
ಉಡುಪಿ: ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಿ, ಅವರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮತ್ತು ಮುಖ್ಯ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬರುತ್ತಿರುವ ಉಡುಪಿ ಜಿಲ್ಲೆಯು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದು ತಮ್ಮ ಸಾಧನೆಯನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದರು.
ಜಿಲ್ಲೆಯಲ್ಲಿ 115 ಸರ್ಕಾರಿ, 68 ಅನುದಾನಿತ ಹಾಗೂ 91 ಅನುದಾನ ರಹಿತ ಸೇರಿದಂತೆ ಒಟ್ಟು 274 ಪ್ರೌಢಶಾಲೆಗಳು ಜಿಲ್ಲಾ ವಲಯದಲ್ಲಿ ಇದ್ದು, ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 6,880 ಬಾಲಕರು, 6,600 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 13,480 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ಈಗಾಗಲೇ ಪೂರ್ವ ಪರೀಕ್ಷೆಗಳನ್ನು ಎರಡು ಬಾರಿ ಮಾಡಲಾಗಿದ್ದು, ಶೇ 77.77 ರಷ್ಟು ಫಲಿತಾಂಶ ಬಂದಿದೆ. ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಗೆ ಇನ್ನು 13 ದಿನಗಳು ಬಾಕಿ ಇದ್ದು, ವಿದ್ಯಾರ್ಥಿಗಳಲ್ಲಿ ಶಾಲಾ ಮಟ್ಟದಲ್ಲಿಯೇ ನಿಯಮತಿ ಪರೀಕ್ಷೆಗಳು, ಮರುಪಠಣ ತರಗತಿಗಳು ಹಾಗೂ ಪೋಷಕರೊಂದಿಗೆ ತರಗತಿಗಳು ಸೇರಿದಂತೆ ಸಮನ್ವಯ ಸಭೆಗಳನ್ನು ಸೇರಿಸುವ ಮೂಲಕ ಸಾಧನೆಯನ್ನು ಹೆಚ್ಚಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದು ಮುಖ್ಯವಲ್ಲ. ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್. ಲಮಾಣಿ, ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ಐದು ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಸ್.ಎಸ್.ಎಲ್.ಸಿ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಕ ರಾಜೇಂದ್ರ ಭಟ್ ನಿರೂಪಿಸಿದರು. ಅಕ್ಷರ ದಾಸೋಹ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಾ ನಾಯಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.