ADVERTISEMENT

ಉಡುಪಿ: ಪೇಜಾವರ ಶ್ರೀಗಳಿಗೆ ಗುರುಪೂಜೆ ಸಲ್ಲಿಸಿದ ಉಮಾಭಾರತಿ

ಹರಿದ್ವಾರದ ಮಧ್ವಾಶ್ರಮದಲ್ಲಿ ಸ್ವಾಮೀಜಿಗಳನ್ನು ಭೇಟಿಮಾಡಿ ಗುರುನಮನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 14:57 IST
Last Updated 24 ಜುಲೈ 2021, 14:57 IST
ಹರಿದ್ವಾರದ ಮಧ್ವಾಶ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಗುರುಪೂಜೆ ನೇರವೇರಿಸಿದರು.
ಹರಿದ್ವಾರದ ಮಧ್ವಾಶ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಗುರುಪೂಜೆ ನೇರವೇರಿಸಿದರು.   

ಉಡುಪಿ: ಹರಿದ್ವಾರದ ಮಧ್ವಾಶ್ರಮದಲ್ಲಿ ಶನಿವಾರ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಗುರುಪೂಜೆ ಸಲ್ಲಿಸಿದರು.

ಪೇಜಾವರ ಖಾಶಾ ಮಠದ ಮಧ್ವಾಶ್ರಮದಲ್ಲಿರುವ ವಿಶ್ವೇಶತೀರ್ಥ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದ ಉಮಾಭಾರತಿ, ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ಪಾದಪೂಜೆ ಮಾಡಿ, ಫಲಪುಷ್ಪ ಸಹಿತ ಗುರುಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಚಿತ್ರಕೂಟ ಆಶ್ರಮದ ರಾಮಕಿಶನ್ ಜೀ ಮಹಾರಾಜ್ ಅವರಿಗೂ ಗುರುನಮನ ಸಲ್ಲಿಸಿದರು. ಉಮಾಭಾರತಿ ಅವರ ಸಂಕಲ್ಪದಂತೆ ಆಶ್ರಮದಲ್ಲಿ ವಿದ್ವಾನ್ ಶಶಾಂಕ ಭಟ್ಟರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಯಾಗ ನಡೆಯಿತು.

ADVERTISEMENT

ಇದೇವೇಳೆ ಗುರುಪೂರ್ಣಿಮೆ ಅಂಗವಾಗಿ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಶ್ರಮದಲ್ಲಿರುವ ಮಧ್ವಾಚಾರ್ಯರ ಶಿಲಾಪ್ರತಿಮೆಗೆ ವಿಶೇಷ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.

1992, ನ.17ರಂದು ನರ್ಮದಾ ನದಿಯ ಉಗಮಸ್ಥಳವಾದ ಮಧ್ಯಪ್ರದೇಶದ ಅಮರ ಕಂಟಕ್‌ನಲ್ಲಿ ಉಮಾಭಾರತಿ ವಿಶ್ವೇಶತೀರ್ಥ ಶ್ರೀಗಳಿಂದ ಮಂತ್ರದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದರು. ವಿಶ್ವೇಶ ತೀರ್ಥ ಶ್ರೀಗಳು ಬದುಕಿದ್ದಷ್ಟು ಕಾಲ ಪ್ರತಿ ಆಷಾಢ ಪೂರ್ಣಿಮೆಯಂದು ವಿಶೇಷ ಕಾರ್ಯಕ್ರಮ ಆಯೋಜಿಸಿ ಗುರುಭಕ್ತಿ ಸಲ್ಲಿಸುತ್ತಿದ್ದರು.

ಹಿಂದುಳಿದ ಸಮುದಾಯದ ನಾಯಕಿಯಾಗಿ ಗುರುತಿಸಲ್ಪಟ್ಟಿದ್ದ ಹಾಗೂ ಹಿಂದೂ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದ ಉಮಾ ಭಾರತಿ, ಅಯೋಧ್ಯಾ ರಾಮಜನ್ಮಭೂಮಿ ಆಂದೋಲನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ದೇಶದಾದ್ಯಂತ ಸಂಚರಿಸಿ ಹಿಂದೂ ಜನ ಜಾಗೃತಿಯ ಕೆಲಸ ಮಾಡಿದ್ದರು ಎಂದು ಪೇಜಾವರ ಶ್ರೀಗಳ ಆಪ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.