ಉಡುಪಿ: ಶಾಸನಗಳು ಇತಿಹಾಸ ಮತ್ತು ಸಂಸ್ಕೃತಿ ಕುರಿತ ಮಾಹಿತಿ ಒದಗಿಸುವ ದಾಖಲೆಗಳಾಗಿವೆ. ಜಿಲ್ಲೆಯಲ್ಲಿ ಇಂತಹ ಅಮೂಲ್ಯ ಶಾಸನಗಳ ಸಂರಕ್ಷಣೆ ಆಗುತ್ತಿಲ್ಲ ಎಂಬುದು ದುಃಖದ ವಿಷಯ ಎಂದು ಸಂಶೋಧಕ ಬಿ. ಜಗದೀಶ ಶೆಟ್ಟಿ ಹೇಳಿದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಜಿಲ್ಲಾ 17ನೇ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಗುರುವಾರ ಹಮ್ಮಿಕೊಂಡಿದ್ದ ‘ನಮ್ಮ ಉಡುಪಿ’ ವಿಚಾರಗೋಷ್ಠಿಯಲ್ಲಿ ಶಾಸನ ಸಮೀಕ್ಷೆ ಕುರಿತು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಶಾಸನಗಳು ಇನ್ನೂ ಮಣ್ಣಿನಡಿಯಲ್ಲಿವೆ. ಈಚೆಗೆ ಕೆಲವು ಶಾಸನಗಳು ಪತ್ತೆಯಾಗುತ್ತಿವೆ. ಅವುಗಳ ಸಂರಕ್ಷಣೆ ಕೇವಲ ಸರ್ಕಾರದ ಮಾತ್ರ ಕೆಲಸವಲ್ಲ. ನಮ್ಮ ನಿಮ್ಮೆಲ್ಲರ ಕೆಲಸ ಎಂದು ಅವರು ತಿಳಿಸಿದರು.
ಶಾಸನಗಳ ಸಂರಕ್ಷಣೆಯಿಂದ ದಾಖಲೆಗಳು ಸ್ಥಿರವಾಗಿ ಉಳಿಯುತ್ತವೆ. ಈಗಾಗಲೇ ಜಿಲ್ಲೆಯಲ್ಲಿ ಸಿಕ್ಕಿರುವ ಶಾಸನಗಳನ್ನು ಶಾಸನ ಶಾಸ್ತ್ರ ಇಲಾಖೆಯು ಪಾಠದ ರೂಪದಲ್ಲಿ ಹೊರತಂದಿದೆ. ನಮ್ಮ ನಾಡಿನ ಸಂಸ್ಕೃತಿಯನ್ನು ತಿಳಿಸುವ ಅಮೂಲ್ಯ ಶಾಸನಗಳ ಸಂರಕ್ಷಣೆ ಆಗಬೇಕಾಗಿದೆ ಎಂದು ಹೇಳಿದರು.
ಉಡುಪಿ ಡಯೆಟ್‌ನ ಪ್ರಾಂಶುಪಾಲ ಅಶೋಕ್ ಕಾಮತ್ ಅವರು ‘ಶೈಕ್ಷಣಿಕ ಮನ್ವಂತರ’ ವಿಷಯವಾಗಿ ಮಾತನಾಡಿ, ಇಂದು ಜಿಲ್ಲೆಯ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿವೆ. ಇದು ಗಂಭೀರವಾಗಿ ಚಿಂತನೆ ನಡೆಸಬೇಕಾದ ವಿಚಾರ ಎಂದರು.
ಬೆರಳೆಣಿಕೆಯ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಬಿಟ್ಟರೆ ಬೇರೆ ಎಲ್ಲವೂ ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಯಾಗಿವೆ. ಈ ಮೂಲಕ ಸರ್ಕಾರಿ ವ್ಯವಸ್ಥೆಯಿಂದ ಖಾಸಗಿ ವ್ಯವಸ್ಥೆಗೆ ಗುಳೆ ಹೋಗುವ ಪ್ರಕ್ರಿಯೆ ನಿರಂತರವಾಗಿ ನಡೆದಿದೆ ಎಂದು ಹೇಳಿದರು.
