ADVERTISEMENT

ಭಾರತ 75, ಉಡುಪಿ 25: ಅದ್ಧೂರಿ ರಜತ ಮಹೋತ್ಸವ

ಆ.25ರಂದು ಅಜ್ಜರಕಾಡಿನಲ್ಲಿ ಕಾರ್ಯಕ್ರಮ; ಸಚಿವ ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:57 IST
Last Updated 19 ಆಗಸ್ಟ್ 2022, 15:57 IST

ಉಡುಪಿ: ಉಡುಪಿ ಜಿಲ್ಲೆಯಾಗಿ ರಚನೆಯಾಗಿ 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ‘ಭಾರತ 75, ಉಡುಪಿ 25’ ಶೀರ್ಷಿಕೆಯಡಿ ಅದ್ಧೂರಿಯಾಗಿ ರಜತ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಶುಕ್ರವಾರ ಮಣಿಪಾಲದ ಕಂಟ್ರಿ ಇನ್ ಹೋಟೆಲ್ ಸಭಾಂಗಣದಲ್ಲಿ ಮಾತನಾಡಿದ ಸಚಿವರು 1997ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆ ಪ್ರತ್ಯೇಕವಾಗಿ 25 ವರ್ಷಗಳಲ್ಲಿ ಅಭಿವೃದ್ಧಿಯಲ್ಲಿ ಬಹುದೂರ ಸಾಗಿ ಬಂದಿದೆ. ಜಿಲ್ಲೆಯ ಬೆಳವಣಿಗೆಗೆ ಕಾರಣರಾದ ಅಂದಿನ ಹಾಗೂ ಇಂದಿನ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳನ್ನು ರಜತ ಮಹೋತ್ಸವದಲ್ಲಿ ಸನ್ಮಾನಿಸಲು ಉದ್ದೇಶಿಸಲಾಗಿದೆ ಎಂದರು.

ಆ.25ರಂದು ಉಡುಪಿಯ ಅಜ್ಜರಕಾಡಿನಲ್ಲಿ ನಡೆಯುವ ರಜತ ಮಹೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್‌ಚಂದ್ರ ಗೆಹ್ಲೋಟ್‌ ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 3ಕ್ಕೆ ಬೋರ್ಡ್‌ ಹೈಸ್ಕೂಲ್‌ನಿಂದ ಅಜ್ಜರಕಾಡಿನವರೆಗೂ ಬೃಹತ್ ಜಾಥಾ ನಡೆಯಲಿದೆ.

ADVERTISEMENT

ರಜತ ಮಹೋತ್ಸವ ಸರ್ಕಾರಿ ಕಾರ್ಯಕ್ರಮವಲ್ಲ ಜನರ ಕಾರ್ಯಕ್ರಮವಾಗಿರಲಿದೆ. ಆ.25ರಿಂದ ಜ.25ರವರೆಗೆ 6 ತಿಂಗಳು ಕಾರ್ಯಕ್ರಮಗಳು ನಡೆಯಲಿವೆ. ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ದೇವಸ್ಥಾನಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.‌ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಎಲ್ಲರ ಸಹಕಾರದೊಂದಿಗೆ ‘ಭವಿಷ್ಯದ ಉಡುಪಿ’ ಕಟ್ಟುವ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗುವುದು. ಎಲ್ಲರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪರಿಗಣಿಸಿ ಕಾರ್ಯಕ್ರಮ ನಡೆಸಲಾಗುವುದು. ಉಡುಪಿ ರಾಜ್ಯದ ನಾಯಕತ್ವ ತೆಗೆದುಕೊಳ್ಳಬೇಕು ಎಂಬುದು ನಮ್ಮೆಲ್ಲರ ಉದ್ದೇಶ ಎಂದರು.

ರಜತ ಮಹೋತ್ಸವದ ಭಾಗವಾಗಿ ವಿಶಿಷ್ಟ ಲೋಗೋ, ಸಾಂಗ್‌ ಹಾಗೂ 25 ವರ್ಷ ಹಿಂದಿನ ಉಡುಪಿ ಹಾಗೂ 25 ವರ್ಷ ನಂತರದ ಉಡುಪಿಯನ್ನು ಪರಿಚಯಿಸುವ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದು ಸುನಿಲ್ ಕುಮಾರ್ ತಿಳಿಸಿದರು.

ರಾಜ್ಯ ಹಿಂದುಳಿದ ಆಯೋಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಉಡುಪಿ ನೂತನ ಜಿಲ್ಲೆಯಾಗಿ ರಚನೆಯಾದಾಗ ಉದ್ಘಾಟನಾ ಸಮಾರಂಭದಲ್ಲಿ ಸಚಿವನಾಗಿ ಭಾಗವಹಿಸಿದ್ದೆ. 25 ವರ್ಷಗಳ ನಂತರ ರಜತ ಮಹೋತ್ಸವದಲ್ಲೂ ಭಾಗವಹಿಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ, ಎಸ್‌ಪಿ ಅಕ್ಷಯ್ ಮಚೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಇದ್ದರು.

ಅಗ್ನಿಪಥ್ ದೌಡ್‌ 25ರಂದು

ಸೇನೆಗೆ ಸೇರಲು ಯುವಕರನ್ನು ಪ್ರೋತ್ಸಾಹಿಸಲು ಹಾಗೂ ತರಬೇತಿ ನೀಡಲು ಅಗ್ನಿಪಥ್ ದೌಡ್ ಕಾರ್ಯಕ್ರಮ ರೂಪಿಸಲಾಗಿದ್ದು, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಆ.24ರಂದು ಅಗ್ನಿಪಥ್ ದೌಡ್ ಮ್ಯಾರಥಾನ್‌ಗೆ ಚಾಲನೆ ನೀಡಲಾಗುವುದು. 25ರಂದು ಮ್ಯಾರಥಾನ್ ಉಡುಪಿಯಲ್ಲಿ ಸಮಾಪನಗೊಳ್ಳಲಿದೆ. 25 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 25 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ರಾಜ್ಯದಾದ್ಯಂತ ರಥಯಾತ್ರೆ

ಉಡುಪಿ ರಾಜ್ಯದ ಗಮನ ಸೆಳೆಯಬೇಕು, ಪ್ರವಾಸಿಗರನ್ನು ಆಕರ್ಷಿಸಬೇಕು ಎಂಬ ಉದ್ದೇಶದಿಂದ ರಥಯಾತ್ರೆ ಆರಂಭಿಸಲಾಗಿದೆ. ಉಡುಪಿಯಿಂದ ಆರಂಭವಾಗುವ ರಥಯಾತ್ರೆ ‘ಉಡುಪಿಗೆ ಬನ್ನಿ’ ಎಂಬ ಕರೆಯೊಂದಿಗೆ 3 ತಿಂಗಳು ರಾಜ್ಯದಾದ್ಯಂತ ಸಂಚರಿಸಲಿದೆ. ಜ.25ರಂದು ಉಡುಪಿ ರಜತ ಉತ್ಸವ ಸಮಾರೋಪವಾಗಲಿದೆ. ಇಡೀ ಜಿಲ್ಲೆಯ ಜನ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.