ADVERTISEMENT

ಮಳೆಯಿಂದ ಬೆಳೆ ಹಾನಿ: ಹಬ್ಬದ ಬಳಿಕ ಏರಿದ ತರಕಾರಿ ದರ

ರೈತರಿಗೆ ಸಂಕಷ್ಟ, ಗ್ರಾಹಕರ ಜೇಬಿಗೂ ಹೊರೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:23 IST
Last Updated 7 ನವೆಂಬರ್ 2025, 7:23 IST
ಮಟ್ಟುಗುಳ್ಳ
ಮಟ್ಟುಗುಳ್ಳ   

ಉಡುಪಿ: ನವರಾತ್ರಿ, ದೀಪಾವಳಿ ಹಬ್ಬಗಳು ಮುಗಿದ ಬಳಿಕ ಇದೀಗ ತರಕಾರಿ ಬೆಲೆ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

ಕೆ.ಜಿ.ಗೆ ₹80ರ ಆಸುಪಾಸಿನಲ್ಲಿದ್ದ ತೊಂಡೆಕಾಯಿ ದರ ಈಗ ಕೆ.ಜಿಗೆ ₹120ಕ್ಕೆ ಏರಿಕೆಯಾಗಿದೆ. ಅದೇ ರೀತಿ ಕೆ.ಜಿ ₹60 ಇದ್ದ ಅಲಸಂಡೆ ದರ ₹100ಕ್ಕೆ ಏರಿಕೆಯಾಗಿದೆ.

ಉಡುಪಿಯಲ್ಲಿ ಹೆಚ್ಚು ಬೇಡಿಕೆ ಇರುವ ಮಟ್ಟುಗುಳ್ಳಾದ ದರ ಕೆ.ಜಿಗೆ ₹160ಕ್ಕೆ ಏರಿಕೆಯಾಗಿದೆ. ಬದನೆಕಾಯಿ ದರ ಕೆ.ಜಿಗೆ ₹100 ಇದೆ. ಕಳೆದ ವಾರ ಬದನೆಕಾಯಿ ದರ ಕೆ.ಜಿಗೆ ₹80ರ ಆಸುಪಾಸಿನಲ್ಲಿತ್ತು.

ADVERTISEMENT

ಸಾಮಾನ್ಯವಾಗಿ ಕೆ.ಜಿಗೆ ₹30ರ ಆಸುಪಾಸಿನಲ್ಲಿದ್ದ ಮಂಗಳೂರು ಸೌತೆಯ ದರ ₹50ಕ್ಕೆ ಏರಿಕೆಯಾಗಿದೆ. ಬೀನ್ಸ್ ₹80ಕ್ಕೆ ಏರಿಕೆಯಾಗಿದೆ.

ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಏರಿಕೆಯಾಗುವ ತರಕಾರಿ ದರ ಹಬ್ಬ ಮುಗಿದ ಬಳಿಕ ತುಸು ಇಳಿಕೆಯಾಗುತ್ತದೆ. ಆದರೆ, ಈ ಬಾರಿ ಹಬ್ಬಗಳು ಮುಗಿದ ಬಳಿಕ ತರಕಾರಿ ದರ ಒಮ್ಮೆಲೆ ಜಿಗಿದಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಇತರ ಬೆಳೆಗಳಂತೆ ತರಕಾರಿ ಬೆಳೆಗೂ ಸಾಕಷ್ಟು ಹಾನಿಯಾಗಿದೆ. ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಬಾರಿ ಮಳೆ ಸುರಿದ ಪರಿಣಾಮವಾಗಿ ತರಕಾರಿಗಳು ಹೊಲದಲ್ಲೇ ಕೊಳೆತು ಹೋಗಿದ್ದು, ಈ ಕಾರಣಕ್ಕೆ ದರ ಏರಿಕೆಯಾಗಿದೆ ಎನ್ನುತ್ತಾರೆ ಬಹುತೇಕ ಮಾರಾಟಗಾರರು.

ದೀಪಾವಳಿ ಕಳೆದ ನಂತರವೂ ಕೆಲ ದಿನ ಬಾರಿ ಮಳೆ ಬಂದ ಕಾರಣ ತರಕಾರಿ ಬೆಳೆಗಾರರಿಗೆ ಏಟು ಬಿದ್ದಿದೆ ಎಂದು ತಿಳಿಸಿದ್ದಾರೆ.

