ADVERTISEMENT

ಉಡುಪಿ: ಪ್ರವಾಸೋದ್ಯಮಕ್ಕೆ ಬೇಕು ನೆರವಿನ ಟಾನಿಕ್‌

ಕೋವಿಡ್‌ ಬಳಿಕ ಚೇತರಿಕೆ ಹಾದಿಯಲ್ಲಿ ಪ್ರವಾಸೋದ್ಯಮ: ವಿಷನ್ ಡಾಕ್ಯುಮೆಂಟ್ ಶೀಘ್ರ ಸರ್ಕಾರಕ್ಕೆ ಸಲ್ಲಿಕೆ

ಬಾಲಚಂದ್ರ ಎಚ್.
Published 26 ಸೆಪ್ಟೆಂಬರ್ 2021, 19:30 IST
Last Updated 26 ಸೆಪ್ಟೆಂಬರ್ 2021, 19:30 IST
ಉಡುಪಿಯ ಕೃಷ್ಣಮಠದ ಪರಿಸರ
ಉಡುಪಿಯ ಕೃಷ್ಣಮಠದ ಪರಿಸರ   

ಉಡುಪಿ: ಸುಂದರ ಕಡಲ ತೀರಗಳು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಕೋಟೆ–ಕೊತ್ತಲಗಳು, ಜೈನ ಬಸದಿಗಳು, ಪಶ್ಚಿಮಘಟ್ಟದ ಪ್ರಾಕೃತಿಕ ಸೌಂದರ್ಯ, ತುಳುನಾಡಿನ ಕಲೆ, ಸಂಸ್ಕೃತಿ, ಸೊಗಡು, ಸಿರಿ, ನದಿ, ತೊರೆ, ಝರಿ, ಜೀವ ವೈವಿಧ್ಯ ಹೀಗೆ, ರಮಣೀಯತೆಯನ್ನೇ ಮೈದುಂಬಿಕೊಂಡು ನಿಂತಿದೆ ಉಡುಪಿ ಜಿಲ್ಲೆ. ಆದರೆ, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಿಗಬೇಕಾದ ಮನ್ನಣೆ ಸಿಗದ ಪರಿಣಾಮ ಎಲ್ಲವೂ ಇದ್ದು, ಏನೂ ಇಲ್ಲದಂತಿದೆ ಉಡುಪಿ ಜಿಲ್ಲೆ.

ಬೇರೆಲ್ಲೂ ಕಾಣಸಿಗದಂತಹ ಮಾನವ ನಿರ್ಮಿತವಲ್ಲದ ಪ್ರಾಕೃತಿಕ ರಚಿತ ಸಂಪತ್ತನ್ನು ಉಡುಪಿಯಲ್ಲಿ ಕಾಣಬಹುದು. ಇಕೊ ಟೂರಿಸಂ, ಟೆಂಪಲ್ ಟೂರಿಸಂ, ಹೀಗೆ ಹಲವು ಆಯಾಮಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಸಾಕಷ್ಟು ಅವಕಾಶಗಳು ಉಡುಪಿಯಲ್ಲಿವೆ. ಆದರೂ, ನಿರೀಕ್ಷಿತ ಮಟ್ಟದಲ್ಲಿ ವಿದೇಶಿ ಹಾಗೂ ಹೊರ ರಾಜ್ಯಗಳ ಪ್ರವಾಸಿಗರನ್ನು ಸೆಳೆಯಲು ಉಡುಪಿ ಸಫಲವಾಗಿಲ್ಲ ಎಂಬ ಕೊರಗು ಕಾಡುತ್ತಿದೆ.

