ADVERTISEMENT

ಉಡುಪಿ: ಇನ್ನೂ ಮರೆಯಲ್ಲಿವೆ ಹಲವು ಪ್ರವಾಸಿ ತಾಣ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:30 IST
Last Updated 27 ಅಕ್ಟೋಬರ್ 2025, 5:30 IST
ಮಲ್ಪೆಯ ಕಲ್ಮಾಡಿಯ ಬೊಬ್ಬರ್ಯ ಪಾದೆಯಿಂದ ಕಾಣುವ ದೋಣಿಗಳ ನೋಟ  ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ
ಮಲ್ಪೆಯ ಕಲ್ಮಾಡಿಯ ಬೊಬ್ಬರ್ಯ ಪಾದೆಯಿಂದ ಕಾಣುವ ದೋಣಿಗಳ ನೋಟ  ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ   

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯ ಸುಂದರ ಕಡಲ ತೀರಗಳು, ಐತಿಹಾಸಿಕ ಮಹತ್ವವಿರುವ ದೇವಾಲಯಗಳು, ರಮಣೀಯ ಹಿನ್ನೀರು ಪ್ರದೇಶಗಳು ವಿವಿಧೆಡೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.

ಮಲ್ಪೆ ಕಡಲ ತೀರ, ಪಡುಬಿದ್ರಿಯ ಬ್ಲೂಫ್ಲ್ಯಾಗ್‌ ಬೀಚ್‌, ಮರವಂತೆ ಸಮುದ್ರ ತೀರಗಳಿಗೆ ರಜಾ ದಿನಗಳಲ್ಲಿ ಸಾಕಷ್ಟು ಪ್ರಯಾಣಿಕರು ಭೇಟಿ ನೀಡುತ್ತಾರೆ.

ಬೀಚ್‌ ಮತ್ತು ದೇಗುಲ ಪ್ರವಾಸೋದ್ಯಮವು ಜಿಲ್ಲೆಯ ಪ್ರವಾಸೋದ್ಯಮದ ಆಧಾರ ಸ್ಥಂಭಗಳಾಗಿವೆ. ಹಬ್ಬಗಳ ಋತು ಆರಂಭವಾಗುತ್ತಿದ್ದಂತೆ ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಜಾಸ್ತಿಯಾಗುತ್ತದೆ.

ADVERTISEMENT

ದೇಗುಲಗಳ ದರ್ಶನಕ್ಕೆಂದು ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ತಮ್ಮ ಊರುಗಳಿಗೆ ಮರಳುವುದಕ್ಕೂ ಮುನ್ನ ಬೀಚ್‌ಗಳಿಗೆ ಭೇಟಿ ನೀಡಿಯೇ ಮರಳುತ್ತಾರೆ.

ಜಿಲ್ಲೆಯಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿರುವ ಪ್ರವಾಸಿ ತಾಣಗಳಲ್ಲದೆ ಇನ್ನೂ ಹಲವಾರು ತಾಣಗಳು ಎಲೆ ಮರೆಯ ಕಾಯಿಗಳಂತೆ ಇನ್ನೂ ಮರೆಯಲ್ಲೇ ಉಳಿದುಕೊಂಡಿವೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಹಲವಾರು ಜಲಪಾತಗಳು ಮೈದುಂಬಿ ಹರಿಯುತ್ತವೆ. ಜೊತೆಗೆ ಹಲವು ಪುರಾತನ ಧಾರ್ಮಿಕ ಕ್ಷೇತ್ರಗಳೂ ಹೆಚ್ಚು ಪ್ರಸಿದ್ಧಿ ಪಡೆಯದೆ ಇನ್ನೂ ಪ್ರವಾಸಿಗರಿಂದ ದೂರ ಉಳಿದಿವೆ.

‘ಪಿಲಾರಕಾನ’ ಎಂಬ ಮೋಹಕ ಕಾನನ

ಕಣ್ಣು ಹಾಯಿಸಿದ್ದಲ್ಲೆಲ್ಲಾ ದಟ್ಟ ಕಾನನ, ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಮರಗಳ ನಡುವಿನ ರಸ್ತೆಯಲ್ಲಿ ಸಾಗಿದರೆ ಪುರಾತನ ದೇಗುಲ. ಪ್ರಶಾಂತವಾದ ವಾತಾವರಣ ವನ್ನು ಬಯಸುವವರಿಗೆ ಇದೊಂದು ಮನಮೋಹಕ ತಾಣ.