‘ಜಿಲ್ಲೆಯಲ್ಲೂ ಮಳೆಯಿಂದಾಗಿ ಕೆಲವೆಡೆ ತರಕಾರಿ ಬೆಳೆ ಹಾನಿಗೀಡಾಗಿದೆ. ಈ ಕಾರಣಕ್ಕೆ ಸ್ಥಳೀಯವಾಗಿ ಸಿಗುವ ಅರಿವೆ, ಬದನೆ, ಬಿಳಿ ಬೆಂಡೆಕಾಯಿ ಮೊದಲಾದವುಗಳ ದರ ಕೂಡ ಏರಿಕೆಯಾಗಿದೆ’ ಎನ್ನುತ್ತಾರೆ ಉಡುಪಿಯ ತರಕಾರಿ ಮಾರಾಟಗಾರ ಜಯಾನಂದ.

‘ಸ್ಥಳೀಯವಾಗಿ ಬೆಳೆಯುವ ದೊಡ್ಡ ಅರಿವೆಯ ಒಂದು ದಂಟಿಗೆ ₹40 ಇದೆ. ಬಿಳಿ ಬೆಂಡೆಕಾಯಿ ದರ ಕೆ.ಜಿಗೆ ₹130ಕ್ಕೆ ಏರಿಕೆಯಾಗಿದೆ. ಈ ಬಾರಿ ಸ್ಥಳೀಯವಾಗಿ ಬೆಳೆಯುವ ಬಿಳಿ ಬೆಂಡೆಕಾಯಿ ಮಾರಾಟಕ್ಕೆ ಬರುವುದೇ ಅಪರೂಪವಾಗಿದೆ’ ಎಂದು ಅವರು ತಿಳಿಸಿದರು.

‘ಸಗಟು ಮಾರುಕಟ್ಟೆಯಲ್ಲಿ ತರಕಾರಿಗಳ ಆವಕ ಕಡಿಮೆಯಾಗಿದೆ ಇದು ಕೂಡ ಕೆಲವು ತರಕಾರಿಗಳ ಬೆಲೆ ವಿಪರೀತ ಏರಿಕೆಯಾಗಲು ಕಾರಣವಾಗಿದೆ’ ಎಂದು ಅವರು ವಿವರಿಸಿದರು.

ಉಡುಪಿಯ ಅಂಗಡಿಯೊಂದರಲ್ಲಿ ಮಾರಾಟಕ್ಕಿಟ್ಟಿದ್ದ ತರಕಾರಿ
ದೀಪಾವಳಿ ಹಬ್ಬದ ಸಂದರ್ಭಕ್ಕಿಂತಲೂ ಈಗ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದೆ ಹಾಗಿದ್ದರೂ ಕೊಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ.
– ಶ್ರೀನಿವಾಸ್, ಗ್ರಾಹಕ
ಕೆಲವು ತರಕಾರಿಗಳ ಬೆಲೆ ವಿಪರೀತ ಏರಿಕೆ ಆಗಿರುವುದರಿಂದ ಅವುಗಳನ್ನು ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.
– ಜಯಾನಂದ,, ತರಕಾರಿ ವ್ಯಾಪಾರಿ ಉಡುಪಿ

ಬಾಳೆಹಣ್ಣು ದರ ಅಲ್ಪ ಇಳಿಕೆ

ಹಬ್ಬದ ಸಂದರ್ಭಗಳಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಪೂಜೆಯ ವೇಳೆ ಈ ಬಾಳೆಹಣ್ಣನ್ನು ಬಳಸುವ ಕಾರಣ ಇದರ ದರವೂ ಏರಿಕೆಯಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆ.ಜಿಗೆ ₹120ರ ಆಸುಪಾಸಿನಲ್ಲಿದ್ದ ಏಲಕ್ಕಿ ಬಾಳೆಹಣ್ಣಿನ ದರ ಈಗ ಕೆ.ಜಿಗೆ ₹80ಕ್ಕೆ ಇಳಿಕೆಯಾಗಿದೆ. ನೇಂದ್ರ ಬಾಳೆ ಹಣ್ಣಿನ ದರ ಕೆ.ಜಿಗೆ ₹80 ಇದ್ದಿದ್ದು ₹60ಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.