ನೆರೆಯ ಕೇರಳಕ್ಕೂ ಕರಾವಳಿಯ ಉಡುಪಿಗೂ ಹೆಚ್ಚು ವ್ಯತ್ಯಾಸಗಳು ಕಾಣುವುದಿಲ್ಲ. ಅಲ್ಲಿನ ಸಮುದ್ರ ಹಾಗೂ ನದಿ ಸೇರುವ ಪ್ರದೇಶಗಳಲ್ಲಿ ನೂರಾರು ಬೋಟ್‌ ಹೌಸ್‌ಗಳು ತೇಲುತ್ತಿದ್ದು, ಸಾವಿರಾರು ವಿದೇಶಿ ಹಾಗೂ ಹೊರ ರಾಜ್ಯಗಳ ಪ್ರವಾಸಿಗರನ್ನು ಸೆಳೆಯುತ್ತಿವೆ. ದುರದೃಷ್ಟವಶಾತ್ ಕೇರಳಕ್ಕಿಂತಲೂ ರಮಣೀಯ ಅಳಿವೆ ಪ್ರದೇಶಗಳು ಉಡುಪಿಯಲ್ಲಿದ್ದರೂ ನಿರೀಕ್ಷಿತ ಮಟ್ಟದ ಪ್ರವಾಸಿಗರನ್ನು ಸೆಳೆಯಲಾಗುತ್ತಿಲ್ಲ.

ADVERTISEMENT

ರಾಜ್ಯದ ಪ್ರವಾಸಿಗರೇ ಉಡುಪಿಯನ್ನು ಬದಿಗಿಟ್ಟು ಬೋಟ್‌ಹೌಸ್‌ ಸೌಂದರ್ಯ ಸವಿಯಲು ಕೇರಳದತ್ತ ಮುಖಮಾಡುತ್ತಿರುವುದು ವಿಪರ್ಯಾಸ ಎನ್ನುತ್ತಾರೆ ಸ್ಥಳೀಯರು. ಕರಾವಳಿಯ ಪ್ರವಾಸಕ್ಕೆ ಬರುವವರಿಗೆ ಉಡುಪಿ ಫುಲ್ ಪ್ಯಾಕೇಜ್‌ ಇದ್ದಂತೆ. ಧಾರ್ಮಿಕ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಲು ಬರುವವರು ಇಲ್ಲಿನ ಕೃಷ್ಣಮಠ, ಅಷ್ಟಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಲವು ದೇವಸ್ಥಾನಗಳನ್ನು ವೀಕ್ಷಿಸಬಹುದು.

ಕಡಲ ಸೌಂದರ್ಯ ಸವಿಯಲು ಬರುವವರಿಗೆ ಮಲ್ಪೆ, ಪಡುಕೆರೆ, ಪಡುಬಿದ್ರಿ, ಕಾಪು, ಮರವಂತೆ, ತ್ರಾಸಿ ಸೇರಿದಂತೆ ಹತ್ತು ಹಲವು ಬೀಚ್‌ಗಳು ಕೈಬೀಸಿ ಕರೆಯುತ್ತವೆ. ಪ್ರಕೃತಿ ಪ್ರಿಯರು ಪಶ್ಚಿಮಘಟ್ಟಗಳ ಸೌಂದರ್ಯವನ್ನು ಆಸ್ವಾದಿಸಬಹುದು, ನದಿ ತೊರೆಗಳಲ್ಲಿ ಮಿಂದೇಳಬಹುದು. ಟ್ರಕ್ಕಿಂಗ್‌ ಕೂಡ ಮಾಡಬಹುದು.

ಭೂತ ಕೋಲ, ದೈವಾರಾಧನೆ, ನಾಗಾರಾಧನೆ, ದೈವಗಳ ಸ್ಥಾನ, ಕಂಬಳ, ಯಕ್ಷಗಾನದ ವೈಭವವನ್ನು ಕಣ್ತುಂಬಿಕೊಂಡು ಕರಾವಳಿಯ ಕಲೆ, ಸಂಸ್ಕೃತಿಯನ್ನು ಆಸ್ವಾದಿಸಬಹುದು. ಕರಾವಳಿಯ ಪ್ರಸಿದ್ಧ ಖಾದ್ಯ, ತರಹೇವಾರಿ ಸೀಫುಡ್‌ಗಳನ್ನು ಸವಿಯಬಹುದು. ಒಂದೇ ಸೂರಿನಡಿ ಪ್ರವಾಸಿಗರಿಗೆ ಎಲ್ಲವೂ ಸಿಗುವುದು ಉಡುಪಿಯಲ್ಲಿ ಮಾತ್ರ. ಆದರೂ, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸರ್ಕಾರದಿಂದ ಸಿಗಬೇಕಾದ ಮಾನ್ಯತೆ ದೊರೆತಿಲ್ಲ ಎನ್ನುತ್ತಾರೆ ಸ್ಥಳೀಯರು.

