ADVERTISEMENT

ಉಡುಪಿ ಜಿಲ್ಲಾ ಆಸ್ಪತ್ರೆ ಡಯಾಲಿಸಿಸ್‌ ಘಟಕಕ್ಕೆ ಅನಾರೋಗ್ಯ

ಬಡ ರೋಗಿಗಳ ಪ್ರಾಣ ಉಳಿಸುವಂತೆ ಕರವೇ ಆಗ್ರಹ: ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 12:59 IST
Last Updated 13 ನವೆಂಬರ್ 2021, 12:59 IST
ಡಯಾಲಿಸಿಸ್‌ ಪ್ರಕ್ರಿಯೆ (ಸಾಂದರ್ಭಿಕ ಚಿತ್ರ)
ಡಯಾಲಿಸಿಸ್‌ ಪ್ರಕ್ರಿಯೆ (ಸಾಂದರ್ಭಿಕ ಚಿತ್ರ)   

ಉಡುಪಿ: ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಕೇಂದ್ರದಲ್ಲಿ ರೋಗಿಗಳಿಗೆ ಡಯಾಲಿಸಿಸ್‌ ಮಾಡಲು ಅಗತ್ಯವಾಗಿ ಬೇಕಿರುವ ರಾಸಾಯನಿಕ ಹಾಗೂ ಫಿಲ್ಟರ್‌ಗಳು ಕೊರತೆ ಎದುರಾಗಿದ್ದು, ಗಂಭೀರ ಸಮಸ್ಯೆ ಸೃಷ್ಟಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಬಡ ರೋಗಿಗಳು ಸಾವನ್ನಪ್ಪುವ ಅಪಾಯವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅನ್ಸಾರ್ ಅಹಮದ್ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್‌ ಘಟಕಗಳ ನಿರ್ವಹಣೆಯನ್ನು ಬಿ.ಆರ್‌.ಎಸ್‌ ಸಂಸ್ಥೆಗೆ ಹಾಗೂ 8 ಜಿಲ್ಲೆಗಳ ಡಯಾಲಿಸಿಸ್‌ ಘಟಕದ ನಿರ್ವಹಣೆಯನ್ನು ಸಂಜೀವಿನಿ ಸಂಸ್ಥೆಗೆ ಸರ್ಕಾರ ವಹಿಸಿತ್ತು.

2017ರಲ್ಲಿ ಆಗಿರುವ ಈ ಒಪ್ಪಂದ 5 ವರ್ಷಗಳದ್ದಾಗಿದ್ದು, ಅವಧಿಗೆ ಮುನ್ನವೇ ಬಿ.ಆರ್.ಎಸ್‌ ಸಂಸ್ಥೆ ಆರ್ಥಿಕ ಸಮಸ್ಯೆಯ ಕಾರಣವೊಡ್ಡಿ ಡಯಾಲಿಸಿಸ್‌ ಘಟಕಗಳ ನಿರ್ವಹಣೆ ಸಾದ್ಯವಿಲ್ಲ ಎಂದು ಸರ್ಕಾರ ಪತ್ರ ಬರೆದಿದೆ. ಸಮಸ್ಯೆಯ ಅರಿವಿದ್ದರೂ ಡಯಾಲಿಸಿಸ್‌ ಘಟಕಗಳ ನಿರ್ವಹಣೆಯ ಬಗ್ಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಬಡ ರೋಗಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ದೂರಿದರು.

ADVERTISEMENT

ರಾಜ್ಯ ಸರ್ಕಾರದಿಂದ ಬರಬೇಕಿರುವ ₹ 33 ಕೋಟಿ ಬಂದಿಲ್ಲ. ಹಾಗಾಗಿ ಡಯಾಲಿಸಿಸ್‌ ಘಟಕಗಳಲ್ಲಿ ಸೇವೆಗಳ ವ್ಯತ್ಯಯ ಉಂಟಾಗಿದೆ ಎಂದು ಬಿಆರ್‌ಎಸ್‌ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ, ಸರ್ಕಾರ ಹಾಗೂ ಬಿಆರ್‌ಎಸ್‌ ಸಂಸ್ಥೆಯ ನಿಲುವುಗಳಿಂದ ಬಡ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅನ್ಸಾರ್ ಅಹಮದ್ ಟೀಕಿಸಿದರು.