ಉಡುಪಿಯಿಂದ 24 ಕಿ.ಮೀ. ದೂರದಲ್ಲಿರುವ ಊರೊಳಗಿನ ಪಿಲಾರಕಾನವೆಂಬ ದಟ್ಟ ಕಾನನವೇ ಈ ಪ್ರವಾಸಿ ತಾಣ. ಹೆಚ್ಚು ಜನರು ಬಾರದ ಈ ಪ್ರದೇಶಕ್ಕೆ ಪಕ್ಷಿವೀಕ್ಷಣೆಗೆ ಬರುವವರೇ ಹೆಚ್ಚು. ಕಾಪು ತಾಲ್ಲೂಕಿನ ಶಿರ್ವ ಬಳಿಯ ಸುತ್ತಲೂ ಜನವಸತಿ ಪ್ರದೇಶದಿಂದ ಆವೃತವಾಗಿರುವ ಅಂದಾಜು 365 ಕಿ.ಮೀ. ವ್ಯಾಪ್ತಿಯ ಪಿಲಾರ್‌ಕಾನವು ಅರಣ್ಯ ಇಲಾಖೆಯ ಅಧೀನದಲ್ಲಿದೆ. ಕಾಡುಕೋಣ, ವಿವಿಧ ಪ್ರಭೇದಗಳ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಕಾಡಿನ ನಡುವಿನ ಪುರಾತನ ಮಹಾಲಿಂಗೇಶ್ವರ, ಮಹಾಗಣಪತಿ ದೇವಾಲಯವಿದ್ದು, ಸೀಮಿತ ಸಂಖ್ಯೆಯ ಭಕ್ತರಷ್ಟೇ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ, ಪುರಾತನ ದೇಗುಲವನ್ನು ಕಣ್ತುಂಬಿಕೊಳ್ಳಬೇಕೆಂಬುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವೆನ್ನಬಹುದು. ಉಡುಪಿಯಿಂದ ತೆರಳುವವರು ಕಟಪಾಡಿಗೆ ತೆರಳಿ ಅಲ್ಲಿಂದ ಶಿರ್ವಕ್ಕೆ ಹೀಗಿ ಮುಂದೆ ಪಿಲಾರ್‌ಕಾನಕ್ಕೆ ತೆರಳಬಹುದಾಗಿದೆ. ಕಾರ್ಕಳದಿಂದ ಶಿರ್ವ ಮಾರ್ಗವಾಗಿ ಉಡುಪಿಗೆ ಬರುವ ಪ್ರವಾಸಿಗರಿಗೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಬೊಬ್ಬರ್ಯ ಪಾದೆ

ಮಲ್ಪೆಯ ಕಲ್ಮಾಡಿಯ ನದಿ ಸಮೀಪದ ಪ್ರಕೃತಿ ರಮಣೀಯ ಸ್ಥಳದಲ್ಲಿರುವ ಬೃಹತ್‌ ಶಿಲೆಯೊಂದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮೀನುಗಾರರ ಆರಾಧ್ಯ ದೈವ ಬೊಬ್ಬರ್ಯ ದೈವದ ದೈವಸ್ಥಾನವೂ ಇದರ ಪಕ್ಕದಲ್ಲೇ ಇದೆ. ಈ ಪ್ರದೇಶದಿಂದ ನೋಡಿದರೆ ನದಿಯಲ್ಲಿ ನಿಲ್ಲಿಸಿರುವ ದೋಣಿಗಳ ಸಾಲುಗಳು ಕಾಣುತ್ತವೆ. ಧಾರ್ಮಿಕವಾಗಿಯೂ ಮಹತ್ವ ಪಡೆದಿರುವ ಈ ಸ್ಥಳಕ್ಕೆ ಪ್ರಶಾಂತ ಪರಿಸರವನ್ನು ಆಸ್ವಾದಿಸಲು ಬಯಸುವವರು ಭೇಟಿ ನೀಡಬಹುದಾಗಿದೆ. ಸೂರ್ಯಾಸ್ತದ ರಮಣೀಯ ನೋಟವನ್ನೂ ಇಲ್ಲಿಂದ ಕಣ್ತುಂಬಿಕೊಳ್ಳಬಹುದಾಗಿದೆ.