ವಿಷನ್ ಡಾಕ್ಯುಮೆಂಟ್ ಬಹುತೇಕ ಪೂರ್ಣ:

ಉಡುಪಿ ಜಿಲ್ಲೆಯ ಪ್ರವಾಸೋದ್ಯಮವನ್ನು ಮುಂದಿನ 10 ವರ್ಷಗಳಲ್ಲಿ ಹೇಗೆ ಅಭಿವೃದ್ಧಿಪಡಿಸಬಹುದು ಎಂಬ ವಿಷನ್ ಡಾಕ್ಯುಮೆಂಟ್ ಸಿದ್ಧವಾಗುತ್ತಿದ್ದು, ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ವಿಷನ್ ಡಾಕ್ಯುಮೆಂಟ್ ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ಎನ್ನುತ್ತಾರೆಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ) ಕ್ಲಿಫರ್ಡ್ ಲೋಬೊ.

ಜಿಲ್ಲೆಯಲ್ಲಿರುವ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿ, ಅಲ್ಲಿಗೆ ಯಾವ ಸೌಲಭ್ಯಗಳು ಅಗತ್ಯವಿದೆ ಎಂಬುದನ್ನು ಪಟ್ಟಿಮಾಡಲಾಗಿದೆ. ಶೀಘ್ರವೇ ಸರ್ಕಾರಕ್ಕೆ ವಿಷನ್ ಡಾಕ್ಯುಮೆಂಟ್ ಸಲ್ಲಿಕೆಯಾಗಲಿದ್ದು, ಅನುಮೋದನೆ ಸಿಕ್ಕರೆ ಳಿಕ ಹೆಚ್ಚಿನ ಅನುದಾನ ಸಿಗಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲಾಗುವುದು ಎಂದರು.

ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಇದುವರೆಗೂ ಬೆಳಕಿಗೆ ಬಾರದಂತಹ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲು ವಿಭಿನ್ನ ಸ್ಪರ್ಧೆ ಆಯೋಜಿಸಲಾಗಿದೆ. ಅಜ್ಞಾತ ಹಾಗೂ ಪ್ರಚಂಚಕ್ಕೆ ತೆರೆದುಕೊಳ್ಳದ ಸ್ಥಳಗಳ ಕುರಿತು ವಿಡಿಯೋ ಮಾಡಿ ಕಳುಹಿಸುವಂತೆ ತಿಳಿಸಲಾಗಿದ್ದು, ಈಗಾಗಲೇ ಸಾಕಷ್ಟು ವಿಡಿಯೋಗಳು ಬಂದಿವೆ ಎಂದರು ಕ್ಲಿಫರ್ಡ್‌ ಲೊಬೊ.

ಉಡುಪಿ ಜಿಲ್ಲೆಗೆ ದೇಶ ಹಾಗೂ ವಿಶ್ವದ ಪ್ರಸಿದ್ಧ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆಗಳು ಇವೆ. ಸಮುದ್ರ, ನದಿಗಳು, ಹಿನ್ನೀರು, ಧಾರ್ಮಿಕ ಕ್ಷೇತ್ರಗಳು, ಟ್ರಕ್ಕಿಂಗ್ ಹೇಳಿಮಾಡಿಸಿದ ಜಾಗವಾಗಿದೆ. ಆರೋಗ್ಯ, ಕೃಷಿ ಹಾಗೂ ಗ್ರಾಮೀಣ ಟೂರಿಸಂಗೆ ವಿಫುಲ ಅವಕಾಶಗಳಿದ್ದು, ಇವನ್ನೆಲ್ಲ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಬಳಸುವ ಚಿಂತನೆ ಇದೆ ಎಂದರು.