ಡಯಾಲಿಸಿಸ್ ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಹಲವು ತಿಂಗಳುಗಳಿಂದ ವೇತನ ನೀಡಿಲ್ಲ. ಘಟಕದಲ್ಲಿ ಅಗತ್ಯವಾಗಿ ಬೇಕಾದಷ್ಟು ರಾಸಾಯನಿಕ ಸಾಮಾಗ್ರಿಗಳು, ಫಿಲ್ಟರ್‌ಗಳು ಇಲ್ಲ. ಈ ಬಗ್ಗೆ ಖುದ್ದು ಕರವೇ ಕಾರ್ಯಕರ್ತರು ಪರಿಶೀಲಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವಶಕ್ತಿ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಮೋದ್ ಉಚ್ಚಿಲ್ ಮಾತನಾಡಿ, ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರಕ್ಕೆ ಬರುವವರು ಶ್ರೀಮಂತರಲ್ಲ; ಬಡ ರೋಗಿಗಳು. ಸರ್ಕಾರ ಬಡವರ ಪ್ರಾಣದ ಜತೆ ಚೆಲ್ಲಾಟವಾಡಬಾರದು. ನ.15ರ ಸಂಜೆಯೊಳಗೆ ಸಿಬ್ಬಂದಿಗೆ ಬಾಕಿ ವೇತನ ಪಾವತಿಸಬೇಕು. ಅಗತ್ಯವಿರುವ ರಾಸಾಯನಿಕ ಹಾಗೂ ಫಿಲ್ಟರ್‌ಗಳನ್ನು ಒದಗಿಸಬೇಕು. ಇಲ್ಲವಾದರೆ, ನ.16ರಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಘಟಕ ಕಾರ್ಯ ನಿರ್ವಹಣೆ’

ಡಯಾಲಿಸಿಸ್ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಡಯಾಲಿಸಿಸ್‌ ನಡೆಯುತ್ತಿದೆ. ಘಟಕಗಳ ನಿರ್ವಹಣೆಯ ಹೊಣೆ ಹೊತ್ತಿದ್ದ ಸಂಸ್ಥೆ ನಿರ್ವಹಣೆ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದ್ದು, ಸರ್ಕಾರದ ನಿರ್ದೇಶನದಂತೆ ಜಿಲ್ಲಾ ಆಸ್ಪತ್ರೆಗೆ ಬರುವ ಆದಾಯವನ್ನು ಬಳಸಿಕೊಂಡು ರೋಗಿಗಳಿಗೆ ತೊಂದರೆಯಾಗದಂತೆ ಡಯಾಲಿಸಿಸ್‌ ಘಟಕದ ನಿರ್ವಹಣೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

‘4 ಯಂತ್ರಗಳು ದುರಸ್ತಿ’

ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಘಟಕದ ಪರಿಸ್ಥಿತಿಯನ್ನು ಅಲ್ಲಿನ ಸಿಬ್ಬಂದಿಯೇ ಮಾಧ್ಯಮಗಳಿಗೆ ವಿವರಿಸಿದ್ದು, ಡಯಾಲಿಸಿಸ್‌ ಘಟಕದ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲವಾದ ಪರಿಣಾಮ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಸಾದ್ಯವಾಗುತ್ತಿಲ್ಲ. 4 ಡಯಾಲಿಸಿಸ್ ಯಂತ್ರಗಳು ಹಾಳಾಗಿದ್ದು, ದುರಸ್ತಿಯಾಗಿಲ್ಲ. ಇಲ್ಲಿ 11 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 4 ತಿಂಗಳುಗಳಿಂದ ವೇತನ ನೀಡಿಲ್ಲ. ಜೀವನ ನಿರ್ವಹಣೆಯೇ ಕಷ್ಟವಾಗಿದ್ದು, ಕರ್ತವ್ಯ ಮುಗಿಸಿ ಮನೆಗೆ ಹೋಗಲು ಬಸ್‌ಗೆ ಹಣವೂ ಇಲ್ಲವಾಗಿದೆ ಎಂದು ಘಟಕದ ಸಿಬ್ಬಂದಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.