ADVERTISEMENT

ಉಡುಪಿ | ಬಿಜೆಪಿ ಜಿಲ್ಲಾಧ್ಯಕ್ಷರು ತಲೆ ಬೋಳಿಸಿಕೊಳ್ಳಲಿ: ಅಶೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 8:37 IST
Last Updated 4 ಜೂನ್ 2023, 8:37 IST
ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ
ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ   

ಉಡುಪಿ: ‘ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವ ಭರವಸೆಗಳಾದ ಗ್ಯಾರಂಟಿಗಳ ಅನುಷ್ಠಾನವಾದರೆ ತಲೆ ಬೋಳಿಸಿಕೊಂಡು ಕೆಪಿಸಿಸಿ ಕಚೇರಿ ಎದುರು ಕೂರುವುದಾಗಿ ಸವಾಲು ಹಾಕಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನುಡಿದಂತೆ ನಡೆದುಕೊಳ್ಳಲಿ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಪಕ್ಷದ ಗೌರವಯುತ ಸ್ಥಾನದಲ್ಲಿರುವ ಕುಯಿಲಾಡಿ ಸುರೇಶ್ ನಾಯಕ್‌ ಪ್ರಚಾರಕ್ಕೋಸ್ಕರ ಬಾಲಿಶ ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷ ಬಡವರಿಗಾಗಿ ಅನುಷ್ಠಾನಗೊಳಿಸಿರುವ ಯೋಜನೆಗಳ ಸೌಲಭ್ಯಗಳನ್ನು ಪಡೆಯುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸುವ ಉದಾರತೆಯನ್ನೂ ಪ್ರದರ್ಶಿಸದಿರುವುದು ಅವರ ಸಂಕುಚಿತ ಮನೋಭಾವ ತೋರಿಸುತ್ತದೆ ಎಂದರು.

ಚುನಾವಣಾ ಸಮಯದಲ್ಲಿ ಗ್ಯಾರಂಟಿಗಳ ಬಗ್ಗೆ ಅವಹೇಳನಕಾರಿ ಮಾತನಾಡಿದವರು, ಬೋಗಸ್ ಎಂದು ಜರಿದವರು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗುಟ್ಟಾಗಿ ಯೋಜನೆಗಳ ಲಾಭ ಪಡೆಯುವುದು ಬಿಜೆಪಿ ಅಜೆಂಡವಾಗಿದೆ. ಜನರ ತೆರಿಗೆ ಹಣದಿಂದ ಸವಲತ್ತುಗಳನ್ನು ನೀಡಿದರೆ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ ಎನ್ನುವವರು, ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಹೊಡೆದಾಗ ಮಾತನಾಡಲಿಲ್ಲ. ಲಕ್ಷಾಂತರ ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡಿದಾಗ, ಉದ್ದಿಮೆದಾರರ ₹20 ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡಿದಾಗ ಪ್ರತಿರೋಧ ತೋರಲಿಲ್ಲ. ರಾಜ್ಯದ ಬಡವರಿಗೆ ಯೋಜನೆ ಘೋಷಿಸಿದಾಗ ರಾಜ್ಯ ದಿವಾಳಿ ಆಗುತ್ತಿದೆ ಎಂದು ಬೊಬ್ಬಿಡುತ್ತಿರುವುದು ವಿಪರ್ಯಾಸ ಎಂದು ಅಶೋಕ್ ಕುಮಾರ್ ಕೊಡವೂರು ಟೀಕಿಸಿದ್ದಾರೆ.

ADVERTISEMENT

ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಜಮೆ ಮಾಡುವುದು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಬಿಜೆಪಿ ಆಶ್ವಾಸನೆಗಳು ಈಡೇರಿಸಲು ಇದುವರೆಗೂ ಸಾಧ್ಯವಾಗದಿರುವುದು  ಬಿಜೆಪಿಯ ದುರ್ಬಲ ಮನಸ್ಥಿತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.