ADVERTISEMENT

ಉಡುಪಿ: ಜಿಲ್ಲೆಗೂ ಬರಲಿ ಐಟಿ, ಬಿಟಿ ಕಂಪನಿ

ಜಿಲ್ಲೆಯ ಯುವಜನರಿಗೆ ಉದ್ಯೋಗ ಸೃಷ್ಟಿಯ ಯೋಜನೆಗಳ ನಿರೀಕ್ಷೆ

ನವೀನ್‌ಕುಮಾರ್ ಜಿ
Published 12 ಜನವರಿ 2026, 6:56 IST
Last Updated 12 ಜನವರಿ 2026, 6:56 IST
.
.   

ಉಡುಪಿ: ಜಿಲ್ಲೆಯ ಯುವಜನರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ನವೋದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೂ ಪೂರಕ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಬೇಕೆಂಬ ಬೇಡಿಕೆ ಜನರಿಂದ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಐಟಿ ಕಂಪನಿಗಳು, ನವೋದ್ಯಮಗಳು ಸಾಕಷ್ಟು ಇಲ್ಲದ ಕಾರಣ ಇಲ್ಲಿನ ಯುವಜನರು ಬೆಂಗಳೂರು ಮೊದಲಾದ ಮಹಾನಗರಗಳಿಗೆ ಕೆಲಸ ಅರಸಿ ಹೋಗಬೇಕಾದ ಅನಿವಾರ್ಯತೆ ಇದೆ.

ಐಟಿ ಕಂಪನಿಗಳನ್ನೂ ಜಿಲ್ಲೆಗೆ ಆಕರ್ಷಿಸಿದರೆ ಎಂಜಿನಿಯರಿಂಗ್‌ ಪೂರೈಸುವ ವಿದ್ಯಾರ್ಥಿಗಳು ಇಲ್ಲಿಯೇ ಬದುಕು ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕರಾವಳಿಯ ಉದ್ಯಮ ಕ್ಷೇತ್ರಕ್ಕೆ ಪೂರಕವಾದ ಯೋಜನೆಗಳನ್ನು ಘೋಷಿಸಿ ಕಾರ್ಯರೂಪಕ್ಕೆ ತರಬೇಕೆಂಬ ಬೇಡಿಕೆಗಳೂ ಸಾರ್ವಜನಿಕರಿಂದ ಕೇಳಿ ಬಂದಿವೆ.

ADVERTISEMENT

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕೂಡ ಪ್ರಮುಖ ಆರ್ಥಿಕ ಮೂಲವಾಗಿದ್ದು, ಪ್ರವಾಸೋದ್ಯಮ ಆಧಾರಿತ ಕೈಗಾರಿಕೆಗಳ ಉತ್ತೇಜನಕ್ಕೂ ಅನುದಾನ ಮೀಸಲಿರಿಸಿ ಯೋಜನೆಗಳನ್ನು ಘೋಷಿಸಬೇಕೆಂಬ ಬೇಡಿಕೆಗಳೂ ಮುನ್ನಲೆಗೆ ಬಂದಿವೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ತೆರಿಗೆ ವಿನಾಯಿತಿ, ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ನೆರವು, ರಫ್ತು ಉತ್ತೇಜಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕು. ಮೀನುಗಾರಿಕೆಯು ಪ್ರಮುಖವಾಗಿರುವ ಕರಾವಳಿಯಲ್ಲಿ ಸಾಗರೋತ್ಪನ್ನಗಳ ರಫ್ತಿಗೆ ಪ್ರೋತ್ಸಾಹ ನೀಡುವುದಕ್ಕೂ ಸರ್ಕಾರ ಆದ್ಯತೆ ನೀಡಬೇಕು. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಸಮರ್ಪಕ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಕೊರತೆ ಇದ್ದು, ಮೂಲಸೌಕರ್ಯ ವೃದ್ಧಿಗೆ ಆದ್ಯತೆ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ. 

