
ಉಡುಪಿ: ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸುಗಮ ಸಂಚಾರಕ್ಕೆ ಸಿಗ್ನಲ್ ಲೈಟ್ ಅಳವಡಿಸಿದರೂ ಫ್ರೀ ಲೆಫ್ಟ್‌ಗಳಲ್ಲಿ ವಾಹನ ನಿಲ್ಲಿಸುವುದರಿಂದ ಸಂಚಾರ ಸಮಸ್ಯೆ ಬಿಗಡಾಯಿಸುತ್ತಿದೆ.
ಕಲ್ಸಂಕ ಜಂಕ್ಷನ್ ಮತ್ತು ಮಣಿಪಾಲದ ಸಿಂಡಿಕೇಟ್ ವೃತ್ತಗಳಲ್ಲಿ ಸಿಗ್ನಲ್ ದೀಪಗಳು ಕಾರ್ಯಾರಂಭಗೊಂಡು ತಿಂಗಳುಗಳು ಕಳೆದರೂ ಫೀಲೆಫ್ಟ್‌ಗಳಲ್ಲಿ ವಾಹನ ನಿಲ್ಲಿಸಿ ಹಿಂದಿನ ವಾಹನಗಳ ಸಂಚಾರಕ್ಕೆ ತಡೆಯೊಡ್ಡುವ ಪ್ರವೃತ್ತಿ ದಿನನಿತ್ಯ ಕಂಡು ಬರುತ್ತಿದೆ.
ಉಡುಪಿಯಿಂದ ಮಣಿಪಾಲದ ಕಡೆ ಹೋಗುವ ಬಸ್, ಕಾರು, ರಿಕ್ಷಾ ಸೇರಿದಂತೆ ವಿವಿಧ ವಾಹನಗಳನ್ನು ಕಲ್ಸಂಕ ಜಂಕ್ಷನ್‌ನಲ್ಲಿ ಸಿಗ್ನಲ್ ಬೀಳುವಾಗ ಫ್ರೀಲೆಫ್ಟ್‌ನಲ್ಲಿ ನಿಲ್ಲಿಸುವುದರಿಂದ ಗುಂಡಿಬೈಲ್‌ಗೆ ಹೋಗುವ ವಾಹನ ಸವಾರರಿಗೆ ಸಮಸ್ಯೆಯಾಗುತ್ತದೆ.
ಫ್ರೀಲೆಫ್ಟ್‌ನಲ್ಲಿ ವಾಹನಗಳನ್ನು ಅಡ್ಡ ನಿಲ್ಲಸುವುದರಿಂದ ಕೆಲವೊಮ್ಮೆ ಆಂಬುಲೆನ್ಸ್‌ಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ಮಣಿಪಾಲದಿಂದ ಉಡುಪಿಗೆ ಬರುವಾಗ ಕಲ್ಸಂಕದಲ್ಲಿ ಫ್ರೀಲೆಫ್ಟ್‌ನಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಕೃಷ್ಣಮಠದ ಕಡೆಗೆ ಹೋಗುವ ವಾಹನಗಳು ಕಾಯಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಬಸ್‌ಗಳು ಕೂಡ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಇತರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಫ್ರೀಲೆಫ್ಟ್ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಾರದಿದ್ದರೆ ಸಿಗ್ನಲ್ ದೀಪ ಅಳವಡಿಸಿಯೂ ಪ್ರಯೋಜನವಾಗದಂತಾಗಲಿದೆ ಎನ್ನುತ್ತಾರೆ ಸಾರ್ವಜನಿಕರು.
ಕಲ್ಸಂಕ ಜಂಕ್ಷನ್‌ನಲ್ಲಿ ಗುಂಡಿಬೈಲ್ ಕಡೆಗೆ ತೆರಳುವಲ್ಲಿ ಫ್ರೀಲೆಫ್ಟ್ ಎಂಬ ಫಲಕ ಅಳವಡಿಸಿದರೂ ವಾಹನ ಸವಾರರು ಕ್ಯಾರೇ ಅನ್ನುತ್ತಿಲ್ಲ. ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲೂ ಫ್ರೀಲೆಫ್ಟ್‌ನಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವವರಿಗೂ ಸಮಸ್ಯೆಯಾಗುತ್ತಿದೆ.
