ADVERTISEMENT

ಉಡುಪಿ | ಹದಗೆಟ್ಟ ರಸ್ತೆ: ಸಿಗದ ದುರಸ್ತಿ ಭಾಗ್ಯ

ನಗರದ ರಸ್ತೆಗಳು ಹೊಂಡಮಯ: ಜನರಿಗೆ ನಿತ್ಯ ಸಂಚಾರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 4:41 IST
Last Updated 6 ಜುಲೈ 2025, 4:41 IST
<div class="paragraphs"><p>ಉಡುಪಿಯ ಮೆಸ್ಕಾಂ ಕಚೇರಿ ಬಳಿಯ ರಸ್ತೆ ಹೊಂಡಮಯವಾಗಿರುವುದು</p></div>

ಉಡುಪಿಯ ಮೆಸ್ಕಾಂ ಕಚೇರಿ ಬಳಿಯ ರಸ್ತೆ ಹೊಂಡಮಯವಾಗಿರುವುದು

   

ಉಡುಪಿ: ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿದ್ದರೂ ನಗರದ ರಸ್ತೆಗಳ ದುರವಸ್ಥೆಯಿಂದಾಗಿ ಜನರಿಗೆ ನಿತ್ಯ ಗೋಳು ತಪ್ಪಿಲ್ಲ. ನಗರದ ಕೆಲವು ರಸ್ತೆಗಳು ತೀರಾ ಹದಗೆಟ್ಟಿದ್ದು, ಸಂಚಾರವೇ ದುಸ್ತರವಾಗಿದೆ.

ಒಂದೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ದಡ ಮುಟ್ಟದೆ ಜನರಿಗೆ ನಿತ್ಯ ತೊಂದರೆಯಾದರೆ. ನಗರದ ವಿವಿಧ ಮುಖ್ಯ ರಸ್ತೆಗಳು ಕೂಡ ಹೊಂಡಮಯವಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಕಿನ್ನಿಮುಲ್ಕಿಯಿಂದ ಕಿದಿಯೂರು ಕಡೆಗೆ ಸಾಗುವ ರಸ್ತೆ, ಕೊಡವೂರು ರಸ್ತೆ, ಅಂಬಲಪಾಡಿಯಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಹದಗೆಟ್ಟಿವೆ.

ADVERTISEMENT

ಕೆಲವು ರಸ್ತೆಗಳಲ್ಲಿ ಅಲ್ಲಲ್ಲಿ ಕಾಂಕ್ರಿಟ್‌ ಎದ್ದು ಹೋಗಿ ಹೊಂಡ ನಿರ್ಮಾಣವಾದರೆ, ಡಾಂಬರ್‌ ರಸ್ತೆಗಳಲ್ಲಿ ಡಾಂಬರ್‌ ಕಿತ್ತುಹೋಗಿ ಹೊಂಡ ತಪ್ಪಿಸಿಕೊಂಡು ವಾಹನ ಚಲಾಯಿಸುವುದೇ ಚಾಲಕರಿಗೆ ಸವಾಲಾಗಿದೆ. ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಸರ್ವಿಸ್‌ ರಸ್ತೆಯಲ್ಲೇ ಸಂಚರಿಸುತ್ತಿವೆ.

ಈ ರಸ್ತೆ ಹದಗೆಟ್ಟಿರುವುದರಿಂದ ಹಾಗೂ ಇಲ್ಲಿ ಆಗಾಗ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ಕಿದಿಯೂರು, ಅಂಬಲಪಾಡಿ ಭಾಗಕ್ಕೆ ತೆರಳುವವರು ಕಿನ್ನಿಮುಲ್ಕಿಯಿಂದ ನೇರ ಕಿದಿಯೂರು ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನೇ ಆಶ್ರಯಿಸುತ್ತಿದ್ದಾರೆ.

ಈ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು, ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಈ ರಸ್ತೆಯಲ್ಲಿ ಬರುವ ಕಿರು ಸೇತುವೆಯೊಂದರ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳು ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಡವೂರಿಗೆ ಹೋಗುವ ರಸ್ತೆಯು ಹಲವು ತಿಂಗಳುಗಳಿಂದ ಹದಗೆಟ್ಟಿದ್ದು, ಈ ಭಾಗದ ಜನರಿಗೆ ಉಡುಪಿಗೆ ಬರಲು ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿರುವುದರಿಂದ ದ್ವಿಚಕ್ರ ವಾಹನ ಸವಾರರ ಕಷ್ಟ ಹೇಳತೀರದಾಗಿದೆ.

