ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್‌ಗಳಿಗೆ ಜನರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಉಡುಪಿ ನಗರ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಗುರುವಾರವೂ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಗಣಪತಿ ದೇವಾಲಯಗಳಿಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಮನೆಗಳಲ್ಲೂ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ಮೂರ್ತಿ ವಿಸರ್ಜನೆ ಮಾಡಲಾಯಿತು.
ಗಣೇಶ ಪೆಂಡಾಲ್‌ಗಳಲ್ಲಿ ವಿಶೇಷ ಪೂಜೆ, ಗಣಹೋಮ ನಡೆಯಿತು. ಕೆಲವು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆಯೂ ನಡೆಯಿತು. ಹಬ್ಬದ ಅಂಗವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಂಗಳವಾರ ಸಂಜೆಯಿಂದ ಆರಂಭವಾಗಿದ್ದ ಬಿರುಸಿನ ಮಳೆ ಗುರುವಾರದ ವರೆಗೂ ಮುಂದುವರಿದಿದ್ದ ಕಾರಣ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಅಲ್ಪ ಕಡಿಮೆಯಾಗಿತ್ತು. ಗಣೇಶೋತ್ಸವ ಪೆಂಡಾಲ್‌ಗಳಿಗೆ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರುವುದಕ್ಕೂ ಸಮಸ್ಯೆಯಾಗಿತ್ತು.
ಮಣಿಪಾಲದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಮಣಿಪಾಲದ ಸಿಂಡಿಕೇಟ್ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ 48ನೇ ವರ್ಷದ ಗಣೇಶೋತ್ಸವ ಜರುಗಿತು.
ಚರ್ಚ್ ಧರ್ಮಗುರುಗಳಿಂದ ಸೌಹಾರ್ದ ಭೇಟಿ
ಉಡುಪಿ: ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವತಿಯಿಂದ ತೊಟ್ಟಂನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಸೌಹಾರ್ದ ಭೇಟಿ ನೀಡಲಾಯಿತು.
ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಧರ್ಮಗುರು ಡೆನಿಸ್ ಡೆಸಾ ಹಾಗೂ ಸಮನ್ವಯ ಸರ್ವಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ನೇತೃತ್ವದಲ್ಲಿ ಪರಸ್ಪರ ಗಣೇಶ ಚತುರ್ಥಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಧರ್ಮಗುರು ಡೆನಿಸ್ ಡೆಸಾ ತೊಟ್ಟಂ ಪರಿಸರ ಸರ್ವಧರ್ಮಗಳ ಸೌಹಾರ್ದದ ತಾಣವಾಗಿದ್ದು ಪ್ರತಿವರ್ಷ ಸಮಿತಿಯ ಸದಸ್ಯರೊಡಗೂಡಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಹೋದರರಂತೆ ಭಾಗಿಯಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ ಎಂದರು.
ತೊಟ್ಟಂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ ಸಂತ ಅನ್ನಮ್ಮ ಕಾನ್ವೆಂಟಿನ ಸಿಸ್ಟರ್ ಸುಷ್ಮಾ ಸಿಸ್ಟರ್ ಶಾಲಿನಿ ಸಿಸ್ಟರ್ ಲೂಸಿ ಅಂತರ್ ಧರ್ಮೀಯ ಸಂವಾದ ಆಯೋಗದ ಸಂಚಾಲಕ ಆಗ್ನೆಲ್ ಫೆರ್ನಾಂಡಿಸ್ ಓನಿಲ್ ಡಿಸೋಜ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಕೆ ಸಾಲಿಯಾನ್ ಕಾರ್ಯಾಧ್ಯಕ್ಷ ಯತಿರಾಜ್ ಸಾಲಿಯಾನ್ ಪ್ರಧಾನ ಕಾರ್ಯದರ್ಶಿ ಯೋಗಿಶ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.