ADVERTISEMENT

ಉಡುಪಿ | ಭತ್ತ ಖರೀದಿಗೆ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಭತ್ತದ ಬೆಂಬಲ ಬೆಲೆಯ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:12 IST
Last Updated 24 ಸೆಪ್ಟೆಂಬರ್ 2025, 6:12 IST
.
.   

ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಭತ್ತದ ಬೆಂಬಲ ಬೆಲೆಯ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಮಾನ್ಯ ಭತ್ತಕ್ಕೆ ₹2,369 ಹಾಗೂ ಗ್ರೇಡ್ ಎ ಭತ್ತಕ್ಕೆ ₹2,389 ನಿಗದಿಪಡಿಸಲಾಗಿದ್ದು, ಉಡುಪಿ ಹಾಗೂ ಕಾರ್ಕಳದ ಎ.ಪಿ.ಎಂ.ಸಿ. ಯಾರ್ಡ್ ಮತ್ತು ಕೋಟೇಶ್ವರದ ಕೆ.ಎಫ್.ಸಿ.ಎಸ್.ಸಿ. ಗೋದಾಮಿನಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.

ರೈತರು ಬೆಳೆದಿರುವ ಧಾನ್ಯಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಿಂದ ಬೆಳೆ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯನ್ವಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದ ರೈತರಿಂದ ಭತ್ತವನ್ನು ಖರೀದಿಸುವಂತೆ ಸೂಚಿಸಿದರು.

ಭತ್ತವನ್ನು ಸರಬರಾಜು ಮಾಡುವ ರೈತರ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ಡಿ.ಬಿ.ಟಿ. ನೇರ ನಗದು ವರ್ಗಾವಣೆ ಮಾಡಲು ಕ್ರಮ ವಹಿಸಬೇಕು. ಪ್ರತೀ ರೈತರಿಂದ ಪ್ರತೀ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿ. ಖರೀದಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕದ್ರೋಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ ಜೆ.ಸಿ., ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಜು ಎಂ.ಎಸ್., ಆಹಾರ ಇಲಾಖೆಯ ಉಪನಿರ್ದೇಶಕಿ ರಶ್ಮಿ ಉಪಸ್ಥಿತರಿದ್ದರು.

ಭತ್ತವನ್ನು ಗೋದಾಮುಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ ಭತ್ತ ಖರೀದಿ ನೋಂದಣಿ ಬಗ್ಗೆ ಪ್ರಚಾರ ನೀಡಲು ಸಲಹೆ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಮಾಹಿತಿ ನೀಡಲು ಸೂಚನೆ

ADVERTISEMENT

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಯ ನೋಂದಣಿ ಕಾರ್ಯ ಈಗಾಗಲೇ ಆರಂಭವಾಗಿದ್ದು ರೈತರು ಅಕ್ಟೋಬರ್ 31ರ ವರೆಗೆ ನೋಂದಣಿ ಮಾಡಿಕೊಳ್ಳಬಹುದು

-ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.