‘ಚಲನಚಿತ್ರ ಸಾಧನೆ’ ವಿಚಾರವಾಗಿ ಮಾತನಾಡಿದ ಚಿತ್ರ ನಿರ್ದೇಶಕ ಯಾಕೂಬ್ ಕಾದರ್ ಗುಲ್ವಾಡಿ, ಕಳೆದ 10 ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕೆಲಸ ಉಡುಪಿಯವರಿಂದಲೇ ಆಗಿದೆ ಎಂದರು.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಚಿತ್ರೀಕರಣಗೊಂಡಿರುವ ‘ಕಾಂತಾರ’ ಸಿನಿಮಾವು ರಾಷ್ಟ್ರ ಮಟ್ಟದಲ್ಲಿ ಭಾರಿ ಜನಮನ್ನಣೆ ಗಳಿಸಿದೆ. ಇಲ್ಲಿನವರೇ ಆದ ನಟ ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಕೂಡ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ ಎಂದರು.
ಪ್ರತಿವರ್ಷ 25ಕ್ಕೂ ಹೆಚ್ಚು ಚಿತ್ರಗಳು ಕುಂದಾಪುರ ಪರಿಸರದಲ್ಲಿ ಚಿತ್ರೀಕರಣಗೊಳ್ಳುತ್ತಿವೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಅನುಕೂಲವಿದೆ ಎಂದು ಹೇಳಿದರು.
ಹಿಂದೆ ಸಿನಿಮಾ ಕ್ಷೇತ್ರವೆಂದರೆ ಬೆಂಗಳೂರಿನ ಗಾಂಧಿ ನಗರ ಎಂಬ ಭಾವನೆ ಇತ್ತು. ಇಂದು ಗಾಂಧಿ ನಗರ ಬಿಟ್ಟು ಬೇರೆ ಕಡೆಗಳಲ್ಲೂ ಸಿನಿಮಾ ಮಾಡಬಹುದಾಗಿದೆ. ದೊಡ್ಡ ಬಜೆಟ್‌ನ ಸಿನಿಮಾ ಮಾಡಬೇಕೆಂದಿಲ್ಲ. ಪ್ರತಿಭೆ ಮತ್ತು ಕನಸಿದ್ದರೆ ಸಣ್ಣ ಬಜೆಟ್‌ನಲ್ಲೂ ಅತ್ಯುತ್ತಮ ಸಿನಿಮಾ ನಿರ್ಮಿಸಬಹುದು ಎಂದರು.
ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೇಲ್‌ಬೆಟ್ಟು ಅವರು ‘ಪ್ರವಾಸೋದ್ಯಮ’ ವಿಚಾರವಾಗಿ ಮಾತನಾಡಿ, ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದರ ಜೊತೆಗೆ ಅವುಗಳ ಕುರಿತು ಪ್ರಚಾರ ಮಾಡಬೇಕು. ಹೊಸ ಪ್ರವಾಸಿ ತಾಣಗಳನ್ನು ಗುರುತಿಸುವ ಕೆಲಸವು ಆಗಬೇಕು ಎಂದು ಪ್ರತಿಪಾದಿಸಿದರು.
ಜ್ಯೋತಿ ಕೆ. ಪೂಜಾರಿ ಸ್ವಾಗತಿಸಿದರು. ಸಂಜೀವ ಜಿ. ನಿರೂಪಿಸಿದರು. ಪ್ರಶಾಂತ್ ಶೆಟ್ಟಿ ಸಾಸ್ತಾನ ವಂದಿಸಿದರು.
ಗಮನ ಸೆಳೆದ ಕವಿಗೋಷ್ಠಿ
ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ 16 ಮಂದಿ ಕವಿ ಕವಯತ್ರಿಯರು ತಮ್ಮ ಕವನಗಳನ್ನು ಪ್ರಸ್ತತಪಡಿಸಿದರು. ಬದುಕಿನ ಸಿಹಿಕಹಿ ಮೊಬೈಲ್ ಗೀಳು ತಾಯ್ತನ ಬಾಲ್ಯ ಅಮ್ಮನ ಅಂತರಂಗ ವಿಷಯಗಳು ಕವನಗಳಲ್ಲಿ ಒಡಮೂಡಿದ್ದವು. ರೂಪಕಾತ್ಮಕ ಕವಿತೆಗಳು ಕೇಳುಗರ ಕರತಾಡನಕ್ಕೆ ಸಾಕ್ಷಿಯಾದವು. ಜ್ಯೋತಿ ಗುರುಪ್ರಸಾದ್ ಸಮನ್ವಯಕಾರರಾಗಿದ್ದರು. ಪುಂಡಲೀಕ ಮರಾಠೆ ಸ್ವಾಗತಿಸಿದರು. ವಾಸಂತಿ ಅಂಬಲಪಾಡಿ ನಿರೂಪಿಸಿದರು. ಮಂಜುನಾಥ ಕೆ. ಶಿವಪುರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.