ADVERTISEMENT

‘ಪರ್ಯಾಯವು ಸಾಮೂಹಿಕ ಆರಾಧನೆ’

ಪುತ್ತಿಗೆ ಮಠದ ಉಭಯ ಶ್ರೀಪಾದರಿಗೆ ಪೌರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:35 IST
Last Updated 18 ಜನವರಿ 2026, 6:35 IST
ಪುತ್ತಿಗೆ ಮಠದ ಉಭಯ ಶ್ರೀಪಾದರಿಗೆ ಪೌರ ಸನ್ಮಾನ ನಡೆಯಿತು
ಪುತ್ತಿಗೆ ಮಠದ ಉಭಯ ಶ್ರೀಪಾದರಿಗೆ ಪೌರ ಸನ್ಮಾನ ನಡೆಯಿತು   

ಉಡುಪಿ: ಉಡುಪಿಯ ಕೃಷ್ಣ ಮಠದ ಪರ್ಯಾಯ ಪದ್ಧತಿಯು ಅದ್ಭುತವಾಗಿದೆ. ಇದು ಇಡೀ ನಾಡಿನ ಪರ್ಯಾಯವಾಗಿದೆ. ಸ್ವಾಮೀಜಿಗಳು ನಿಮಿತ್ತ ಮಾತ್ರ, ಇದು ಕೃಷ್ಣನ ಸಾಮೂಹಿಕ ಆರಾಧನೆಯಾಗಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಚತುರ್ಥ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ನಿಟ್ಟಿನಲ್ಲಿ ಶೀರೂರು ಪರ್ಯಾಯ ಸಮಿತಿ ನೇತೃತ್ವದಲ್ಲಿ ರಥಬೀದಿಯ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾನು 14ನೇ ವಯಸ್ಸಿನಲ್ಲಿಯೇ ಕೃಷ್ಣನ ಪೂಜೆ ಮಾಡಿದ್ದೇನೆ. ನಾಲ್ಕನೇ ಪರ್ಯಾಯವನ್ನು ಶಿಷ್ಯ ಸುಶ್ರೀಂದ್ರ ತೀರ್ಥರ ಜೊತೆಗೆ ನಡೆಸಿದ್ದೇನೆ. ಇಬ್ಬರು ಸಂಕಲ್ಪ ಮಾಡಿರುವುದು 800 ವರ್ಷಗಳಲ್ಲಿಯೇ ಮೊದಲು. ಆದ್ದರಿಂದ ಇದು ಪುತ್ತಿಗೆ ಶ್ರೀಪಾದದ್ವಯರ ಪರ್ಯಾಯವಾಗಿದೆ ಎಂದರು.

ADVERTISEMENT

ಪರ್ಯಾಯದ ವೇಳೆ ನಾವು ಸಂಕಲ್ಪ ಮಾಡಿದ್ದ ಯೋಜನೆಗಳೆಲ್ಲವೂ ಕಾರ್ಯರೂಪಕ್ಕೆ ಬಂದಿರುವುದು ಖುಷಿ ತಂದಿದೆ ಎಂದು ಹೇಳಿದರು.

ಜಗತ್ತಿನಾದ್ಯಂತ ನಾವು ಚರ್ಚ್‌ಗಳನ್ನು ಖರೀದಿಸಿ ಕೃಷ್ಣ ಮಂದಿರ ಮಾಡಿದ್ದೇವೆ. ಜನರ ನಂಬಿಕೆಯೇ ನಮ್ಮ ಆಸ್ತಿ. ಸ್ಥಳೀಯರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಜನರ ಪ್ರತಿಸ್ಪಂದನೆ ಒದಗಿ ಬಂದಿರುವುದರಿಂದ ನಮ್ಮ ಪರ್ಯಾಯ ಚೆನ್ನಾಗಿ ನಡೆದಿದೆ. ಕೃಷ್ಣನ ಪೂಜೆ ಎನ್ನುವುದು ನಿತ್ಯೋತ್ಸವ ಪ್ರತಿ ಎರಡು ವರ್ಷಗಳಿಗೊಮ್ಮೆ ಸ್ವಾಮೀಜಿಗಳು ಮಾತ್ರ ಬದಲಾಗುತ್ತಾರೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್‌ಪಾಲ್‌ ಸುವರ್ಣ, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ಉಪಸ್ಥಿತರಿದ್ದರು. ಸುಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಉಭಯ ಶ್ರೀಪಾದರಿಗೆ ಪೌರಸನ್ಮಾನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.