ADVERTISEMENT

ಬಜೆಟ್ ನಿರೀಕ್ಷೆ: ತೋಟಗಾರಿಕೆ ಬೆಳೆ ಉತ್ತೇಜನ ನಿರೀಕ್ಷೆಯಲ್ಲಿ ಉಡುಪಿ ರೈತರು

ರೇಷ್ಮೆ ಕೃಷಿಕರ ಪ್ರೋತ್ಸಾಹಕ್ಕೆ ಯೋಜನೆ ರೂಪಿಸಲು ರೈತರ ಆಗ್ರಹ

ನವೀನ್‌ಕುಮಾರ್‌ ಜಿ.
Published 9 ಜನವರಿ 2026, 2:44 IST
Last Updated 9 ಜನವರಿ 2026, 2:44 IST
ಡ್ರ್ಯಾಗನ್‌ ಬೆಳೆ
ಡ್ರ್ಯಾಗನ್‌ ಬೆಳೆ   

ಉಡುಪಿ: ಜಿಲ್ಲೆಯಲ್ಲಿ ಭತ್ತದ ಬೆಳೆಯ ಜೊತೆಗೆ ತೋಟಗಾರಿಕಾ ಬೆಳೆಯನ್ನೂ ನೆಚ್ಚಿರುವ ರೈತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಈ ಬಾರಿಯ ಅತಿವೃಷ್ಟಿ ಹೊಡೆತದಿಂದ ಅವರಿನ್ನೂ ಸಾವರಿಸಿಕೊಂಡಿಲ್ಲ.

ಅಡಿಕೆ ಮತ್ತು ತೆಂಗು ಇಲ್ಲಿನ ಕೃಷಿಕರ ಪ್ರಮುಖ ತೋಟಗಾರಿಕಾ ಬೆಳೆಗಳಾಗಿವೆ. ಜೊತೆಗೆ ಡ್ರ್ಯಾಗನ್‌ ಫ್ರೂಟ್‌, ಅನಾನಸು ಮೊದಲಾದವುಗಳನ್ನೂ ಬೆಳೆಯುವವರಿದ್ದಾರೆ.

ಈ ಮಳೆಗಾಲದಲ್ಲಿ ನಿರಂತರ ಮಳೆ ಸುರಿದ ಪರಿಣಾಮವಾಗಿ ತೋಟಗಾರಿಕಾ ಬೆಳೆಗಳು ತತ್ತರಿಸಿದ್ದವು. ಅಡಿಕೆ ಬೆಳೆಗೆ ಬೋರ್ಡೊ ದ್ರಾವಣ ಸಿಂಪಡಿಸಲು ಬಹುತೇಕ ರೈತರಿಗೆ ಸಾಧ್ಯವಾಗದೆ. ಅಡಿಕೆಗೆ ಕೊಳೆರೋಗ ತಗುಲಿ ಎಳೆ ಅಡಿಕೆಗಳು ಉದುರಿ ಬಿದ್ದು ನಷ್ಟ ಸಂಭವಿಸಿತ್ತು.

ADVERTISEMENT

ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿರುವ ಕೃಷಿಕರಿಗೆ ಅನುಕೂಲವಾಗಲು ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಮೀಸಲಿರಿಸಿ ಯೋಜನೆ ಘೋಷಿಸಬೇಕೆಂಬುದು ಜಿಲ್ಲೆಯ ರೈತರ ಬೇಡಿಕೆಯಾಗಿದೆ.

ಈ ಬಾರಿ ತೆಂಗಿಗೂ ಕೊಳೆರೋಗ ಅಂಟಿಕೊಂಡಿತ್ತು, ಅದರೊಂದಿಗೆ ಕೆಂಪು ಮೂತಿ ಹುಳದ ದಾಳಿಯಿಂದಲೂ ರೈತರು ಕಂಗೆಟ್ಟಿದ್ದರು. ಡ್ರ್ಯಾಗನ್‌ ಬೆಳೆದಿದ್ದ ರೈತರು ಶಿಲೀಂಧ್ರ ರೋಗದಿಂದ ಫಸಲು ಕಳೆದುಕೊಂಡಿದ್ದರು.

ತೋಟಗಾರಿಕೆ ಬೆಳೆಗಳಿಗೆ ಬೆಳೆವಿಮೆ ಮಾಡಿಸಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಬಹುತೇಕ ಕೃಷಿಕರು. ಬೆಳೆ ವಿಮೆಗೆ ಸಂಬಂಧಿಸಿ ತೋಟಗಾರಿಕಾ ಬೆಳೆಗಾರರಿಗೂ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು ಎಂಬುದೂ ರೈತರ ಆಗ್ರಹವಾಗಿದೆ.

ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮಾಡುವ ಹಲವು ಮಂದಿ ರೈತರಿದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಅವರು ಈ ಕೃಷಿಯಿಂದಲೇ ವಿಮುಖರಾಗುವ ಸ್ಥಿತಿ ಉಂಟಾಗಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ರೇಷ್ಮೆ ಕೃಷಿಕರ ಸಂಖ್ಯೆಯೂ ಇಳಿಮುಖವಾಗುತ್ತಿದೆ ಎನ್ನುತ್ತಾರೆ ಕೃಷಿಕರು.

ಜಿಲ್ಲೆಯಲ್ಲಿ ಖರೀದಿ ಕೇಂದ್ರ ಇಲ್ಲದಿರುವುದು ರೈತರು ರೇಷ್ಮೆ ಕೃಷಿಗೆ ಹಿಂದೇಟು ಹಾಕಲು ಮುಖ್ಯ ಕಾರಣವಾಗಿದೆ. ಕಾರ್ಕಳದಲ್ಲಿ ಹಿಂದೆ ಇದ್ದ ಖರೀದಿ ಕೇಂದ್ರವೂ ಈಗ ಬಾಗಿಲು ಮುಚ್ಚಿದೆ. ರೇಷ್ಮೆ ಗೂಡುಗಳನ್ನು ಮಾರಲು ಸದ್ಯ ಹಾಸನಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುವುದು ಅವರ ಅಳಲಾಗಿದೆ.

ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಸೂಕ್ತ ಯೋಜನೆ ಕಾರ್ಯಗತಗೊಳಿಸಬೇಕು. ಜೊತೆಗೆ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಲೂ ಮುಂದಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಡ್ರ್ಯಾಗನ್‌ ಫ್ರೂಟ್‌ ಮೊದಲಾದ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆದ ರೈತರಿಗೆ ಬೆಳೆಗೆ ರೋಗ ಬಂದರೆ ಪರಿಹಾರ ಮಾರ್ಗ ಸೂಚಿಸುವವರೇ ಇಲ್ಲ ಎಂಬಂತಾಗಿದೆ. ಅಂತಹ ಬೆಳೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೂ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕೆಂಬ ಬೇಡಿಕೆಗಳೂ ರೈತರ ವಲಯದಿಂದ ಕೇಳಿ ಬಂದಿವೆ.

‘ಅಡಿಕೆ ಬೆಳೆಗಾರರಿಗೆ ಸಿಗಲಿ ಪ್ರೋತ್ಸಾಹ’

‘ಈ ಬಾರಿ ಅತಿವೃಷ್ಟಿಯಿಂದಾಗಿ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಕೆಲವೆಡೆ ಶೇ 80ರಷ್ಟು ಬೆಳೆ ಹಾನಿಯಾಗಿದೆ. ಆದರೆ ಬೆಳೆ ಆಧರಿತ ವಿಮೆ ಸೌಲಭ್ಯ ಪಡೆದುಕೊಳ್ಳಲು ರೈತರು ಹರಸಾಹಸ ಪಡುವಂತಾಗಿತ್ತು. ಬೆಳೆವಿಮೆ ಪ್ರಕ್ರಿಯೆಯನ್ನು ಸರಳೀಕರಿಸಿ ಮೊತ್ತ ಹೆಚ್ಚಿಸಬೇಕು’ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌ ಆಗ್ರಹಿಸಿದ್ದಾರೆ.

‘ಜಿಲ್ಲೆಯಲ್ಲಿ ಈಚೆಗೆ ತೋಟಗಾರಿಕಾ ಬೆಳೆಗಳತ್ತ ಹೆಚ್ಚಿನ ರೈತರು ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ಉತ್ತೇಜನ ನೀಡಲು ಬಜೇಟ್‌ನಲ್ಲಿ ಉತ್ತಮ ಯೋಜನೆಗಳನ್ನು ಘೋಷಿಸಬೇಕು ಮತ್ತು ಕಾರ್ಯರೂಪಕ್ಕೆ ತರಬೇಕು’ ಎಂದು ಅವರು ಹೇಳಿದ್ದಾರೆ. ‘ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದಿರುವ ಮಳೆಯ ಪ್ರಮಾಣವನ್ನು ಆಧರಿಸಿ ಬೆಳೆವಿಮೆ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಸಿಗುವ ಮೊತ್ತ ಕಡಿಮೆಯಾಗುತ್ತದೆ. ಸಮರ್ಪಕವಾಗಿ ಸಮೀಕ್ಷೆ ನಡೆಸಿ ಬೆಳೆವಿಮೆ ನೀಡಬೇಕು. ಅಡಿಕೆ ಬೆಳೆಗೆ ಸಿಂಪಡಿಸುವ ಬೋರ್ಡೊ ದ್ರಾವಣಕ್ಕೆ ಬಳಸುವ ಮೈಲುತುತ್ತು ಬೆಲೆ ಕೆ.ಜಿಗೆ ₹400 ದಾಟಿದೆ. ಅದನ್ನು ಶೇ 50ರಷ್ಟು ಸಹಾಯಧನದಲ್ಲಿ ನೀಡಲು ಯೋಜನೆ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.