ADVERTISEMENT

ಉಡುಪಿ | ಕಂಬಳ ಕರೆ ಶಂಕುಸ್ಥಾಪನೆ ವಿವಾದ: ಬಿಜೆಪಿ– ಕಾಂಗ್ರೆಸ್‌ ಆರೋಪ ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 7:47 IST
Last Updated 3 ಮಾರ್ಚ್ 2026, 7:47 IST
ಸುನಿಲ್‌ ಕುಮಾರ್‌
ಸುನಿಲ್‌ ಕುಮಾರ್‌   

ಉಡುಪಿ: 80 ಬಡಗಬೆಟ್ಟು ಗ್ರಾಮದಲ್ಲಿ ಜಿಲ್ಲಾಡಳಿತದ ನಿಷೇಧಾಜ್ಞೆಯ ನಡುವೆಯೇ ಉಡುಪಿ ಕಂಬಳ ಕರೆಯ ಶಂಕುಸ್ಥಾಪನೆ ಸಮಾರಂಭ ನೇರವೇರಿರುವ ಕುರಿತು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಪರಸ್ಪರ ಆರೋಪ– ಪ್ರತ್ಯಾರೋಪಗಳನ್ನು ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಕಾಂಗ್ರೆಸ್ ಮುಖಂಡ ವಿನಯ ಸೊರಕೆ ಅವರು, ‘ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ನೇತೃತ್ವದಲ್ಲಿ ಶಂಕುಸ್ಥಾಪನೆ ನಡೆದಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 6.30 ಎಕ್ರೆ ಜಾಮೀನು ಇನ್ನೂ ಕಂಬಳ ಸಮಿತಿಗೆ ಹಸ್ತಾಂತರವಾಗಿಲ್ಲ. ಏಕಾಏಕಿ 6.30 ಎಕ್ರೆ ಜಾಮೀನು ಮತ್ತು ಅದರ ಸುತ್ತಮುತ್ತಲಿನ ಜಾಗ ಸೇರಿ 13 ಎಕ್ರೆ ಜಾಗದಲ್ಲಿ ಅತಿಕ್ರಮಣ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಜಮೀನನನ್ನು ಕಂಬಳಕ್ಕೋಸ್ಕರ, ಕಂಬಳದ ಕೋಣಗಳ ಚಿಕಿತ್ಸೆಗಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಂಜೂರು ಮಾಡಲಾಗಿದೆ. ಜಮೀನನ್ನು ಕಾಯ್ದಿರಿಸಿದ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕು. ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆ ಯಾವುದೇ ಗುತ್ತಿಗೆ, ಹೊರಗುತ್ತಿಗೆ ನೀಡಬಾರದು, ಅತಿಕ್ರಮಣ ಮಾಡಬಾರದು ಸೇರಿದಂತೆ ವಿವಿಧ ಷರತ್ತುಗಳನ್ನು ಹಾಕಲಾಗಿದೆ’ ಎಂದರು.

ADVERTISEMENT

‘ಸರ್ಕಾರ ಹಾಕಿರುವ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಅರಣ್ಯ ಇಲಾಖೆಯ ಅನುಮತಿ ಪಡೆಯದ ಮರಗಳನ್ನು ಕಡಿಯಲಾಗಿದೆ. ಈ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದೆ. ಅಲ್ಲದೆ ಜೆಸಿಬಿ ತಂದು ಸಮತಟ್ಟುಗೊಳಿಸಲಾಗಿದೆ’ ಎಂದು ಹೇಳಿದರು.

‘ಕಂಬಳ ಕರೆ ಶಂಕುಸ್ಥಾಪನೆ ಮಾಡಿರುವ ಜಾಗದ ಸುತ್ತಮುತ್ತ 10 ಕುಟುಂಬಗಳು ವಾಸಿಸುತ್ತಿದ್ದು, ಅವರು 40 ವರ್ಷಗಳಿಂದ ತರಕಾರಿ ಕೃಷಿಗಾಗಿ ಆ ಜಾಗವನ್ನು ಉಪಯೋಗಿಸುತ್ತಿದ್ದರು’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ ಮಟ್ಟದಲ್ಲಿ ಕಂಬಳ ಸಮಿತಿಯೇ ರಚನೆಯಾಗಿಲ್ಲ. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು, ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಿದ್ದರಷ್ಟೇ’ ಎಂದರು.