ಪ್ರವಾಸೋದ್ಯಮವೇ ಆರ್ಥಿಕತೆಯ ಬೆನ್ನೆಲುಬು

ಪ್ರವಾಸೋದ್ಯಮ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು. ಪ್ರವಾಸಿಗರನ್ನೇ ನೆಚ್ಚಿಕೊಂಡು 500ಕ್ಕೂ ಹೆಚ್ಚು ಹೋಟೆಲ್‌ಗಳು, ವಸತಿ ಗೃಹಗಳು, ರೆಸ್ಟೊರೆಂಟ್‌ಗಳು, ರೆಸಾರ್ಟ್‌ಗಳು ಜಿಲ್ಲೆಯಲ್ಲಿವೆ. ನೂರಾರು ಕೋಟಿ ವಹಿವಾಟು ನಡೆಯುತ್ತಿದೆ. ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದೆ. ಮತ್ಸ್ಯೋದ್ಯಮ ಪ್ರವಾಸೋದ್ಯಮಕ್ಕೆ ಪೂರಕವಾಗಿ ನಡೆಯುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಜಿಲ್ಲೆಯ ಆರ್ಥಿಕತೆಗೆ ಸದೃಢಗೊಳ್ಳುತ್ತದೆ ಎನ್ನುತ್ತಾರೆ ಉದ್ಯಮಿ ರಾಜಗೋಪಾಲ್‌.

‘ಹೋಂಸ್ಟೇಗಳಿಗೆ ಹೆಚ್ಚು ಅನುಮತಿ’

ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾದರೆ ಪ್ರವಾಸಿಗರಿಗೆ ಗುಣಮಟ್ಟದ ಸೌಲಭ್ಯಗಳು ಸಿಗಬೇಕು. ಪ್ರವಾಸ ಮಾಡುವ ಸ್ಥಳಗಳಲ್ಲೇ ವಾಸ್ತವ್ಯಕ್ಕೆ ಹೆಚ್ಚಿನ ಆಯ್ಕೆಗಳಿರಬೇಕು. ಈ ನಿಟ್ಟಿನಲ್ಲಿ ಹೆಚ್ಚು ಹೋಂಸ್ಟೇಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಹೋಂ ಸ್ಟೇ ತೆರೆಯಲು ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ರೆಸಾರ್ಟ್‌, ಲಾಡ್ಜ್‌, ಹೋಟೆಲ್‌ಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೊಬೊ ತಿಳಿಸಿದರು.

