ADVERTISEMENT

ವರಾಹಿ ಪಂಪ್ಡ್ ಸ್ಟೋರೇಜ್ ಜನವಿರೋಧಿ ಯೋಜನೆ: ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 5:15 IST
Last Updated 17 ಅಕ್ಟೋಬರ್ 2025, 5:15 IST
ಕೆ.ವಿಕಾಸ್ ಹೆಗ್ಡೆ
ಕೆ.ವಿಕಾಸ್ ಹೆಗ್ಡೆ   

ಕುಂದಾಪುರ: ‘ತಾಲ್ಲೂಕಿನ ಹೊಸಂಗಡಿ ಹಾಗೂ ಮಚ್ಚಟ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಕೇಂದ್ರ ಸರ್ಕಾರದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಅಂಗ ಸಂಸ್ಥೆಯಾದ ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್ ಸಂಸ್ಥೆಯೊಂದಿಗೆ ₹1,500 ಕೋಟಿ ವೆಚ್ಚದ ಒಪ್ಪಂದದಲ್ಲಿ 1,500 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ವರಾಹಿ ಪಂಪ್ಡ್ ಸ್ಟೋರೇಜ್ ಕೂಡ ಸೇರಿದೆ. ಇದು ವರಾಹಿ ನದಿ ಪಾತ್ರದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅತ್ಯಂತ ಅಪಾಯಕಾರಿ ಯೋಜನೆಯಾಗಲಿದೆ’ ಎಂದು ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಣಿ ಆಣೆಕಟ್ಟೆಯಿಂದ ಹರಿದು ಬಂದ ನೀರು ಹೊಸಂಗಡಿಯ ಕರ್ನಾಟಕ ವಿದ್ಯುತ್ ನಿಗಮದ ಜಲವಿದ್ಯುತ್ ಉತ್ಪಾದನಾ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಮಾಡಿದ ಬಳಿಕ, ವರಾಹಿ ನದಿಯ ಮೂಲಕ ಹರಿದು ಬಂದು ಹೋರಿಯಬ್ಬೆಯ ಅಣೆಕಟ್ಟುವಿನಲ್ಲಿ ಶೇಖರಣೆಯಾಗಿ, ಅಲ್ಲಿಂದ ವರಾಹಿ ನದಿ ಮತ್ತು ವರಾಹಿ ಕಾಲುವೆ ಮೂಲಕ ರೈತರ ಕೃಷಿ ಭೂಮಿಗೆ ಹರಿಯುತ್ತದೆ. ಇದೀಗ ವರಾಹಿ ಎಡ ದಂಡೆ ಕಾಲುವೆಯ ಕಾಮಗಾರಿ ಮುಗಿದಿದ್ದು, 8 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಹರಿಯುತ್ತಿದ್ದರೆ, ವರಾಹಿ ಏತ ನೀರಾವರಿ ಕಾಲುವೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಗಳ ಜೊತೆ ವರಾಹಿ ನದಿಯಲ್ಲಿ ಬಳ್ಕೂರು ಗ್ರಾಮದ ತನಕ ಸಾವಿರಾರು ರೈತರು ಕೃಷಿ ಪಂಪ್‌ಸೆಟ್ ಮೂಲಕ ತಮ್ಮ ಕೃಷಿ ಭೂಮಿಗಳಿಗೆ ನೀರನ್ನು ಬಳಸುತ್ತಿದ್ದಾರೆ. ಕುಂದಾಪುರ ಪುರಸಭೆ ಹಾಗೂ ಪರಿಸರದ 12ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗುವುದು ಇದೆ ವರಾಹಿ ನದಿಯಿಂದ ಎಂದಿದ್ದಾರೆ.

ADVERTISEMENT

ಈ ಪ್ರದೇಶದಲ್ಲಿ ಉದ್ದೇಶಿತ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ ಆದರೆ ವರಾಹಿ ನದಿಯಲ್ಲಿ ನೀರಿನ ಹರಿಯುವಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ರೈತರು, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ತಲೆದೋರಿ, ಕುಡಿಯುವ ಹಾಗೂ ಕೃಷಿ ಕಾರ್ಯದ ನೀರಿಗಾಗಿ ಹಾಹಾಕಾರ ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.

ಜನಪ್ರತಿನಿದಿನಗಳು ಕೂಡಲೇ ಎಚ್ಚೆತ್ತುಕೊಂಡು ಈ ಜನವಿರೋಧಿ ಯೋಜನೆ ಜಾರಿಯಾಗದಂತೆ ಕ್ರಮವಹಿಸಬೇಕು. ಸ್ಥಳೀಯರ ಮನವಿಯನ್ನು ಕಡೆಗಣಿಸಿ ಸರ್ಕಾರ ಈ ಯೋಜನೆ ಜಾರಿಗೆ ಮುಂದಾದರೆ, ಸಮಾನ ಮನಸ್ಕ ಸಂಘಟನೆಗಳ ಸಹಕಾರದಲ್ಲಿ ಉಗ್ರಹೋರಾಟ ಮಾಡುತ್ತೇವೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.