‘ಕಂಬಳದ ಹೆಸರಿನಲ್ಲಿ ಅಕ್ರಮ ಮಾಡಲಾಗುತ್ತಿದೆ. ಅದನ್ನು ಮರೆಮಾಚಲು ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ’ ಎಂದೂ ಹೇಳಿದರು.

‘ರಾಜ್ಯ ಕಂಬಳ ಆಸೋಸಿಯೇಶನ್ ಅಧ್ಯಕ್ಷರಾಗಿ ದೇವಿಪ್ರಸಾದ್ ಶೆಟ್ಟಿ ಅವರನ್ನು ಸರ್ಕಾರ ನೇಮಿಸಿದೆ. ಈಗಿರುವಾಗ ಅವರು ಸರ್ಕಾರದ ನಿಷೇಧಾಜ್ಞೆ ಆದೇಶವನ್ನು ಉಲ್ಲಂಘಿಸಿ ಆ ಕಾರ್ಯಕ್ರಮಕ್ಕೆ ತೆರಳಬಾರದಿತ್ತು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಪ್ರಮುಖರಾದ ಹರೀಶ್‌ ಕಿಣಿ, ಸಂತೋಷ್‌ ಕುಮಾರ್, ಸಂತೋಷ್‌ ಕುಲಾಲ್‌ ಭಾಗವಹಿಸಿದ್ದರು.

‘ಮತ್ತೆ ಶಂಕುಸ್ಥಾಪನೆ ಮಾಡಿದರೆ ಪ್ರತಿಭಟನೆ’

‘80 ಬಡಗಬೆಟ್ಟು ಗ್ರಾಮದಲ್ಲಿ ಉಡುಪಿ ಕಂಬಳ ಕರೆಗೆ ಜಿಲ್ಲಾಡಳಿತವು ಮತ್ತೆ ಶಂಕುಸ್ಥಾಪನೆ ನೆರವೇರಿಸಿದರೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ‘ಉಡುಪಿ ಕಂಬಳ ನಿರಾತಂಕವಾಗಿ ನಡೆಯಬೇಕು. ಜಿಲ್ಲಾಡಳಿತವು ಜನಪ್ರತಿನಿಧಿಗಳಿಗೆ ಸಹಕಾರ ನೀಡಬೇಕು. ಪರಾಜಿತ ಅಭ್ಯರ್ಥಿಗಳ ಕೈಗೊಂಬೆಯಂತೆ ವರ್ತಿಸಬಾರದು’ ಎಂದರು. ‘ಕಂಬಳ ನೆಪ ಮಾತ್ರ. ಜನಪರ ಕೆಲಸಗಳನ್ನು ಪರಾಜಿತ ಅಭ್ಯರ್ಥಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಕಂಬಳ ಸಮಿತಿಗೆ ಎಲ್ಲೂ ಜಾಗ ಹಸ್ತಾಂತರಿಸುವುದಿಲ್ಲ. ಆದರೆ ಕಂಬಳ ನಡೆಸುವುದು ಕಂಬಳ ಸಮಿತಿ. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಕಂಬಳಕ್ಕೆ ಅನುದಾನ ನೀಡಲಿ. ಇಲ್ಲದಿದ್ದರೆ ದಾನಿಗಳ ನೆರವಿನಿಂದ ಮಾಡುತ್ತೇವೆ’ ಎಂದು ಹೇಳಿದರು. ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ ‘ಆರು ತಿಂಗಳಿನಿಂದ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಯುವಜನ ಸಬಲೀಕರಣ ಇಲಾಖೆಗೆ ಜಾಗ ಹಸ್ತಾಂತರವಾಗಿದೆ. ಏಕಾಏಕಿ ನಿಷೇಧಾಜ್ಞೆ ಹೇರಿದ್ದು ಯಾಕೆ’ ಎಂದು ಪ್ರಶ್ನಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ‘ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಮ್ಮ ಮೇಲೆ ವಿನಯಕುಮಾರ್‌ ಸೊರಕೆ ಅವರ ಒತ್ತಡದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆ ಮೂಲಕ ನಮ್ಮ ಬಾಯಿ ಮುಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ಶಾಸಕರಾದ ಯಶ್‌ಪಾಲ್‌ ಸುವರ್ಣ ಕಿರಣ್‌ಕುಮಾರ್‌ ಕೊಡ್ಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್‌ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.