ಕಾಪು ತಾಲ್ಲೂಕಿನ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಎಕ್ರೆ ಭೂಮಿ ಕೆಐಎಡಿಬಿ ಕೈಯಲ್ಲಿದ್ದು, ಇಲ್ಲಿ ಪರಿಸರಕ್ಕೆ ಪೂರಕವಾದ ಯೋಜನೆಗಳನ್ನು ಘೋಷಿಸಬೇಕು ಎಂಬುದು ಆ ಭಾಗದ ಜನರ ಆಗ್ರಹ.

ಕಾಪು ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ, ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಐಟಿ, ಬಿಟಿ, ಎಐ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯೋಜನೆಗಳನ್ನೂ ರೂಪಿಸಿ ಜಾರಿಗೊಳಿಸಿದರೆ ಜಿಲ್ಲೆಯಲ್ಲಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಕೈಗಾರಿಕಾ ಉದ್ದೇಶಕ್ಕೆ ಮೀಸಲಿಟ್ಟ ಜಮೀನುಗಳನ್ನು ಬಳಸಿಕೊಳ್ಳದಿದ್ದಲ್ಲಿ ಅವುಗಳನ್ನು ಹಿಂಪಡೆದು ಇತರ ಉದ್ಯಮಿಗಳಿಗೆ ನೀಡುವುದಾಗಿ ಈಚೆಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಕೈಗಾರಿಕಾ ಉದ್ದೇಶಕ್ಕಾಗಿ ಪಡೆದುಕೊಂಡಿದ್ದ ಜಮೀನುಗಳಲ್ಲಿ ಯಾವುದೇ ಚಟುವಟಿಕೆ ನಡೆಸದಿರುವ ಬಗ್ಗೆ ಈ ಹಿಂದೆ ದೂರುಗಳು ಕೇಳಿ ಬಂದಿದ್ದವು.

‘ಉತ್ಪಾದನಾ ಹಬ್‌ ಸ್ಥಾಪನೆಯಗಲಿ’

‘ಉತ್ಪಾದನಾ ಹಬ್‌ಗಳನ್ನು ಟೈರ್ 3 ನಗರಗಳಿಗೂ ವಿಸ್ತರಿಸಬೇಕು. ಅದರಿಂದ ಸ್ಥಳೀಯ ವಿದ್ಯಾವಂತ ಯುವಜನರು ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಬಹುದು. ಜೊತೆಗೆ ಸ್ಥಳೀಯ ಆರ್ಥಿಕಾಭಿವೃದ್ಧಿಗೂ ಸಹಕಾರಿಯಾಗಲಿದೆ. ವ್ಯಾಪಾರ ಅಭಿವೃದ್ಧಿಯಾಗಲಿದೆ ಮತ್ತು ಸಂಬಂಧಗಳು ಉಳಿಯಲಿವೆ’ ಎಂದು ಚೇಂಬರ್‌ ಆಫ್‌ ಕಾಮರ್ಸ್ ಮಾಜಿ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್‌ ಶೆಟ್ಟಿ ಅಭಿಪ್ರಾಯಪಟ್ಟರು. ‘ಸೂಕ್ಷ್ಮ ಸಣ್ಣ ಕೈಗಾರಿಕೆ ನಡೆಸುವವರಿಗೆ ಅನುಕೂಲವಾಗಲು ತಾಲ್ಲೂಕು ಮಟ್ಟದಲ್ಲಿ ಅವರ ಉತ್ಪನ್ನಗಳ ಮಾರಾಟ ಮೇಳಗಳನ್ನು ಹಮ್ಮಿಕೊಳ್ಳಲು ಸರ್ಕಾರ ಯೋಜನೆ ರೂಪಿಸಬೇಕು. ಇಂತಹ ಉದ್ಯಮಗಳಿಗ ವಿಮಾ ಸುರಕ್ಷೆ ನೀಡಲು ಮುಂದಾಗಬೇಕು’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.