ADVERTISEMENT

‘ಜ. 15ರೊಳಗೆ ಕಾಮಗಾರಿ ಪೂರ್ಣಗೊಳಿಸಿ’

ಜಿಲ್ಲಾಸ್ಪತ್ರೆ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:36 IST
Last Updated 23 ನವೆಂಬರ್ 2025, 5:36 IST
ಶಾಸಕ ಯಶ್‌ಪಾಲ್‌ ಸುವರ್ಣ ಅವರು ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ಪರಿಶೀಲಿಸಿ, ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದರು
ಶಾಸಕ ಯಶ್‌ಪಾಲ್‌ ಸುವರ್ಣ ಅವರು ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ಪರಿಶೀಲಿಸಿ, ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದರು   

ಉಡುಪಿ: ನೂತನ ಜಿಲ್ಲಾಸ್ಪತ್ರೆ ಕಾಮಗಾರಿಗೆ ಬಾಕಿ ಅನುದಾನವನ್ನು ತಕ್ಷಣ ಮಂಜೂರು ಮಾಡಿ ಜನವರಿ 15 ರೊಳಗೆ ಜಿಲ್ಲೆಯ ಜನತೆಯ ಆರೋಗ್ಯ ಸೇವೆಗೆ ಲೋಕಾರ್ಪಣೆ ಮಾಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಜಿಲ್ಲಾಸ್ಪತ್ರೆ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಯ ಪ್ರಗತಿ ಹಾಗೂ ಉಳಿದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಬಳಿಕ ಅವರು ಮಾತನಾಡಿದರು.

ಜಿಲ್ಲಾಸ್ಪತ್ರೆ ಪೂರ್ಣಗೊಳಿಸುವ ಬಗ್ಗೆ ಈಗಾಗಲೇ ಹಲವು ಬಾರಿ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ, ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದರೂ, ಈವರೆಗೆ ಸಚಿವರು ನೀಡಿದ ಭರವಸೆಗಳು ಈಡೇರಿಲ್ಲ. ಜನವರಿ 15 ರೊಳಗೆ ನೂತನ ಜಿಲ್ಲಾಸ್ಪತ್ರೆ ಸೇವೆಗೆ ಲಭ್ಯವಾಗದಿದ್ದರೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ADVERTISEMENT

250 ಹಾಸಿಗೆಗಳ ಜಿಲ್ಲಾಸ್ಪತ್ರೆಯ ಶೇ 80 ರಷ್ಟು ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗೆ ಒಟ್ಟು ₹30 ಕೋಟಿ ಅನುದಾನ ತಕ್ಷಣ ಮಂಜೂರಾಗಬೇಕಿದೆ ಎಂದು ಹೇಳಿದರು.

ಕಿಡ್ನಿ, ಹೃದಯ, ನ್ಯೂರೋ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಳನ್ನು ಒಳಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದ್ದು, ಖಾಸಗಿ ಹಾಗೂ ನೆರೆಯ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯ ಮೇಲಿನ ಅವಲಂಬನೆಯನ್ನು ತಪ್ಪಿಸಿ, ಜಿಲ್ಲೆಯಲ್ಲಿ ಸೇವೆ ದೊರಕುವಂತಾಗಬೇಕು ಎಂದರು.

ಈ ಹಿಂದೆ ಚಿಂತನೆ ನಡೆಸಿದಂತೆ ಸಂಪೂರ್ಣ ಸೌಲಭ್ಯಗಳನ್ನು ಒಳಗೊಂಡ 50 ಬೆಡ್‌ಗಳ ಕ್ರಿಟಿಕಲ್ ಕೇರ್ ಯೂನಿಟ್ ಪ್ರಾರಂಭಿಸ ಬೇಕು ಹಾಗೂ 250 ಬೆಡ್‌ಗಳ ಆಸ್ಪತ್ರೆಗೆ ಅನುಗುಣವಾಗಿ ಅಗತ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯಕೇತರ ಸಿಬ್ಬಂದಿಯ ಮಂಜೂರಾತಿಗೆ ರಾಜ್ಯ ಸರ್ಕಾರ ತಕ್ಷಣ  ಕ್ರಮ ವಹಿಸಬೇಕು ಎಂದು ಹೇಳಿದರು.

ನೂತನ ಜಿಲ್ಲಾಸ್ಪತ್ರೆಯ ನಿರ್ವಹಣಾ ವೆಚ್ಚ ಹಾಗೂ ಕೂಸಮ್ಮ ಶಂಭು ಶೆಟ್ಟಿ ತಾಯಿ ಮಕ್ಕಳ ಆಸ್ಪತ್ರೆಯ ವಿವಿಧ ನಿರ್ವಹಣಾ ಸಮಸ್ಯೆಗಳಿಗೆ ಮತ್ತು ಅನುದಾನ ಕೊರತೆಗೆ ಪರಿಹಾರ ಕಂಡುಕೊಳ್ಳುವು ಹಾಗೂ ಬಾಕಿ ಉಳಿದಿರುವ ₹3.5 ಕೋಟಿ ಮೆಸ್ಕಾಂ ಬಿಲ್ ಪಾವತಿಯ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಶೋಕ್, ಎಂಜಿನಿಯರ್ ಶ್ರೀ ಗುರು ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸುಮಿತ್ರಾ ನಾಯಕ್, ಬಾಲಕೃಷ್ಣ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.