ ನೂರಾರು ದೋಣಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು. ಬುಲ್‌ಟ್ರಾಲ್ ಹಾಗೂ ಅವೈಜ್ಞಾನಿಕವಾಗಿ ಸಮುದ್ರದ ಆಳದಲ್ಲಿ ಬೆಳಕು ಹಾಯಿಸಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಬೇಕು ಎಂಬುದು ಅವರ ಆಗ್ರಹವಾಗಿತ್ತು.
ಅದೇ ತಿಂಗಳಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ದಕ್ಷಿಣ ಕನ್ನಡ–ಉಡುಪಿ ಜಿಲ್ಲಾಡಳಿತವು ಕ್ರೀಡಾಕೂಟ ಉಡುಪಿಯಲ್ಲಿ ಆಯೋಜಿಸುವ ಮೂಲಕ ಜಿಲ್ಲೆಯ ಕ್ರೀಡಾ ಪ್ರೇಮಿಗಳಲ್ಲಿ ಪುಳಕ ಉಂಟು ಮಾಡಿತ್ತು.
ನಕ್ಸಲ್ ಚಟುವಟಿಕೆಯಲ್ಲಿ ಹಿಂದೆ ಗುರುತಿಸಿಕೊಂಡಿದ್ದ ಕುಂದಾಪುರ ತಾಲ್ಲೂಕಿನ ಅಮಾಸೆಬೈಲು ಸಮೀಪದ ತೊಂಬಟ್ಟುವಿನ ಲಕ್ಷ್ಮಿ ತೊಂಬಟ್ಟು ಅವರು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸಮ್ಮುಖದಲ್ಲಿ ಶರಣಾದರು. ನಕ್ಸಲ್ ನಾಯಕ ವಿಕ್ರಂ ಗೌಡ ಹೆಬ್ರಿಯ ಪೀತುಬೈಲ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಬಳಿಕ ನಡೆದ ಮಹತ್ವದ ಬೆಳವಣಿಗೆ ಅದಾಗಿತ್ತು.
ಮಲ್ಪೆ ಸೇಂಟ್ ಮೇರಿಸ್ ದ್ವೀಪದ ಬಳಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಒಮಾನ್ ದೇಶದ ಮೀನುಗಾರಿಕಾ ಬೋಟೊಂದನ್ನು ಕರಾವಳಿ ಕಾವಲು ಪೊಲೀಸ್ (ಸಿಎಸ್‌ಪಿ) ಹಾಗೂ ಮಂಗಳೂರಿನ ಕೋಸ್ಟ್ ಗಾರ್ಡ್ ವಶಕ್ಕೆ ಪಡೆದು, ಅದರಲ್ಲಿದ್ದ ಮೂವರನ್ನು ಬಂಧಿಸಿದ್ದರು.
ಕಾಪುವಿನ ಶ್ರೀಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾರಿಯಮ್ಮನ ಮಹಾ ಬ್ರಹ್ಮಕಲಶಾಭಿಷೇಕವು ವಿಜೃಂಬಣೆಯಿಂದ ನಡೆದಿದ್ದು, ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮಾರ್ಚ್ ತಿಂಗಳಲ್ಲಿ ಮಲ್ಪೆಯ ಸರ್ವ ಋತು ಮೀನುಗಾರಿಕಾ ಬಂದರು ಹಲವು ಘಟನಾವಳಿಗಳಿಂದಾಗಿ ಸುದ್ದಿಯಲ್ಲಿತ್ತು. ಬಂದರಿನೊಳಗೆ ಮಹಿಳೆಯೊಬ್ಬರನ್ನು ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಥಳಿಸಿರುವ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ಸಂಬಂಧ ಪೊಲೀಸರು ಸ್ಥಳೀಯ ಮಹಿಳೆಯರನ್ನು ಬಂಧಿಸಿದ್ದರು. ಅದು ಅನಂತರ ಮೀನುಗಾರರ ಪ್ರತಿಭಟನೆಗೂ ಕಾರಣವಾಗಿತ್ತು.
ಮೇ ತಿಂಗಳಲ್ಲೇ ಅಕಾಲಿಕವಾಗಿ ಆರಂಭವಾದ ಮುಂಗಾರು ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ತತ್ತರಿಸಿದ್ದರು. ಧಾರಾಕಾರವಾಗಿ ಸುರಿದ ಮೊದಲ ಮಳೆಗೆ ಮಣಿಪಾಲದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲು, ಮಣ್ಣು ಸಂಗ್ರಹಗೊಂಡು ವಾಹನ ಸವಾರರರಿಗೆ ತೊಂದರೆಯಾಗಿತ್ತು.
ಜುಲೈ ತಿಂಗಳಲ್ಲಿ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಸಂಭವಿಸಿದ ನಾಡದೋಣಿ ದುರಂತದಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದರು. ನಿರಂತರ ಮಳೆಯಿಂದ ಕಡಲಿಗಿಳಿಯಲು ಸಾಧ್ಯವಾಗದಿದ್ದ ನಾಡದೋಣಿ ಮೀನುಗಾರರಿಗೆ ಅದು ಆಘಾತವನ್ನು ಉಂಟು ಮಾಡಿತ್ತು.