ನಗರದ ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕದ ವರೆಗಿನ ಪ್ರದೇಶದಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸದಂತೆ ಹಿಂದೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಈಗ ಅದನ್ನು ತೆರವುಗೊಳಿಸಿದರುವುದರಿಂದ ಕಾರು, ದ್ವಿಚಕ್ರ ವಾಹನಗಳನ್ನು ಫ್ರೀಲೆಫ್ಟ್ ಜಾಗದವರೆಗೂ ರಸ್ತೆ ಬದಿ ನಿಲುಗಡೆ ಮಾಡಲಾಗುತ್ತದೆ ಇದರಿಂದ ಫ್ರೀಲೆಫ್ಟ್‌ಗೂ ಸಮಸ್ಯೆಯಾಗುತ್ತಿದೆ.
ಬನ್ನಂಜೆಯಿಂದ ಕಲ್ಸಂಕದವರೆಗೂ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿರುವುದು ವಾಹನ ದಟ್ಟಣೆಗೆ ಮುಖ್ಯ ಕಾರಣವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಫ್ರೀಲೆಫ್ಟ್ ಬಗ್ಗೆ ವಾಹನ ಸವಾರರಲ್ಲಿ ಅರಿವು ಮೂಡುವವರೆಗೆ ಸಿಗ್ನಲ್ ದೀಪ ಅಳವಡಿಸಿರುವ ಜಂಕ್ಷನ್‌ಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಕೆಲವು ಸಿಟಿ ಬಸ್‌ನವರು ಬಸ್ ನಿಲ್ದಾಣಬಿಟ್ಟು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಇತರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಮತ್ತು ಅದು ಅಪಘಾತಗಳಿಗೂ ಆಹ್ವಾನ ನೀಡುತ್ತಿದೆ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಲ್ಸಂಕದಲ್ಲಿ ಗುಂಡಿಬೈಲು ಕಡೆ ತಿರುಗುವಲ್ಲಿ ಫ್ರೀಲೆಫ್ಟ್‌ಗಾಗಿ ನಗರಸಭೆ ಮೂಲಕ ₹49 ಲಕ್ಷ ವೆಚ್ಚದಲ್ಲಿ ತಿರುವು ಸೇತುವೆ ವಿಸ್ತರಣೆ ಕಾಮಗಾರಿಗೆ ಈಚೆಗೆ ಚಾಲನೆ ನೀಡಲಾಗಿತ್ತು. ಈ ಸೇತುವೆಯ ಕಾಮಗಾರಿ ಪೂರ್ಣಗೊಂಡ ಬಳಿಕ ಕಲ್ಸಂಕ ಜಂಕ್ಷನ್‌ನಿಂದ ಅಂಬಾಗಿಲು ಕಡೆ ಸಾಗುವ ವಾಹನಗಳಿಗೆ ಸುಗಮ ಸಂಚಾರ ಸಾಧ್ಯವಾಗಲಿದ್ದು ವಾಹನ ದಟ್ಟಣೆಗೂ ಪರಿಹಾರ ಸಿಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
‘ಉಡುಪಿ ನಗರದಲ್ಲಿ ಫ್ರೀಲೆಫ್ಟ್ ಬಗ್ಗೆ ವಾಹನ ಸವಾರರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ. ಸಿಗ್ನಲ್ ದೀಪ ಅಳವಡಿಸಿರುವ ಎಲ್ಲಾ ಜಂಕ್ಷನ್‌ಗಳಲ್ಲಿಯೂ ಫ್ರೀಲೆಫ್ಟ್ ವ್ಯವಸ್ಥೆ ಮಾಡಬೇಕು. ವಾಹನ ಸವಾರರು ಫ್ರೀಲೆಫ್ಟ್‌ಗಳಲ್ಲೂ ವಾಹನಗಳನ್ನು ಅಡ್ಡ ನಿಲ್ಲಿಸುವುದರಿಂದ ಕೆಲವೊಮ್ಮೆ ಆಂಬುಲೆನ್ಸ್‌ಗಳಿಗೂ ತೆರಳಲು ಸಮಸ್ಯೆಯಾಗುತ್ತಿದೆ. ಜೊತೆಗೆ ಫ್ರೀಲೆಫ್ಟ್ ಸಮೀಪ ರಸ್ತೆ ಬದಿ ವಾಹನಗಳನ್ನು ಪಾರ್ಕಿಂಗ್ ಮಾಡುವವರಿಗೂ ದಂಡ ವಿಧಿಸಬೇಕು. ಇಲ್ಲದಿದ್ದರೆ ಸಿಗ್ನಲ್ ದೀಪ ಅಳವಡಿಸಿಯೂ ಪ್ರಯೋಜನವಾಗದಂತಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.