ನಗರದ ಮಿಷನ್‌ ಆಸ್ಪತ್ರೆಯಿಂದ ಅಲೆವೂರು, ಬೈಲೂರು ಸಂಪರ್ಕಿಸುವ ರಸ್ತೆಯ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಸಮಸ್ಯೆಯಾಗುತ್ತಿದೆ. ಈ ರಸ್ತೆಯ ಸಮೀಪವೇ ಚಂದು ಮೈದಾನವಿದ್ದು, ದಿನನಿತ್ಯ ಪೊಲೀಸ್‌ ವಾಹನಗಳು ಕೂಡ ಸಂಚರಿಸುತ್ತಿವೆ. ನಗರದ ರಸ್ತೆಗಳು ಹದಗೆಟ್ಟಿರುವ ಕಾರಣದಿಂದಲೂ ಹಲವು ಅಪಘಾತಗಳು ಕೂಡ ಸಂಭವಿಸಿವೆ.

ನಗರದ ವಿವಿಧ ಮುಖ್ಯ ರಸ್ತೆಗಳು ತೀರಾ ಹದಗೆಟ್ಟಿರುವುದರಿಂದ ದ್ವಿಚಕ್ರ ವಾಹನದಲ್ಲಿ ಸಂಚರಿಸಲು ಭಯವಾಗುತ್ತಿದೆ. ಸಂಬಂಧಪಟ್ಟವರು ತಾತ್ಕಾಲಿಕವಾಗಿಯಾದರೂ ರಸ್ತೆಗಳ ಗುಂಡಿ ಮುಚ್ಚಬೇಕು.
ಪ್ರಶಾಂತ್‌ ಕುಕ್ಕಿಕಟ್ಟೆ, ನಿವಾಸಿ

ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಕೆಲವು ರಸ್ತೆಗಳಲ್ಲಿ ಅಲ್ಲಲ್ಲಿ ಕಾಂಕ್ರಿಟ್‌ ಕಿತ್ತು ಹೋಗಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ನಗರದ ಮೆಸ್ಕಾಂ ಕಚೇರಿಯಿಂದ ಮಿತ್ರಾ ಆಸ್ಪತ್ರೆಗೆ ಕಡೆಗೆ ತೆರಳುವ ರಸ್ತೆಯಲ್ಲಿ ಅಲ್ಲಲ್ಲಿ ಬೃಹದಕಾರದ ಗುಂಡಿಗಳು ನಿರ್ಮಾಣವಾಗಿ ತೀರಾ ಹದಗೆಟ್ಟಿದೆ. ಇದರಿಂದ ಆಸ್ಪತ್ರಗೆ ವಾಹನಗಳಲ್ಲಿ ಬರುವವರಿಗೂ ತೊಂದರೆಯಾಗುತ್ತಿದೆ.

ನಗರದ ವಿವಿಧ ರಸ್ತೆಗಳು ಹಲವು ತಿಂಗಳುಗಳಿಂದ ಹದಗೆಟ್ಟಿದ್ದರೂ ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಿಲ್ಲ. ಈಗ ಮಳೆಗಾಲದ ನೆಪವೊಡ್ಡುತ್ತಿದ್ದಾರೆ. ಗುಂಡಿ ಮುಚ್ಚುವ ಕೆಲಸಕ್ಕೂ ಕೈಹಾಕುತ್ತಿಲ್ಲ ಎಂದು ಜನರು ದೂರಿದ್ದಾರೆ.

‘ಮಳೆಯಿಂದ ದುರಸ್ತಿ ಕಾರ್ಯಕ್ಕೆ ಹಿನ್ನಡೆ’

ಈ ಬಾರಿ ಮಳೆ 15 ದಿವಸ ಮೊದಲೇ ಬಂದಿರುವುದರಿಂದ ನಗರದ ರಸ್ತೆಗಳ ದುರಸ್ತಿ ಕಾರ್ಯ ಬಾಕಿ ಉಳಿದಿದೆ. ಈಗ ಜೋರಾಗಿ ಮಳೆ ಬರುತ್ತಿರುವುದರಿಂದ ರಸ್ತೆಗಳ ದುರಸ್ತಿ ಕಾರ್ಯ ನಡೆಸಲು ಸಾಧ್ಯವಿಲ್ಲ. ರಸ್ತೆಯ ಹೊಂಡಗಳಿಗೆ ವೆಟ್‌ ಮಿಕ್ಸ್‌ ಹಾಕಿದರೆ ಕೆಲವೇ ದಿನಗಳಲ್ಲಿ ಅದು ಕಿತ್ತು ಹೋಗುತ್ತಿದೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಹೊಂಡ ನಿರ್ಮಾಣವಾಗಿರುವ ರಸ್ತೆಗಳಲ್ಲಿ ಸಿಮೆಂಟ್‌ ಬಳಸಿ ಹೊಂಡ ಮುಚ್ಚಲು ಸೂಚಿಸಲಾಗುವುದು. ಬಿಸಿಲಿನ ವಾತಾವರಣ ಬಂದ ಬಳಿಕ ರಸ್ತೆ ದುರಸ್ತಿ ಮಾಡಲಾಗುವುದು ಎಂದು ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.

ಕಿನ್ನಿಮುಲ್ಕಿಯಿಂದ ಕಿದಿಯೂರು ಕಡೆಗೆ ಹೋಗುವ ರಸ್ತೆಯ ದುರವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.