ಉಡುಪಿ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳು

ಮಲ್ಪೆ ಬೀಚ್‌, ಸೀವಾಕ್‌, ಸೇಂಟ್ ಮೇರಿಸ್ ಐಲ್ಯಾಂಡ್‌

ನಾಣ್ಯ ಮ್ಯೂಸಿಯಂ, ಅರ್ಬಿ ಫಾಲ್ಸ್‌

ಕೃಷ್ಣಮಠ, ಅಷ್ಟಮಠ, ಚಂದ್ರಮೌಳೇಶ್ವರ, ಅನಂತೇಶ್ವರ ದೇವಸ್ಥಾನ

ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನ

ಅಂಗರಚನಾ ಶಾಸ್ತ್ರ ಮ್ಯೂಸಿಯಂ ಮಣಿಪಾಲ

–ಮಣ್ಣಪ್ಪಳ್ಳ ಕೆರೆ ಮಣಿಪಾಲ

–ಎಂಡ್ ಪಾಯಿಂಟ್‌ ಸೂರ್ಯಾಸ್ತ, ಟ್ರೀ ಪಾರ್ಕ್ ಮಣಿಪಾಲ

–ಬೋಟ್ ಹೌಸ್ ಕೋಡಿಬೇಂಗ್ರೆ, ಪಡುಕೆರೆ ಬೀಚ್‌

ಕೆಮ್ತೂರು, ಕೆಮ್ಮಣ್ಣು ತೂಗು ಸೇತುವೆ

****

ಬ್ರಹ್ಮಾವರ ಪ್ರವಾಸಿ ಸ್ಥಳ

ಬಾರ್ಕೂರು ಕೋಟೆ, ಕತ್ತಲೆ ಬಸದಿ, ಡಿವೈನ್ ಪಾರ್ಕ್‌

ಸೂರಾಲು ಅರಮನೆ, ಕಲ್ಲು ಗಣಪತಿ ದೇವಸ್ಥಾನ ಪಡುಮುಂಡು ಶಿರಿಯಾರ

ಗುಡ್ಡೆಯಟ್ಟು ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ

ಮೇಕೆಕಟ್ಟು ನಂದಿಕೇಶ್ವರ ದೇವಸ್ಥಾನ, ಕೋಟ ಶಿವರಾಮ ಕಾರಂತ ಥೀಂ ಪಾರ್ಕ್

ಡೆಲ್ಟಾ ಪಾಯಿಂಟ್‌

****

ಕಾಪು ಪ್ರವಾಸಿ ಸ್ಥಳಗಳು

ಕಾಪು ಬೀಚ್‌, ಲೈಟ್ ಹೌಸ್‌, ಸ್ಕೂಬಾ ಡೈವಿಂಗ್

ಪಡುಬಿದ್ರಿ ಬೀಚ್‌ ಎಂಡ್‌ ಪಾಯಿಂಟ್‌

ಹಿರಿಯಡ್ಕ ವೀರಭದ್ರ ದೇವಸ್ಥಾನ, ಪಾಜಕ

ಮಾರಿಗುಡಿ ದೇವಸ್ಥಾನ ಕಾಪು

****

ಕಾರ್ಕಳ ಪ್ರವಾಸಿ ಸ್ಥಳಗಳು

ಗೊಮ್ಮಟೇಶ್ವರ ಮೂರ್ತಿ, ಕೋಟಿ ಚೆನ್ನಯ್ಯ ಥೀಂ ಪಾರ್ಕ್

ಚತುರ್ಮುಖ ಬಸದಿ, ಅತ್ತೂರು ಸೇಂಟ್ ಲಾರೆನ್ಸ್ ಚರ್ಚ್‌

ಅನಂತಶಯನ ದೇವಸ್ಥಾನ, ನೇಮಿನಾಥ ಬಸದಿ, 14 ತೀರ್ಥಂಕರರ ಬಸದಿ

ಆನೆಕೆರೆ, ಇರ್ವತ್ತೂರು, ನಲ್ಲೂರು, ಹಿರಿಯಂಗಡಿ ಬಸದಿ

ದುರ್ಗಾ ಫಾಲ್ಸ್‌, ಅರ್ಬಿ ಫಾಲ್ಸ್‌

****

ಕುಂದಾಪುರ ಪ್ರವಾಸಿ ತಾಣಗಳು

ಕೋಡಿ ಬೀಚ್, ಹಟ್ಟಿಹಂಗಡಿ ವಿನಾಯಕ ದೇವಸ್ಥಾನ

ಪಂಚಗಂಗೊಳ್ಳಿ, ಉಪ್ಪಿನಕುದ್ರು ಐಲ್ಯಾಂಡ್

ಆನೆಗುಡ್ಡೆ ವಿನಾಯಕ ದೇವಸ್ಥಾನ

ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ

ಕೋಟ ಅಮೃತೇಶ್ವರಿ ದೇವಸ್ಥಾನ

ಕಮಲಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನ

ತ್ರಾಸಿ ಬೀಚ್

****

ಬೈಂದೂರು ಪ್ರವಾಸಿ ತಾಣಗಳು

ಮರವಂತೆ ಬೀಚ್‌, ಒತ್ತಿನೆಣೆ, ಪಡುವರಿ ಬೀಚ್‌

ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ

ಕೊಡಚಾದ್ರಿ, ಶಂಕರನಾರಾಯಣ ದೇವಸ್ಥಾನ

ಬೆಳ್ಳಿಗುಂಡಿ, ಅರಿಶಿನ ಗುಂಡಿ, ಗುಲ್ನಾ,ಡಿ ಕೊಸಳ್ಳಿ ಜಲಪಾತ

ಕಿರಿ ಮಂಜೇಶ್ವರ, ಶಿರೂರು ಬೀಚ್, ಆನೆಝರಿ

****

ಹೆಬ್ರಿ ಪ್ರವಾಸಿ ತಾಣಗಳು

ಕೂಡ್ಲು ತೀರ್ಥ, ಜೋಮ್ಲು ತೀರ್ಥ

ವರಂಗ ಕೆರೆ ಬಸದಿ

ಸೀತಾನದಿ ನೇಚರ್ ಕ್ಯಾಂಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.