ಮಲ್ಯಾಡಿ ಪಕ್ಷಿ ಧಾಮ

ಕುಂದಾಪುರ ಪೇಟೆಯಿಂದ 8 ಕಿ.ಮೀ.ದೂರದಲ್ಲಿರುವ ಮಲ್ಯಾಡಿ ಪಕ್ಷಿಧಾಮವು ಪರಿಸರ ಪ್ರೇಮಿಗಳ, ಪಕ್ಷಿ ವೀಕ್ಷಕರ ನೆಚ್ಚಿನ ತಾಣವಾಗಿದೆ. ಇಲ್ಲಿನ ಗದ್ದೆಗಳಿಂದ ಆವೆ ಮಣ್ಣು ತೆಗೆದಿರುವ ಕಾರಣ ನೀರು ತುಂಬಿ ಕೊಳದಂತಾಗಿ ನೀರು ಹಕ್ಕಿಗಳನ್ನು ಆಕರ್ಷಿಸುತ್ತಿದೆ. ಹಲವು ಪ್ರಭೇದದ ಪಕ್ಷಿಗಳು ಇಲ್ಲಿ ಕಾಣಸಿಗುತ್ತೆ. ಗೋಲ್ಡನ್‌ ಪ್ಲೋವರ್‌, ಕಾಮನ್‌ ಗ್ರೀನ್‌ಶಾಂಕ್ಸ್‌, ಕಾಮನ್‌ ರೆಡ್‌ ಶಾಂಕ್ಸ್‌, ಪರ್ಪಲ್‌ ಸ್ವಾಂಪ್‌ಹೆನ್‌ ಮೊದಲಾದ ಹಕ್ಕಿಗಳು ಇಲ್ಲಿ ಕಂಡು ಬರುತ್ತಿವೆ. 

ಉಡುಪಿಯಿಂದ ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿಬರುವ ತೆಕ್ಕಟ್ಟೆಯಿಂದ ಈ ಪಕ್ಷಿಧಾಮಕ್ಕೆ ತೆರಳಬಹುದಾಗಿದೆ.

ಬೆಳ್ಕಲ್‌ ತೀರ್ಥ

ಕೊಲ್ಲೂರು ಸಮೀಪದ ಪಶ್ಚಿಮ ಘಟ್ಟಗಳ ಕಾಡಿನ ನಡುವೆ ಕಾಣಸಿಗುವ ಸುಂದರ ತಾಣವೇ ಬೆಳ್ಕಲ್‌ ತೀರ್ಥ. ಇಲ್ಲಿನ ಬಯಲುಗಳಲ್ಲಿ ನಿಂತು ದೂರದ ಬೆಟ್ಟಗಳ ನಡುವೆ ಹರಿಯುತ್ತಿರುವ ಜಲಪಾತವನ್ನು ಕಣ್ತುಂಬಿಕೊಳ್ಳಬಹುದಾಗಿದೆ. 300 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತವಾಗಿದ್ದು, ನಯನ ಮನೋಹರವಾಗಿದೆ. ಜಲಪಾತದ ಬಳಿಗೆ ತೆರಳಬೇಕಾದರೆ ಚಾರಣ ಮಾಡಬೇಕಾಗುತ್ತದೆ. ಜೂನ್‌ನಿಂದ ಡಿಸೆಂಬರ್‌ವರೆಗೆ ಈ ಜಲಪಾತದ ಸೌಂದರ್ಯ ಸವಿಯಬಹುದಾಗಿದೆ.

