ADVERTISEMENT

ಉಡುಪಿ ಚಿಕ್ಕಮಗಳೂರು: ಹೆಣ್ಮಕ್ಕಳೇ ಸ್ಟ್ರಾಂಗು

ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು; ಅಧಿಕಾರ ಹಿಡಿಯುವಲ್ಲಿ ಹಿಂದೆ

ಬಾಲಚಂದ್ರ ಎಚ್.
Published 25 ಏಪ್ರಿಲ್ 2019, 20:15 IST
Last Updated 25 ಏಪ್ರಿಲ್ 2019, 20:15 IST
ಉಡುಪಿ ಚಿಕ್ಕಮಗಳೂರು ಕ್ಷೇತ್ರ
ಉಡುಪಿ ಚಿಕ್ಕಮಗಳೂರು ಕ್ಷೇತ್ರ   

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು. ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸ್ತ್ರೀಯರು ಹೆಚ್ಚಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರ ಆಶೀರ್ವಾದ ಯಾರ ಮೇಲಿರಲಿದೆಯೋ ಅವರ ಗೆಲುವಿನ ಹಾದಿ ಸುಗಮವಾಗಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಉಡುಪಿ, ಕಾಪು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರಗಳು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುತ್ತವೆ. ಈ ಪೈಕಿ ತರೀಕೆರೆ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವುದು ವಿಶೇಷ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 15,13,840 ಮತದಾರರು ಇದ್ದಾರೆ. ಈ ಪೈಕಿ ಪುರುಷರು 7,38,691 ಇದ್ದರೆ, ಮಹಿಳಾ ಮತದಾರರು 7,75,102 ಇದ್ದಾರೆ. ಅಂದರೆ, 36,411 ಮಹಿಳೆಯರು ಹೆಚ್ಚಾಗಿರುವುದು ಕಾಣುತ್ತದೆ. ಚುನಾವಣೆಯಲ್ಲಿ ಮಹಿಳಾ ಮತದಾರರ ಪಾತ್ರ ನಿರ್ಣಾಯಕ ಎಂಬುದನ್ನು ಅರಿತಿರುವ ಪ್ರಮುಖ ರಾಜಕೀಯ ಪಕ್ಷಗಳು ‘ಸ್ತ್ರೀಶಕ್ತಿ’ಯತ್ತ ಚಿತ್ತ ಹರಿಸಿವೆ.

ADVERTISEMENT

ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ ಅಧಿಕಾರ ಹಿಡಿಯುವಲ್ಲಿ ಮಹಿಳೆಯರು ಹಿಂದೆ ಬಿದ್ದಿದ್ದಾರೆ. ಉಡುಪಿ ಲೋಕಸಭಾ ಕ್ಷೇತ್ರದಿಂದ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಸ್ವಾತಂತ್ರ್ಯ ಬಂದು 30 ವರ್ಷಗಳು ಬೇಕಾಯಿತು. 1977ರ ಚುನಾವಣೆಯಲ್ಲಿ ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಶೋಧಾ ಆರ್ಮುಗಂ ಕ್ಷೇತ್ರದ ಮೊದಲ ಮಹಿಳಾ ಅಭ್ಯರ್ಥಿ. ಈ ಚುನಾವಣೆಯಲ್ಲಿ ಸೋಲು ಕಂಡರೂ 17,794 ಮತ ಪಡೆದು ಗಮನ ಸೆಳೆದಿದ್ದರು.

ಉಡುಪಿಯ ಮೊದಲ ಸಂಸದೆ:

ಉಡುಪಿ ಲೋಕಸಭಾ ಕ್ಷೇತ್ರದ ಮೊದಲ ಮಹಿಳಾ ಸಂಸದೆ ಎಂಬ ಗೌರವ ಮನೋರಮಾ ಮಧ್ವರಾಜ್ ಅವರಿಗೆ ಸಲ್ಲುತ್ತದೆ. 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮನೋರಮಾ ಮಧ್ವರಾಜ್ (369627 ಮತ), ಕಾಂಗ್ರೆಸ್‌ನ ವಿನಯ್ ಕುಮಾರ್ ಸೊರಕೆ (340624) ಅವರನ್ನು ಪರಾಭವಗೊಳಿಸಿದ್ದರು.

ಕ್ಷೇತ್ರಪುನರ್‌ ವಿಂಗಡಣೆ ಬಳಿಕ ಉಡುಪಿ–ಚಿಕ್ಕಮಗಳೂರು ಕ್ಷೇತ್ರವಾದ ನಂತರ 2009ರ ಚುನಾವಣೆಯಲ್ಲಿ ಸಿಪಿಐ ಪಕ್ಷದಿಂದ ರಾಧಾ ಸುಂದರೇಶ್ (24991) ಸ್ಪರ್ಧಿಸಿದ್ದರು. ಆದರೆ, ಜಯ ಸಿಗಲಿಲ್ಲ. 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ (5,81,168 ಮತ) ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (3,99,525) ವಿರುದ್ಧ ಭಾರೀ ಅಂತರದಿಂದ ಗೆದ್ದು ಬಂದರು. ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಗೆದ್ದ ಅತಿ ದೊಡ್ಡ ಅಂತರದ ಗೆಲುವು ಇದಾಗಿತ್ತು.

ಚಿಕ್ಕಮಗಳೂರು ಮೊದಲ ಮಹಿಳಾ ಅಭ್ಯರ್ಥಿ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 1977ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಮಹಿಳಾ ಅಭ್ಯರ್ಥಿಯಾಗಿ ಬಿಎಲ್‌ಡಿ ಪಕ್ಷದಿಂದ ಬಿ.ಎಲ್‌.ಸುಬ್ಬಮ್ಮ (143671) ಕಣಕ್ಕಿಳಿದಿದ್ದರು. ಆದರೆ ಗೆಲುವು ಸಿಗಲಿಲ್ಲ. ಕಾಂಗ್ರೆಸ್‌ನ ಡಿ.ಬಿ.ಚಂದ್ರೇಗೌಡ (2,08,239) ಗೆದ್ದಿದ್ದರು.

ಚಿಕ್ಕಮಗಳೂರಿನ ಮೊದಲ ಸಂಸದೆ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೊದಲ ಸಂಸದೆ ಎಂಬ ಗೌರವ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ. 1978ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಪುನರ್ಜನ್ಮ ಪಡೆದ ಇಂದಿರಾಗಾಂಧಿ ಅವರು (249376), ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ವೀರೇಂದ್ರ ಪಾಟೀಲರ ವಿರುದ್ಧ (1,72,043) ಜಯ ಗಳಿಸಿದ್ದರು.

1984ರ ಸಾರ್ವತ್ರಿಕ ಚುನಾವಣೆಯಲ್ಲಿಡಿ.ಕೆ.ತಾರಾದೇವಿ (2,68,912) ಅವರು ಸಿಪಿಐನ ಸುಂದರೇಶ್ (128872) ಅವರ ವಿರುದ್ಧ ಗೆದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ (ಉಪ ಚುನಾವಣೆ ಬಿಟ್ಟು) ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದ ಮೊದಲ ಮಹಿಳೆ ಎಂಬ ಹಿರಿಮೆ ತಾರಾದೇವಿ ಅವರದ್ದು. 1991ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ ತಾರಾದೇವಿ (217309) ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ (185437) ವಿರುದ್ಧ ಗೆದ್ದರು. ಬಳಿಕ ಹಲವು ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದರಾದರೂ ಗೆಲುವು ಸಿಗಲಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.