ADVERTISEMENT

ಬ್ರಹ್ಮಾವರ | ಉಪ್ಪೂರಿನಲ್ಲಿ ಬೀದಿನಾಯಿ ಆಶ್ರಯತಾಣ ಬೇಡ: ಗ್ರಾಮಸ್ಥರಿಂದ ಪ್ರತಿಭಟನೆ

ಮೂರು ಗ್ರಾಮಗಳ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 5:54 IST
Last Updated 7 ಫೆಬ್ರುವರಿ 2026, 5:54 IST
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು   

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಗ್ರಾಮದಲ್ಲಿ ಬೀದಿ ನಾಯಿ ಆಶ್ರಯತಾಣ ನಿರ್ಮಿಸುವುದನ್ನು ವಿರೋಧಿಸಿ ಉಪ್ಪೂರು, ಹಾವಂಜೆ ಮತ್ತು ಆರೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಸರ್ಕಾರಿ ವೈದ್ಯಕೀಯ ಕಾಲೇಜು, ತಾಲ್ಲೂಕು ಕ್ರೀಡಾಂಗಣ, ವಸತಿ ರಹಿತರಿಗೆ ನಿವೇಶನ ಸೇರಿದಂತೆ ಜನೋಪಯೋಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿರುವ ಪ್ರದೇಶದಲ್ಲಿ ಬೀದಿ ನಾಯಿ ಆಶ್ರಯತಾಣ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ’ ಎಂದು ಪ್ರತಿಭಟನಕಾರರು ಹೇಳಿದರು.

‘ಸುತ್ತಮುತ್ತ ಜನವಸತಿ ಇರುವ ಸುಮಾರು 9.9 ಎಕ್ರೆ ಪ್ರದೇಶದಲ್ಲಿ ಬೀದಿನಾಯಿ ಆಶ್ರಯತಾಣ ನಿರ್ಮಿಸುವ ನಿರ್ಧಾರ ವಿವೇಚನಾರಹಿತವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಆಶ್ರಯತಾಣ ನಿರ್ಮಿಸಿ ಅಂದಾಜು 17 ಸಾವಿರದಿಂದ 18 ಸಾವಿರ ಬೀದಿ ನಾಯಿಗಳನ್ನು ಬಿಡುವ ಮೂಲಕ ನೆಮ್ಮದಿಯಿಂದ ಬದುಕುವ ಜನರಿಗೆ ಸಂಕಷ್ಟ ತಂದೊಡ್ಡುವ ಪ್ರಯತ್ನ ಸರಿಯಲ್ಲ’ ಎಂದೂ ಹೇಳಿದರು.

‘ಆಶ್ರಯತಾಣ ನಿರ್ಮಿಸಲು ಗುರುತು ಮಾಡಿರುವ ಸ್ಥಳವು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 3 ಕಿ.ಮೀ. ಮತ್ತು ಮಣಿಪಾಲ ಭಾಗದಿಂದ 5 ಕಿ.ಮೀ. ದೂರದಲ್ಲಿದೆ. ಈ ಜಾಗದಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು. ‘ಸರ್ಕಾರ ತಕ್ಷಣ ಬೀದಿ ನಾಯಿಗಳ ಆಶ್ರಯತಾಣ ನಿರ್ಮಾಣ ನಿರ್ಧಾರವನ್ನು ಕೈಬಿಡಬೇಕು. ಜನವಸತಿ ಇಲ್ಲದ ಪ್ರದೇಶಕ್ಕೆ ಅದನ್ನುಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

‘ಇಡೀ ಜಿಲ್ಲೆಗೆ ಹಾಲು ಉತ್ಪಾದನೆ ಮಾಡುವ ನಂದಿನಿ ಹಾಲಿನ ಫ್ಯಾಕ್ಟರಿ ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ ಮತ್ತು ಆಶ್ರಯತಾಣದಿಂದಾಗಿ ಜಲಮಾಲಿನ್ಯ ಉಂಟಾಗುವ ಸಾಧ್ಯತೆಯೂ ಇದೆ, ಉಪ್ಪೂರು, ಹಾವಂಜೆ ಮತ್ತು ಆರೂರು ಪಂಚಾಯಿತಿಗಳಿಗೆ ಆಟದ ಮೈದಾನವಿಲ್ಲ. ಅದಕ್ಕೆ ಸರ್ಕಾರ ಇದುವರೆಗೆ ಸ್ಥಳ ಮಂಜೂರು ಮಾಡಿಲ್ಲ. ಆದರೆ ನಾಯಿಗಳ ಆಶ್ರಯತಾಣ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಸತೀಶ್‌ ಪೂಜಾರಿ ಕೀಳಂಜೆ, ಕುಮಾರ್‌ ಬೈಕಾಡಿ, ಧರ್ಮಗುರು ಲಾರೆನ್ಸ್‌ ಡಿಸೋಜ, ಭಾಸ್ಕರ ಶೆಟ್ಟಿ, ರಾಜು ಕುಲಾಲ್‌ ಮತ್ತಿತರರು ಭಾಗವಹಿಸಿದ್ದರು. ಶಾಸಕ ಯಶ್‌ಪಾಲ್‌ ಸುವರ್ಣ, ಕಾಂಗ್ರೆಸ್ ಮುಖಂಡ ಜಯಪ್ರಕಾಶ್‌ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮತ್ತಿರರು ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿದರು.

ಪ್ರತಿಭಟನೆಗೂ ಮುನ್ನ ಮಣಿಪಾಲದ ಕಾಯಿನ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿಗೆ ಪ್ರತಿಭಟನೆಕಾರರು ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.