ADVERTISEMENT

ಉಡುಪಿ: ಸಮ್ಮೇಳನ ವೇದಿಕೆಯಲ್ಲಿ ಪ್ರಾಂಶುಪಾಲರಿಗೆ ಕುಲಪತಿ ಪಾಠ

​ಪ್ರಜಾವಾಣಿ ವಾರ್ತೆ
Published 1 ಮೇ 2025, 13:59 IST
Last Updated 1 ಮೇ 2025, 13:59 IST
ಪಿ.ಎಲ್‌. ಧರ್ಮ
ಪಿ.ಎಲ್‌. ಧರ್ಮ   

ಉಡುಪಿ: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಲಪತಿಗಳೊಂದಿಗೆ ವಿದ್ಯಾರ್ಥಿಗಳ ಮಾತುಕತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವಿವಿಧ ಸಮಸ್ಯೆ ಆಲಿಸಿದ ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪಿ.ಎಲ್‌. ಧರ್ಮ ಅವರು ಕಾಲೇಜು ಪ್ರಾಂಶುಪಾಲರ ಕಿವಿ ಹಿಂಡಿದರು.

ಅಂಕಪಟ್ಟಿ, ಸರ್ಟಿಫಿಕೇಟ್‌ಗಳಿಗಾಗಿ ಮಂಗಳೂರು ವಿ.ವಿಗೆ ಓಡಾಡಬೇಕಾಗಿದೆ. ಉಡುಪಿ ಪರಿಸರದಲ್ಲಿ ವಿ.ವಿ ಪ್ರಾದೇಶಿಕ ಕಚೇರಿ ತೆರೆದು ಅನುಕೂಲ ಮಾಡಿಕೊಡಬೇಕು ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳು ಕುಲಪತಿಗಳಿಗೆ ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪಿ.ಎಲ್‌. ಧರ್ಮ ಅವರು, ವಿ.ವಿ.ಯ ಪ್ರಾದೇಶಿಕ ಕಚೇರಿಯನ್ನು ಉಡುಪಿಯಲ್ಲಿ ಆರಂಭಿಸುವ ಅಗತ್ಯವಿಲ್ಲ. ವಿ.ವಿ. ಜೊತೆ ಸಂಯೋಜಿಸಿರುವ ಕಾಲೇಜುಗಳ ಪ್ರಾಂಶುಪಾಲರಿಗೇನು ಕೆಲಸ. ಅವರು ಇರುವುದು ವಿದ್ಯಾರ್ಥಿಗಳ ಕೆಲಸ ಮಾಡಲು. ಅಂಕಪಟ್ಟಿಗಾಗಿ ವಿದ್ಯಾರ್ಥಿಗಳು ಹಣ ಖರ್ಚು ಮಾಡಿಕೊಂಡು ವಿ.ವಿಗೆ ಬರುವ ಅಗತ್ಯವಿಲ್ಲ. ನಿಮ್ಮ ಪ್ರಾಂಶುಪಾಲರಿಗೆ ಪತ್ರ ಬರೆಯಿರಿ. ಅವರು ಸಿಬ್ಬಂದಿಯನ್ನು ಕಳುಹಿಸಿ ನಿಮ್ಮ ಕೆಲಸ ಮಾಡಿಕೊಡುತ್ತಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ADVERTISEMENT

ಪ್ರಾಂಶುಪಾಲರನ್ನು ನೇಮಕ ಮಾಡಿರುವುದು ವಿಶ್ವವಿದ್ಯಾಲಯದ ಅರ್ಧ ಆಡಳಿತ ಕೆಲಸವನ್ನು ಮಾಡಲು. ಅದನ್ನು ಮಾಡಲಾಗದಿದ್ದರೆ ಅವರು ಆ ಕುರ್ಚಿಯಲ್ಲಿ ಯಾಕೆ ಕುಳಿತುಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವೇಶಾತಿ ತರಾತುರಿಯಲ್ಲಿ ಮಾಡುತ್ತೀರಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವಾಗ ಯಾಕೆ ಸ್ಪಂದನ ಮಾಡುವುದಿಲ್ಲ ಎಂದು ಅವರು ಪ್ರಶ್ನಿಸಿದರು.

ಸಹಿ ಪಡೆಯಲು ಹೋಗುವ ವಿದ್ಯಾರ್ಥಿಗಳನ್ನು ಎರಡು, ಮೂರು ಗಂಟೆ ಸತಾಯಿಸುವ ಪ್ರಾಂಶುಪಾಲರ ಪಟ್ಟಿ ನಮ್ಮಲ್ಲಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವ ಮೂಡಲು ಸಾಧ್ಯವೇ? ಎಂದರು.

ಮಾತುಕತೆ ಕಾರ್ಯಕ್ರಮದಲ್ಲಿ ಡಾ.ಜಿ. ಶಂಕರ್‌ ಪ್ರಥಮ ದರ್ಜೆ ಕಾಲೇಜು, ಪೂರ್ಣಪ್ರಜ್ಞ ಪ್ರಥಮ ದರ್ಜೆ ಕಾಲೇಜು, ಎಂಜಿಎಂ ಕಾಲೇಜು, ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು, ಶಿರ್ವದ ಸೇಂಟ್‌ ಮೇರಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಶ್ವನಾಥ ಕರಬ ಸ್ವಾಗತಿಸಿದರು. ಸುಜಯೀಂದ್ರ ಹಂದೆ ನಿರೂಪಿಸಿದರು. ಪ್ರಶಾಂತ್‌ ಶೆಟ್ಟಿ ಸಾಸ್ತಾನ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.