ADVERTISEMENT

ಉಡುಪಿ: ಮಳೆ ಅವಾಂತರ: ಮನೆಗಳಿಗೆ ಹಾನಿ, ಭತ್ತದ ಕೃಷಿ ನಾಶ

ವಿದ್ಯುತ್ ಕಂಬಗಳು ಧರೆಗೆ:

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 12:39 IST
Last Updated 6 ಜುಲೈ 2022, 12:39 IST
ಉಡುಪಿಯ ಮೂಡನಿಡಂಬೂರಿನಲ್ಲಿ ನೆರೆಯ ನೀರಿನಲ್ಲಿ ಮೀನು ಹಿಡಿಯುತ್ತಿರುವುದು.
ಉಡುಪಿಯ ಮೂಡನಿಡಂಬೂರಿನಲ್ಲಿ ನೆರೆಯ ನೀರಿನಲ್ಲಿ ಮೀನು ಹಿಡಿಯುತ್ತಿರುವುದು.   

ಉಡುಪಿ: ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ಮರಗಳು ಮನೆಗಳ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಗದ್ದೆಗಳಿಗೆ ನೀರು ನುಗ್ಗಿ ಭತ್ತದ ಕೃಷಿ ನಾಶವಾಗಿದೆ.

ಉಡುಪಿ ತಾಲ್ಲೂಕಿನ ಪೆರ್ಣಂಕಿಲ, ಪುತ್ತೂರು (2) ಮೂಡನಿಡಂಬೂರು, ಬಡಾನಿಡಿಯೂರಿನಲ್ಲಿ ಮನೆಗಳು ಭಾಗಶಃ ಕುಸಿದಿವೆ. ಬ್ರಹ್ಮಾವರ ತಾಲ್ಲೂಕಿನ ಮೂಡಹಡು, ಹೊಸೂರು, ಗಿಳಿಯಾರು, ಮಣೂರು, ಕಾವಡಿ, ಗುಂಡ್ಮಿ,
ಚಿತ್ರಪಾಡಿಯಲ್ಲಿ ಮನೆಗಳಿಗೆ ಹಾನಿಯಾಗಿದೆ.

ಕಾಪು ತಾಲ್ಲೂಕಿನ ಕೋಟೆ, ಕಳತ್ತೂರು ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ, ಹೊಸಂಗಡಿ, ಬಸ್ರೂರು, ಯಡ್ಯಾಡಿ ಮತ್ಯಾಡಿ,ಕುಳಂಜೆ, ಅಂಪಾರು (2), ಕೊರ್ಗಿ, ಸಿದ್ದಾಪುರ, ಹೆಮ್ಮಾಡಿ, ಗಂಗೊಳ್ಳಿ, ತೆಕ್ಕಟೆಯಲ್ಲಿ ಮನೆ ಹಾಗೂ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿ ದೇವಸ್ಥಾನದ ಬಳಿ ಬೃಹತ್ ಮರ ಉರುಳಿ ಬಿದ್ದಿದೆ.

ADVERTISEMENT

ಬೈಂದೂರು ತಾಲ್ಲೂಕಿನ ಶಿರೂರು ಹಾಗೂ ನಾವುಂದದಲ್ಲಿ ಮನೆಗಳು ಕುಸಿದಿವೆ. ಜಿಲ್ಲೆಯಾದ್ಯಂತ ₹ 11.05 ಲಕ್ಷ ಹಾನಿಯಾಗಿದೆ. ಹೆಬ್ರಿ ತಾಲ್ಲೂಕಿನ ಅಂಡಾರಿನಲ್ಲಿ ಭತ್ತದ ಕೃಷಿ ನಾಶವಾಗಿದ್ದು ₹ 35,000 ನಷ್ಟ ಅಂದಾಜಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಉಡುಪಿ ತಾಲ್ಲೂಕಿನಲ್ಲಿ 79.4 ಮಿ.ಮೀ, ಬ್ರಹ್ಮಾವರ 96.3, ಕಾಪು 64.1, ಕುಂದಾಪುರ 96.6, ಬೈಂದೂರು 109.2, ಕಾರ್ಕಳ 72.6, ಹೆಬ್ರಿ - 144.2 ಮಿ.ಮೀ. ಮಳೆಯಾಗಿದ್ದು ಜಿಲ್ಲೆಯಲ್ಲಿ ಸರಾಸರಿ 115.3 ಮಿ.ಮೀ ಮಳೆ ಬಿದ್ದಿದೆ.

ಹವಾಮಾನ ಇಲಾಖೆ ಮುನ್ಸೂಚನೆ:

ಜುಲೈ 9ರವರೆಗೆ ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿಯಲಿದ್ದು 7ರಂದು 20.4 ಸೆಂ.ಮೀವರೆಗೂ ಮಳೆಯಾಗುವ ಸಾದ್ಯತೆಗಳಿವೆ. ಸಮುದ್ರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ದೈತ್ಯ ಅಲೆಗಳು ಏಳಲಿದ್ದು ಮೀನುಗಾರರ ಸಮುದ್ರಕ್ಕಿಳಿಯಬಾರದು ಎಂದು ಹವಾಮಾನ ಇಲಾಕೆ ಎಚ್ಚರಿಕೆ ನೀಡಿದೆ.

ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಾದ್ಯಂತ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಬುಧವಾರ ಸುರಿದ ಮಳೆಗೆ ಉಡುಪಿ ವಿಭಾಗದಲ್ಲಿ 25, ಕುಂದಾಪುರ ವಿಭಾಗದಲ್ಲಿ 15 ಹಾಗೂ ಕಾರ್ಕಳ ವಿಭಾಗದಲ್ಲಿ 5 ವಿದ್ಯುತ್ ಕಂಬಗಳು ಬಿದ್ದಿವೆ.

ಜುಲೈ 1ರಿಂದ ಇಲ್ಲಿಯವರೆಗೂ ಉಡುಪಿ ವಿಭಾಗದಲ್ಲಿ 104,ಕುಂದಾಪುರ ವಿಭಾಗದಲ್ಲಿ 70, ಕಾರ್ಕಳ ವಿಭಾಗದಲ್ಲಿ 60 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 19 ಟ್ರಾನ್ಸ್‌ಫರಂಗಳು ಸುಟ್ಟುಹೋಗಿವೆ. 6.4 ಕಿ.ಮೀ ವಿದ್ಯುತ್ ಪೂರೈಕೆ ಲೈನ್‌ ಹಾಳಾಗಿದ್ದು, ₹ 59.41 ಲಕ್ಷ ಹಾನಿ ಅಂದಾಜಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.