ಆಗಸ್ಟ್ ತಿಂಗಳಲ್ಲಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಷ್ಠ ಯಾಳಿ ಉದ್ಘಾಟನೆ ನೆರವೇರಿಸಿದ್ದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲೂ ಹಲವು ವಿದ್ಯಮಾನಗಳು ನಡೆದಿದ್ದವು. ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಬ್ರಹ್ಮಾವರ ಪೊಲೀಸರು ಬಂಧಿಸಿ ಬ್ರಹ್ಮಾವರ ನ್ಯಾಯಲಯಕ್ಕೆ ಹಾಜರು ಪಡಿಸಿದ್ದರು. ಎರಡು ದಿನಗಳ ಬಳಿಕ ಉಡುಪಿಯ ನ್ಯಾಯಾಲಯವು ಅವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿತ್ತು.
ರಾಷ್ಟ್ರೀಯ ಹೆದ್ದಾರಿ 66ರ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕೊತ್ತಲಕಟ್ಟೆ ಎಂಬಲ್ಲಿ ಟೆಂಪೊ ಮಗುಚಿ ಪಶ್ಚಿಮ ಬಂಗಾಳದ ಐವರು ಕಾರ್ಮಿಕರು ಮೃತಪಟ್ಟಿದ್ದರು.
ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ವಾಹನ ನಿಲುಗಡೆ ಪ್ರದೇಶದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಜನರಿಗೆ ಮುದ ನೀಡಿತ್ತು.
ಶಿರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ 2025ರಲ್ಲಿ ವಿವಿಧ ಮುಹೂರ್ತಗಳ ನಡೆದಿದ್ದವು.
ಅರಣ್ಯ ಇಲಾಖೆಯಿಂದ ಒಂಟಿ ಸಲಗ ಸೆರೆ
ಕುಂದಾಪುರ ವ್ಯಾಪ್ತಿಯ ಶಿವಮೊಗ್ಗ – ಉಡುಪಿ ಜಿಲ್ಲೆಗಳ ಗಡಿಭಾಗದ ಊರುಗಳಲ್ಲಿ ಬೀಡು ಬಿಟ್ಟು ಜನರಲ್ಲಿ ಆತಂಕ ಉಂಟು ಮಾಡಿದ್ದ ಒಂಟಿ ಸಲಗವನ್ನು ಜೂನ್ ತಿಂಗಳಲ್ಲಿ ಅರಣ್ಯ ಇಲಾಖೆಯವರು ಸೆರೆಹಿಡಿದಿದ್ದರು. ಶಿವಮೊಗ್ಗದ ಸಕ್ರೆಬೈಲಿನಿಂದ ಬಂದಿದ್ದ ಕಾರ್ಯಪಡೆಯ ಮಾರ್ಗದರ್ಶನದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿ ಆನೆಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿದ್ದರು.
ಪ್ರಧಾನಿ ಮೋದಿ ರೋಡ್ ಶೋ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿದ್ದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಭಗವದ್ಗೀತೆಯ 15ನೇ ಅಧ್ಯಾಯದ ಪುರುಷೋತ್ತಮ ಯೋಗದ 20 ಶ್ಲೋಕಗಳನ್ನು ಸಭಿಕರ ಜೊತೆಗೂಡಿ ಪಠಿಸಿದರು. ಅದಕ್ಕೂ ಮೊದಲು ನಗರದಲ್ಲಿ ಅವರು ರೋಡ್ ಶೋ ನಡೆಸಿದ್ದರು. ಪ್ರಧಾನಿ ಅವರ ರೋಡ್ ಶೋ ನೋಡಲು ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಮಂದಿ ಬಂದಿದ್ದರು.
ಇಂದ್ರಾಳಿ ಸೇತುವೆ ಉದ್ಘಾಟನೆ
ಹಲವು ವರ್ಷಗಳಿಂದ ನಿಧಾನಗತಿಯಲ್ಲಿ ಕಾಮಗಾರಿ ನಡೆದು ನಗರವಾಸಿಗಳ ನೆಮ್ಮದಿ ಕೆಡಿಸಿದ್ದ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಂಡು ಅದು ಸೆಪ್ಟೆಂಬರ್‌ನಲ್ಲಿ ಲೋಕಾರ್ಪಣೆಗೊಂಡಿತು. ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು.
ಅಗಲಿದ ಗಣ್ಯರು
* ಮೇ 8: ಎಂ.ಜಿ.ಎಂ.ಕಾಲೇಜಿನ ನಿವೃತ್ತ ಉಪನ್ಯಾಸಕ ಹಾಗೂ ಗೋವಿಂದ ಪೈ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್ ನಿಧನ.
* ಮೇ12: ಕನ್ನಡ ಕಿರು ತೆರೆಯ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಪ್ರಸಿದ್ಧಿ ಪಡೆದಿದ್ದ ಚಿತ್ರನಟ ಮಲ್ಪೆ ಹೂಡೆಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ.
* ನ.26: ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ. ಅವರು ಬಡಗುತಿಟ್ಟಿನಲ್ಲಿ ರಚಿಸುತ್ತಿದ್ದ ಪ್ರಸಂಗಗಳು ‘ಕಂದಾವರ ಶೈಲಿ’ ಎಂದೇ ಹೆಸರುವಾಸಿಯಾಗಿತ್ತು.
*ಡಿ.23: ಉಡುಪಿಯ ದೊಡ್ಡಣಗುಡ್ಡೆ ನಿವಾಸಿ ರಂಗಕರ್ಮಿ ಸಾಹಿತಿ ಪ್ರೊ. ರಾಮದಾಸ್ ನಿಧನ. ರಂಗಭೂಮಿ ಉಡುಪಿಯಲ್ಲಿ ರಂಗನಟರಾಗಿ ನಿರ್ದೇಶಕರಾಗಿ ಅವರು ಛಾಪು ಮೂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.