ಕುದುಕುಳ್ಳಿ ದೇವಸ್ಥಾನ

ಉಡುಪಿ ನಗರ ವ್ಯಾಪ್ತಿಯ ಕುದುಕುಳ್ಳಿ ಮಹಾಲಿಂಗೇಶ್ವರ ದೇವಾಲಯವು ಹಚ್ಚ ಹಸುರಿನ ಪರಿಸರದ ನಡುವಿನ ಪುರಾತನ  ಕ್ಷೇತ್ರವಾಗಿದೆ. ದೊಡ್ಡಣಗುಡ್ಡೆಯ ಶಿವಳ್ಳಿ ತೋಟಗಾರಿಕಾ ಇಲಾಖೆಯ ಕಚೇರಿಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಈ ದೇವಾಲಯದ ಸುತ್ತಲೂ ಬೃಹದಾಕಾರದ ಮರಗಳಿವೆ. ಸುತ್ತಲೂ ಪಕ್ಷಿಗಳ ಇಂಚರ ಮನಸ್ಸಿಗೆ ಮುದ ನೀಡುತ್ತದೆ. ಈ ದೇವಾಲಯವು ಉಡುಪಿಯಿಂದ 4 ಕಿ.ಮೀ. ದೂರದಲ್ಲಿದೆ.

ತುಳುವೇಶ್ವರ ದೇವಾಲಯ

ಕುಂದಾಪುರ ವ್ಯಾಪ್ತಿಯ ಬಸ್ರೂರಿನ ತುಳುವೇಶ್ವರ ದೇವಾಲಯವು ಪ್ರಶಾಂತ ವಾತಾವರಣದ ನಡುವಿನ ಸುಂದರ ಕ್ಷೇತ್ರವಾಗಿದೆ. ಆಲದ ಮರದ ಬೇರುಗಳ ನಡುವಿನ ಶಿವಲಿಂಗ ಗಮನ ಸೆಳೆಯುತ್ತದೆ. ನಂದಿಯ ವಿಗ್ರಹ, ಪ್ರವೇಶದ್ವಾರವು ಪುರಾತನ ಕಾಲದ ನೆನಪನ್ನು ಮರುಕಳಿಸುತ್ತದೆ. ಇದು ತುಳುನಾಡಿನ ಏಕೈಕ ತುಳುವೇಶ್ವರ ದೇವಾಲಯ ಎನ್ನಲಾಗುತ್ತಿದೆ. ಈ ದೇವಾಲಯಕ್ಕೆ ಯಾವುದೇ ಕಟ್ಟಡವಿಲ್ಲ ಆಲದ ಮರ ಮತ್ತು ಅದರ ಬೇರುಗಳ ನಡುವೆ ಶಿವಲಿಂಗವನ್ನು ಕಾಣಬಹುದಾಗಿದೆ.

ಅಪೂರ್ವ ಶಿಲ್ಪಗಳ ನಿನ್ನಿಕಲ್ಲು

ಪಡುಬಿದ್ರಿಯ ನಿನ್ನಿಕಲ್ಲು ಪಾದೆಯಲ್ಲಿ 16ನೇ ಶತಮಾನಕ್ಕೆ ಸೇರಿದ ಅಪೂರ್ವವಾದ ಶಿಲ್ಪಗಳಿವೆ. ಐತಿಹಾಸಿಕ ತಾಣಗಳ ಬಗ್ಗೆ ಆಸಕ್ತಿ ಇರುವವರು, ಸಂಶೋಧಕರು ಇಲ್ಲಿಗೆ ಭೇಟಿ ನೀಡಿ ಶಿಲ್ಪಗಳನ್ನು ವೀಕ್ಷಿಸಬಹುದು. ಪಡುಬಿದ್ರಿ– ಕಾರ್ಕಳ ರಾಜ್ಯ ಹೆದ್ದಾರಿಯ ನಂದಿಕೂರು ಸನಿಹದಲ್ಲಿರುವ ಐತಿಹಾಸಿಕ ನಿನ್ನಿಕಲ್ಲು ಪಾದೆ ವಿನಾಶದ ಅಂಚಿನಲ್ಲಿದ್ದು, ಇದನ್ನು ಸಂರಕ್ಷಿಸಿದರೆ ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದಾಗಿದೆ.

ಕುದುಕುಳ್ಳಿ ದೇವಸ್ಥಾನ
ಪಿಲಾರಕಾನ ಕಾಡು
ಪಡುಬಿದ್ರಿಯ ನಿನ್ನಿ ಕಲ್ಲು
ಪಿಲಾರಕಾನ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯ
ಮಲ್ಯಾಡಿ ಪಕ್ಷಿಧಾಮ
ಬೆಳ್ಕಲ್‌ ತೀರ್ಥ
ತುಳುವೇಶ್ವರ ದೇವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.